ಫೇಸ್‌ಬುಕ್‌ನ ‘ಫ್ರೀಬೇಸಿಕ್ಸ್’ಗೆ ಟ್ರಾಯ್ ಅಪಸ್ವರ

ಹೊಸದಿಲ್ಲಿ, ಡಿ.31: ಕೆಲವು ನಿರ್ದಿಷ್ಟ ಇಂಟರ್‌ನೆಟ್ ಸೇವೆಗಳನ್ನು ಗ್ರಾಹಕರಿಗೆ ಉಚಿತವಾಗಿ ನೀಡುವ ಫೇಸ್‌ಬುಕ್ ಸಂಸ್ಥೆಯ ‘ಫ್ರೀಬೇಸಿಕ್ಸ್’ ಯೋಜನೆಯನ್ನು ಬೆಂಬಲಿಸಿ 14.34 ಲಕ್ಷ ಜನರಿಂದ ಪ್ರತಿಕ್ರಿಯೆಗಳು ಬಂದಿದ್ದರೂ ಅದನ್ನೇ ಮಾನದಂಡವಾಗಿ ಮಾಡಿಕೊಂಡು ಇಂಟರ್‌ನೆಟ್ ಸೇವೆಗಳಿಗೆ ವಿಭಿನ್ನ ದರಗಳನ್ನು ನಿಗದಿಪಡಿಸುವ ಕುರಿತ ತನ್ನ ಪ್ರಸ್ತಾವಿತ ಯೋಜನೆಯ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯವಿಲ್ಲವೆಂದು ಭಾರತೀಯ ಟೆಲಿಕಾಂ ಪ್ರಾಧಿಕಾರ (ಟ್ರಾಯ್)ತಿಳಿಸಿದೆ.
‘‘ಇಂಟರ್‌ನೆಟ್ ಸೇವೆಗಳಿಗೆ ವಿಭಿನ್ನದ ರಗಳನ್ನು ನಿಗದಿಪಡಿಸುವ ಬಗ್ಗೆ ಟ್ರಾಯ್ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಕೇಳಿತ್ತು. ಜನತೆ, ತಾವು ಉಚಿತ ಮೂಲಭೂತ ಇಂಟರ್‌ನೆಟ್‌ಸೇವೆ (ಫ್ರೀ ಬೇಸಿಕ್ಸ್)ಗಳನ್ನು ಇಷ್ಟಪಡುವುದಾಗಿ ತಿಳಿಸಿದ್ದಾರೆ’’ ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್ ಶರ್ಮಾ ಹೇಳಿದರು.
ಆದರೆ ಇಂಟರ್‌ನೆಟ್ ಸೇವೆಗೆ ವಿಭಿನ್ನ ದರ ನಿಗದಿ ಬಗ್ಗೆ ತಾನು ಕೈಗೊಳ್ಳುವ ಯಾವುದೇ ನಿರ್ಧಾರವು ಫೇಸ್‌ಬುಕ್‌ನ ಫ್ರೀಬೇಸಿಕ್ಸ್ ಕಾರ್ಯಕ್ರಮದ ಮೇಲೆ ಪರಿಣಾಮ ಬೀರುವುದನ್ನು ಅವರು ಒಪ್ಪಿಕೊಂಡರು.
ಇಂಟರ್‌ನೆಟ್ ಸೇವೆಗಳಿಗೆ ವಿಭಿನ್ನ ದರಗಳನ್ನು ನಿಗದಿಪಡಿಸುವ ಕುರಿತು ಟ್ರಾಯ್ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಿತ್ತು. ಆದರೆ ಕೆಲವು ನಿರ್ದಿಷ್ಟ ವೆಬ್‌ಸೈಟ್‌ಗಳನ್ನು ಹಾಗೂ ಆಪ್ಲಿಕೇಶನ್‌ಗಳನ್ನು ಉಚಿತವಾಗಿ ಒದಗಿಸುವ ಟ್ರಾಯ್ ಯೋಜನೆಯ ಬಗ್ಗೆ ಜನರು ವ್ಯಾಪಕ ಸಂದೇಹಗಳನ್ನು ವ್ಯಕ್ತಪಡಿಸಿದ್ದರು. ಇಂಟರ್‌ನೆಟ್ ಚಳವಳಿಗಾರರ ಪ್ರಕಾರ ಈ ಮಾದರಿಯು ನೆಟ್ ನ್ಯೂಟ್ರಾಲಿಟಿ (ಮುಕ್ತ ಅಂತರ್ಜಾಲ)ಯ ಸಿದ್ಧಾಂತವನ್ನು ಉಲ್ಲಂಘಿಸುತ್ತದೆ ಹಾಗೂ ಎಲ್ಲಾ ಬಳಕೆದಾರರಿಗೆ ಮುಕ್ತ ಇಂಟರ್‌ನೆಟ್ ಸಂಪರ್ಕ ದೊರೆಯುವುದನ್ನು ನಿರ್ಬಂಧಿಸುತ್ತದೆ.
ತನ್ಮಧ್ಯೆ ಫೇಸ್‌ಬುಕ್‌ನ ‘ ಫ್ರೀಬೇಸಿಕ್ಸ್’ ಯೋಜನೆಗೂ ಭಾರತದಲ್ಲಿ ತೀವ್ರವಾದ ಟೀಕೆಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಫ್ರೀಬೇಸಿಕ್ಸ್ ಸೇವೆಯ ಷರತ್ತು ಹಾಗೂ ನಿಬಂಧನೆಗಳ ಕುರಿತ ಸಮಗ್ರ ವಿವರಗಳನ್ನು ತಾನು ಪರಿಶೀಲಿಸುವವರೆಗೂ ಆ ಯೋಜನೆಯನ್ನು ತಡೆಹಿಡಿಯುವಂತೆ ಟ್ರಾಯ್ ರಿಲಾಯನ್ಸ್ ಕಮ್ಯುನಿಕೇಶನ್ಸ್‌ನ್ನು ಕೇಳಿಕೊಂಡಿದೆ.







