ಜೇಟ್ಲಿ ವಿರುದ್ಧ ವಾಗ್ದಾಳಿಗೆ ಎಎಪಿಯಿಂದ ಕೊಹ್ಲಿಯ ಸಂದರ್ಶನ ಬಳಕೆ
ಜೇಟ್ಲಿ ವಿರುದ್ಧ ವಾಗ್ದಾಳಿಗೆ ಎಎಪಿಯಿಂದ ಕೊಹ್ಲಿಯ ಸಂದರ್ಶನ ಬಳಕೆ
ಹೊಸದಿಲ್ಲಿ, ಜ.1: ಆಮ್‌ಆದ್ಮಿ ಪಕ್ಷವು(ಎಎಪಿ) ಗುರುವಾರ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ವಿರುದ್ಧ ವಾಗ್ದಾಳಿ ನಡೆಸಲು ಭಾರತದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿಯವರ ಸಂದರ್ಶನವೊಂದನ್ನು ಉಪಯೋಗಿಸಿಕೊಂಡಿದೆ.
ಸಂದರ್ಶನದಿಂದ ಕೊಹ್ಲಿಯವರನ್ನುಲ್ಲೇಖಿಸಿದ ಎಎಪಿ, ಜೇಟ್ಲಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಡಿಡಿಸಿಎಯಲ್ಲಿ ದುರಾಡಳಿತ ನಡೆದಿತ್ತೆಂದು ಆರೋಪಿಸಿದೆ. ತನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಂತೆ ಪಕ್ಷವು ಡಿಡಿಸಿಎಗೆ ಸವಾಲು ಹಾಕಿದೆ.
ನಿನ್ನೆ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಡಿಡಿಸಿಎಯ ಪ್ರಭಾರ ಅಧ್ಯಕ್ಷ ಚೇತನ್ ಚೌಹಾಣ್, ಅದು ಕೊಹ್ಲಿಯವರಂತಹ ಆಟಗಾರರನ್ನು ಉತ್ಪಾದಿಸಿದೆ. ವಿರಾಟ್ ಕೊಹ್ಲಿ, ಜೇಟ್ಲಿಯವರಿಂದ ಶ್ಲಾಘನೆ ಪಡೆದಿದ್ದಾರೆಂದು ಹೇಳಿದ್ದರು.
ಆದರೆ, ಡಿ.18ರಂದು ಕೊಹ್ಲಿ ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ, ತನ್ನನ್ನು 14ರ ಕೆಳಹರೆಯದವರ ತಂಡಕ್ಕೆ ಸೇರಿಸಿಕೊಳ್ಳಲು ಲಂಚದ ಬೇಡಿಕೆಯಿಟ್ಟಿದ್ದರೆಂದು ಆರೋಪಿಸಿದ್ದರು. ಆದಾಗ್ಯೂ, ಈ ಆರೋಪವನ್ನು ಅವರ ತಂದೆ ಅಲ್ಲಗಳೆದಿದ್ದರು. ಆಗ ಜೇಟ್ಲಿ ಡಿಡಿಸಿಎಯ ಅಧ್ಯಕ್ಷ ರಾಗಿದ್ದರು. ತಂಡಗಳ ಆಯ್ಕೆಯಲ್ಲಿ ಅವ್ಯವಹಾರ ನಡೆಯುತ್ತಿತ್ತೆಂದು ಇದು ತೋರಿಸುತ್ತದೆಯೆಂದು ಎಎಪಿ ನಾಯಕ ಆಶುತೋಷ್ ಆರೋಪಿಸಿದ್ದಾರೆ.
‘‘ಮಾನ್ಯ ಜೇಟ್ಲಿಯವರೇ ಡಿಡಿಸಿಎಯಲ್ಲಿ ನಿಮ್ಮ ಕೈಕೆಳಗಿದ್ದ ಯಾರು 14ರ ಕೆಳ ಹರೆಯದವರ ತಂಡಕ್ಕೆ ಕೊಹ್ಲಿಯವರ ಆಯ್ಕೆಗಾಗಿ ಅವರ ತಂದೆಯ ಬಳಿ ‘ಲಂಚ’ ಕೇಳಿದ್ದರೆಂಬುದನ್ನು ದೇಶಕ್ಕೆ ತಿಳಿಸುವಿರಾ? ನಿಮ್ಮ ಕೈಕೆಳಗಿನ ಡಿಡಿಸಿಎ ಪದಾಧಿಕಾರಿಗಳ ಬೇಡಿಕೆ ಈಡೇರಿಸಲು ಅವರ ತಂದೆ ನಿರಾಕರಿಸಿದಾಗ ಕೊಹ್ಲಿಯವರನ್ನು ನಿರ್ಲಕ್ಷಿಸಿದುದೇಕೆಂದು ದಯವಿಟ್ಟು ವಿವರಿಸುವಿರಾ? ಡಿಡಿಸಿಎಯಲ್ಲಿ ನೀವು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಸಿಕ್ಕಾಪಟ್ಟೆ ಭ್ರಷ್ಟಾಚಾರ ನಡೆದಿದ್ದುದಕ್ಕಾಗಿ ಕನಿಷ್ಠ ಈಗಲಾದರೂ ರಾಷ್ಟ್ರದ ಕ್ಷಮೆಯನ್ನು ಯಾಚಿಸುವಿರಾ? ಎಂದು ಎಎಪಿ ಕೇಳಿದೆ.







