ಛತ್ತೀಸ್‌ಗಡ: ಮಾವೋ ಉಪ ಕಮಾಂಡರ್ ಶರಣು
ರಾಯಪುರ, ಜ. 1: 24 ವರ್ಷದ ಮಾವೊ ಉಪ ಕಮಾಂಡರ್ ಛತ್ತೀಸ್‌ಗಡದ ದಾಂತೇವಾಡ ಜಿಲ್ಲೆಯಲ್ಲಿ ಇಂದು ಪೊಲೀಸರಿಗೆ ಶರಣಾದನು. ಆತನ ತಲೆಗೆ 8 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.
ಮಾವೋವಾದಿಗಳ ಮಿಲಿಟರಿ ಕಂಪೆನಿ 2ರ ಉಪ ಕಮಾಂಡರ್ ನಂದು ಯಾನೆ ಕೊರ್ಸ ಬುದ್ರಾಮ್ ಸ್ವಇಚ್ಛೆಯಿಂದ ಹಿರಿಯ ಪೊಲೀಸ್ ಅಧಿಕಾರಿಗಳ ಮುಂದೆ ಶರಣಾದನು ಎಂದು ದಾಂತೇವಾಡ ಪೊಲೀಸ್ ಸೂಪರಿಂಟೆಂಡೆಂಟ್ ಕಾಮ್‌ಲೋಚನ್ ಕಶ್ಯಪ್ ತಿಳಿಸಿದರು.
ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯ ಜಾಂಗ್ಲ ಗ್ರಾಮದ ನಿವಾಸಿ ನಂದು ಪಶ್ಚಿಮ ಬಸ್ತಾರ್ ವಿಭಾಗದಲ್ಲಿ ಸಕ್ರಿಯನಾಗಿದ್ದನು. 2007ರಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯನ್ನು ಸೇರಿದ ಬಳಿಕ ಆತ ಸಂಘಟನೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದನು ಎಂದು ಅವರು ನುಡಿದರು.
ಎಂಟು ಪೊಲೀಸರು ಸಾವಿಗೀಡಾದ 2008ರ ಮೋದಕ್‌ಪಾಲ್ ಹೊಂಚು ದಾಳಿ, 6 ಪೊಲೀಸರ ಸಾವಿಗೀಡಾದ 2008ರಲ್ಲಿ ಬಿಜಾಪುರದಲ್ಲಿ ನಡೆದ ಹೊಂಚು ದಾಳಿ ಮತ್ತು ಮೂರು ಭದ್ರತಾ ಸಿಬ್ಬಂದಿಯ ಸಾವಿಗೆ ಕಾರಣವಾದ ನುಕನ್‌ಪಾಲ್ ಎನ್‌ಕೌಂಟರ್ ಮುಂತಾದ ಹಲವಾರು ಭಯಾನಕ ನಕ್ಸಲ್ ದಾಳಿಗಳಲ್ಲಿ ನಂದು ಶಾಮೀಲಾಗಿದ್ದನು ಎಂದು ಆರೋಪಿಸಲಾಗಿದೆ.
ತಾನು ಮತ್ತು ಓರ್ವ ಮಹಿಳಾ ನಕ್ಸಲ್ ಲೇಕಮ್ ಸನ್ನಿ ಪರಸ್ಪರರನ್ನು ಮದುವೆಯಾಗಲು ಬಯಸಿದ್ದು, ಇದಕ್ಕೆ ತಮ್ಮ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ನಂದು ಹೇಳುತ್ತಾರೆ. ಪ್ರೇಮ ವ್ಯವಹಾರಗಳಿಗಾಗಿ ಹಿರಿಯ ಮಾವೋವಾದಿ ನಾಯಕನೊಬ್ಬ ಆತನನ್ನು ಕೊಲ್ಲಲು ಪ್ರಯತ್ನಿಸಿದಾಗ ಶಿಬಿರದಿಂದ ತಪ್ಪಿಸಿಕೊಂಡು ಬಂದಿದ್ದಾನೆ ಎಂದು ಪೊಲೀಸ್ ಸೂಪರಿಂಟೆಂಡೆಂಟ್ ತಿಳಿಸಿದರು.
ಬೆಂಬಲ ಹಣವಾಗಿ ಶರಣಾದ ನಕ್ಸಲ್‌ಗೆ 10,000 ರೂ. ಮೊತ್ತವನ್ನು ನೀಡಲಾಗಿದೆ. ಛತ್ತೀಸ್‌ಗಡ ಸರಕಾರದ ನೀತಿಯಂತೆ, ಆತನಿಗೆ ಅಗತ್ಯ ನೆರವನ್ನು ನೀಡಲಾಗುವುದು ಎಂದು ಕಶ್ಯಪ್ ಹೇಳಿದರು.





