ದೇಶದ ಅರ್ಧದಷ್ಟು ಮಹಿಳೆಯರು ಇನ್ನೂ ಅನಕ್ಷರಸ್ಥರು!

ಹೊಸದಿಲ್ಲಿ, ಜ.1: ಹೆಚ್ಚುಕಡಿಮೆ ಅರ್ಧದಷ್ಟು ಹಿಂದು ಮತ್ತು ಮುಸ್ಲಿಮ್ ಮಹಿಳೆಯರು ಅನಕ್ಷರಸ್ಥರಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಇದು ತೀರ ಹೆಚ್ಚಾಗಿದೆ ಎನ್ನುವುದು ಇತ್ತೀಚಿನ ಜನಗಣತಿ ವರದಿಯಲ್ಲಿ ಬೆಳಕಿಗೆ ಬಂದಿದೆ.
ದೇಶಾದ್ಯಂತ ಶೇ.48.11(4.03 ಕೋಟಿ) ಮುಸ್ಲಿಮ್ ಮಹಿಳೆಯರು ಮತ್ತು ಶೇ.44.03(20.60 ಕೋಟಿ) ಹಿಂದು ಮಹಿಳೆಯರಿಗೆ ತಮ್ಮ ಹೆಸರನ್ನೂ ಬರೆಯಲು ಅಥವಾ ಓದಲು ಗೊತ್ತಿಲ್ಲ.
ಹೆಚ್ಚೆಚ್ಚು ಬಾಲಕಿಯರು ಶಾಲೆಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರಾದರೂ ಪುರುಷರ ಮತ್ತು ಮಹಿಳೆಯರ ಸಾಕ್ಷರತೆ ಮಟ್ಟದಲ್ಲಿ ಇನ್ನೂ ಅಗಾಧ ವ್ಯತ್ಯಾಸವಿರುವುದರಿಂದ ಇದರ ವ್ಯಾಪ್ತಿ ಇನ್ನಷ್ಟು ವಿಸ್ತಾರಗೊಳ್ಳಬೇಕಾಗಿದೆ ಎನ್ನುವುದನ್ನು ಜನಗಣತಿಯ ಅಂಕಿಅಂಶಗಳು ವಿಷದಪಡಿಸಿವೆ.
ಪುರುಷರಲ್ಲಿ ಸಾಕ್ಷರತೆ ಪ್ರಮಾಣ ಶೇ.69.75 ರಷ್ಟಿದ್ದರೆ,ಮಹಿಳೆಯರಲ್ಲಿ ಈ ಪ್ರಮಾಣ ಶೇ.55.97ರಷ್ಟಿದೆ.
ಧರ್ಮವಾರು ದತ್ತಾಂಶಗಳಂತೆ ಜೈನರು ಅತ್ಯಂತ ಹೆಚ್ಚಿನ ಸಾಕ್ಷರತೆ(ಶೇ.86.42)ಯನ್ನು ಹೊಂದಿದ್ದರೆ, ನಂತರದ ಸ್ಥಾನಗಳಲ್ಲಿ ಕ್ರೈಸ್ತರು(ಶೇ.74.34), ಬೌದ್ಧರು (ಶೇ.71.83), ಸಿಖ್ಖರು(ಶೇ.67.50), ಹಿಂದುಗಳು(ಶೇ.55.97) ಮತ್ತು ಮುಸ್ಲಿಮರು (51.89) ಇದ್ದಾರೆ. ಈ ಎಲ್ಲ ಪ್ರಕರಣಗಳಲ್ಲಿ ಮಹಿಳೆಯರ ಸಾಕ್ಷರತಾ ಪ್ರಮಾಣ ಆಯಾ ಧರ್ಮಗಳ ಪುರುಷರ ಸಾಕ್ಷರತಾ ಪ್ರಮಾಣಕ್ಕಿಂತ ಕಡಿಮೆಯೇ ಇದೆ.
8.39 ಕೋ.ಮುಸ್ಲಿಮ್ ಮಹಿಳೆಯರ ಪೈಕಿ 4.35 ಕೋ.ಮಹಿಳೆಯರು ಮತ್ತು 46.79 ಕೋ.ಹಿಂದು ಮಹಿಳೆಯರ ಪೈಕಿ ಶೇ.26.19ರಷ್ಟು ಮಹಿಳೆಯರು ಸಾಕ್ಷರರಾಗಿದ್ದಾರೆ.
ಮಹಿಳೆಯರಲ್ಲಿ ಜೈನರಲ್ಲಿ ಅತ್ಯಂತ ಹೆಚ್ಚಿನ ಸಾಕ್ಷರತೆ(ಶೇ.84.92) ಇದ್ದರೆ ನಂತರದ ಸ್ಥಾನದಲ್ಲಿ ಕ್ರೈಸ್ತ(ಶೇ.71.96)ರು ಇದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ಧರ್ಮಗಳ ಮಹಿಳೆಯರ ಸಾಕ್ಷರತಾ ಪ್ರಮಾಣ ನಗರ ಪ್ರದೇಶಗಳಿಗೆ ಹೋಲಿಸಿದರೆ ತುಂಬ ಕಡಿಮೆಯಿದೆ. ಅಲ್ಲಿ ಸರಾಸರಿ ಸಾಕ್ಷರತೆ ಶೇ.57.90ರಷ್ಟಿದ್ದು,ಇದು ಪುರುಷರಲ್ಲಿ ಶೇ.65.77 ಮತ್ತು ಮಹಿಳೆಯರಲ್ಲಿ ಶೇ.49.61ರಷ್ಟಿದೆ.
ಗ್ರಾಮೀಣರಲ್ಲಿ ಮುಸ್ಲಿಮ್ ಮಹಿಳೆಯರಲ್ಲಿ ಸಾಕ್ಷರತೆ ಪ್ರಮಾಣ ತೀರ ತಳಮಟ್ಟದಲ್ಲಿದೆ. 5.06 ಕೋ.ಮುಸ್ಲಿಮ್ ಮಹಿಳೆಯರ ಪೈಕಿ ಶೇ.54.43 ಮತ್ತು 33.26 ಕೋ.ಹಿಂದು ಮಹಿಳೆಯರ ಪೈಕಿ ಶೇ.51.32 ರಷ್ಟು ಮಹಿಳೆಯರಿಗೆ ಬರೆಯುವ ಅಥವಾ ಓದುವ ಸಾಮರ್ಥ್ಯವಿಲ್ಲ.
ಸಾಕ್ಷರತೆಯ ವಿಷಯದಲ್ಲಿ ನಗರ ಪ್ರದೇಶಗಳ ಮಹಿಳೆಯರ ಸ್ಥಿತಿ ಉತ್ತಮವಾಗಿದೆ. 18.16 ಕೋ.ನಗರವಾಸಿ ಮಹಿಳೆಯರಲ್ಲಿ ಶೇ.70.17ರಷ್ಟು ಮಹಿಳೆಯರು ಸಾಕ್ಷರರಾಗಿದ್ದಾರೆ. ನಗರ ಪ್ರದೇಶಗಳಲ್ಲಿ 13.52 ಕೋ.ಹಿಂದು ಮಹಿಳೆಯರ ಪೈಕಿ ಶೇ.71.44 ರಷ್ಟು ಮತ್ತು 3.33 ಕೋ.ಮುಸ್ಲಿಮ್ ಮಹಿಳೆಯರ ಪೈಕಿ ಶೇ.61.48 ಮಹಿಳೆಯರು ಸಾಕ್ಷರರಾಗಿದ್ದಾರೆ.







