ಜಮ್ಮು-ಕಾಶ್ಮೀರದಲ್ಲಿ 2 ಧ್ವಜ ಉಪಯೋಗಿಸುವ ಆದೇಶ ಅಮಾನತು
ಜಮ್ಮು, ಜ.1: ಜಮ್ಮು-ಕಾಶ್ಮೀರದಲ್ಲಿ ಎಲ್ಲ ಸರಕಾರಿ ಕಚೇರಿಗಳು ಹಾಗೂ ಕಾರುಗಳಲ್ಲಿ ರಾಷ್ಟ್ರಧ್ವಜ ಹಾಗೂ ರಾಜ್ಯದ ಧ್ವಜಗಳೆರಡನ್ನೂ ಉಪಯೋಗಿಸಲೇಬೇಕೆಂಬ ನ್ಯಾಯಾಲಯವೊಂದರ ಆದೇಶವನ್ನು ಇಂದು ಅಮಾನತುಗೊಳಿಸಲಾಗಿದೆ.
ಮೂರು ಲಂಬ ಪಟ್ಟಿಗಳೊಂದಿಗೆ ಕೆಂಪು-ಬಿಳಿ ಬಣ್ಣಗಳು ಹಾಗೂ ನೇಗಿಲಿನ ಚಿತ್ರ ಹೊಂದಿರುವ ರಾಜ್ಯದ ಧ್ವಜವನ್ನು ಎಲ್ಲ ಸರಕಾರಿ ಆಸ್ತಿಗಳ ಮೇಲೆ ತ್ರಿವರ್ಣ ಧ್ವಜದೊಂದಿಗೆ ಹಾರಿಸಬೇಕೆಂಬ ಆದೇಶವನ್ನು ಜಮ್ಮು-ಕಾಶ್ಮೀರ ಹೈಕೋರ್ಟ್ ಡಿ.18ರಂದು ನೀಡಿತ್ತು. ಏಕಸದಸ್ಯ ಪೀಠದ ಈ ಆದೇಶಕ್ಕೆ ಇಂದು ಹೈಕೋರ್ಟ್‌ನ ವಿಭಾಗೀಯ ಪೀಠವೊಂದು ತಡೆಯಾಜ್ಞೆ ನೀಡಿದೆ ಅಥವಾ ಅಮಾನತುಪಡಿಸಿದೆ.
ಹಿಂದಿನ ಆದೇಶವನ್ನು ರಾಜ್ಯದಲ್ಲಿ ಪಿಡಿಪಿಯೊಂದಿಗೆ ಮೈತ್ರಿ ಸರಕಾರ ನಡೆಸುತ್ತಿರುವ ಬಿಜೆಪಿ ನಾಯಕರೊಬ್ಬರು ಪ್ರಶ್ನಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದ ಹೊಸ ಸರಕಾರದ ಪ್ರತಿಜ್ಞಾವಿಧಿ ಸಮಾರಂಭದಲ್ಲಿ (2015, ಮಾ.1) ಎರಡೂ ಧ್ವಜಗಳಿದ್ದವು. ಎಲ್ಲ ಸಚಿವರೂ ಜಮ್ಮು-ಕಾಶ್ಮೀರದ ಸಂವಿಧಾನ ಹೆಸರಲ್ಲಿ ಪ್ರತಿಜ್ಞೆ ಸ್ವೀಕರಿಸಿದ್ದರು.
ಕೇವಲ ಜಮ್ಮು-ಕಾಶ್ಮೀರ ಮಾತ್ರ ತನ್ನದೇ ಆದ ರಾಜ್ಯದ ಧ್ವಜವನ್ನು ತ್ರಿವರ್ಣ ಧ್ವಜದೊಂದಿಗೆ ಹಾರಿಸಲು ಅನುಮತಿ ಹೊಂದಿದೆ.
ರಾಜ್ಯದ ಧ್ವಜವನ್ನು ಹಾರಿಸಬೇಕೆಂದಿದ್ದ ನ್ಯಾಯಮೂರ್ತಿ ತನ್ನ ನಿರ್ಧಾರ, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಹಾಗೂ ರಕ್ಷಣೆಯಂತಹ ಕೆಲವು ಕ್ಷೇತ್ರಗಳ ಹೊರತಾಗಿ ತನ್ನದೇ ಆದ ಕಾನೂನುಗಳನ್ನು ರಚಿಸಲು ಅವಕಾಶ ನೀಡಿರುವ ಸಂವಿಧಾನದ 370ನೆ ವಿಧಿಯನ್ನಾಧರಿಸಿದೆ ಎಂದಿದ್ದರು.
ರಾಷ್ಟ್ರ ಹಾಗೂ ರಾಜ್ಯದ ಧ್ವಜಗಳೆರಡನ್ನೂ ಉಪಯೋಗಿಸಬೇಕೆಂದು ರಾಜ್ಯದ ಸಂವಿಧಾನ ಕಡ್ಡಾಯ ಮಾಡಿದೆ. ಸರಕಾರವು ಮಾರ್ಚ್‌ನಲ್ಲಿ ಎರಡೂ ಧ್ವಜಗಳನ್ನು ಉಪಯೋಗಿಸಬೇಕೆಂದು ನೋಟಿಸ್ ಹೊರಡಿಸಿತ್ತು. ಅದು ಬಿಜೆಪಿ ಹಾಗೂ ಪಿಡಿಪಿಗಳ ನಡುವೆ ಬಿರುಕು ಮೂಡಿಸಿತ್ತು. ರಾಜ್ಯದ ಸಂವಿಧಾನವು ಎರಡೂ ಧ್ವಜಗಳನ್ನು ಉಪಯೋಗಿಸುವುದಕ್ಕೆ ಅವಕಾಶ ನೀಡಿದೆ. ಆದುದರಿಂದ ವಿಶೇಷ ಸೂಚನೆ ಅಗತ್ಯವಿಲ್ಲವೆಂಬ ನೆಲೆಯಲ್ಲಿ ನೋಟಿಸನ್ನು ಹಿಂದೆ ಪಡೆಯುವ ಮೂಲಕ ಈ ಬಿರುಕಿಗೆ ತೇಪೆ ಹಾಕಲಾಗಿತ್ತು.
ರಾಜ್ಯದ ಧ್ವಜವೂ ರಾಷ್ಟ್ರ ಧ್ವಜದಂತೆಯೇ ಸಮಾನ ಪಾವಿತ್ರ ಹಾಗೂ ಸ್ಥಾನಮಾನ ಹೊಂದಿದೆ. ಆದುದರಿಂದ ಈ ಪಾವಿತ್ರ ಹಾಗೂ ಸ್ಥಾನಮಾನವನ್ನು ಯಾವುದೇ ಬೆಲೆ ತೆತ್ತಾದರೂ ಕಾಪಾಡಿಕೊಳ್ಳಬೇಕೆಂದು ನಾಲ್ಕು ವರ್ಷಗಳ ಹಿಂದೆ ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಆದೇಶ ನೀಡಿದ್ದರು.





