ವಾದ್ರಾ ಭೂ ವ್ಯವಹಾರ ರದ್ದುಗೊಳಿಸಿದ್ದ ಐಎಎಸ್ ಅಧಿಕಾರಿ ಖೇಮ್ಕಾಗೆ ಭಡ್ತಿ
ವಾದ್ರಾ ಭೂ ವ್ಯವಹಾರ ರದ್ದುಗೊಳಿಸಿದ್ದ ಐಎಎಸ್ ಅಧಿಕಾರಿ ಖೇಮ್ಕಾಗೆ ಭಡ್ತಿ
ಹರ್ಯಾಣ ಸರಕಾರದಿಂದ ಹೊಸವರ್ಷದ ಕೊಡುಗೆ
ಚಂಡಿಗಡ.ಜ.1: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರ ಅಕ್ರಮ ಭೂ ವ್ಯವಹಾರವನ್ನು ಬಯಲಿಗೆಳೆದು ಸುದ್ದಿಯಾಗಿದ್ದ ಹರ್ಯಾಣ ಸರಕಾರದ ಕಾರ್ಯದರ್ಶಿ ಹಿರಿಯ ಐಎಎಸ್ ಅಧಿಕಾರಿ ಅಶೋಕ ಖೇಮ್ಕಾ ಅವರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಭಡ್ತಿ ನೀಡುವ ಮೂಲಕ ಖಟ್ಟರ್ ಸರಕಾರವು ಹೊಸವರ್ಷದ ಉಡುಗೊರೆಯನ್ನು ಕೊಟ್ಟಿದೆ.
ಮುಖ್ಯ ಕಾರ್ಯದರ್ಶಿ ಡಿ.ಎಸ್.ದೇಸಿ ನೇತೃತ್ವದ ಇಲಾಖಾ ಭಡ್ತಿ ಸಮಿತಿಯು ಈ ಸಂಬಂಧ ನಿರ್ಧಾರವನ್ನು ಕೈಗೊಂಡಿದೆ ಎಂದು ಮೂಲಗಳು ತಿಳಿಸಿದವು.
2012ರಲ್ಲಿ ಹರ್ಯಾಣ ಭೂಮಿ ಬಲವರ್ಧನೆ ಇಲಾಖೆಯ ಮಹಾ ನಿರ್ದೇಶಕರಾಗಿದ್ದ ಖೇಮ್ಕಾ ವಾದ್ರಾ ಮತ್ತು ಡಿಎಲ್‌ಎಫ್ ನಡುವಿನ ಭೂ ವ್ಯವಹಾರವನ್ನು ರದ್ದುಗೊಳಿಸುವ ಮೂಲಕ ದೇಶದ ಗಮನವನ್ನು ಸೆಳೆದಿದ್ದರು. ಇಷ್ಟೇ ಅಲ್ಲ, ಇದಕ್ಕೆ ಮೂರು ದಿನಗಳ ಮುನ್ನವಷ್ಟೇ ವಾದ್ರಾ 2005ರ ಬಳಿಕ ನಡೆಸಿದ್ದ ಭೂ ವ್ಯವಹಾರಗಳಲ್ಲಿ ಮುದ್ರಾಂಕ ಶುಲ್ಕವನ್ನು ಪಾವತಿಸಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲೂ ಅವರು ಪಲ್ವಾಲ್,ಫರೀದಾಬಾದ್,ಮೇವಾತ್ ಮತ್ತು ಗುಡ್ಗಾಂವ್ ಜಿಲ್ಲಾಧಿಕಾರಿಗಳಿಗೆ ನಿರ್ದೇಶ ನೀಡಿದ್ದರು. ಖೇಮ್ಕಾರ ನಡೆಯಿಂದ ಅಸಮಾಧಾನಗೊಂಡಿದ್ದ ಆಗಿನ ಹೂಡಾ ಸರಕಾರವು ಭೂ ವ್ಯವಹಾರವನ್ನು ಅಕ್ರಮವಾಗಿ ರದ್ದುಗೊಳಿಸಿದ್ದ ಆರೋಪದಲ್ಲಿ ಅವರ ವಿರುದ್ಧ ಚಾರ್ಜ್‌ಶೀಟ್ ದಾಖಲಿಸಿತ್ತು.
ಎರಡು ತಿಂಗಳ ಹಿಂದೆ ರಾಜ್ಯದ ಬಿಜೆಪಿ ಸರಕಾರವು ಈ ಚಾರ್ಜ್‌ಶೀಟ್‌ನ್ನು ಕೈಬಿಟ್ಟಿತ್ತು.





