ನಾಳೆ ಪುಣೆಯಲ್ಲಿ ಬೃಹತ್ ಆರೆಸ್ಸೆಸ್ ಸಮಾವೇಶ
ಮುಂಬೈ, ಜ. 1: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ರವಿವಾರ ಪುಣೆ ಸಮೀಪ ಬೃಹತ್ ಸಮಾವೇಶವೊಂದನ್ನು ಏರ್ಪಡಿಸಿದೆ. ಇದು ಆರೆಸ್ಸೆಸ್ ಏರ್ಪಡಿಸಿದ ದಶಕದ ಅತಿ ದೊಡ್ಡ ಬಲಪ್ರದರ್ಶನವಾಗುವ ನಿರೀಕ್ಷೆಯಿದೆ.
ಪುಣೆಯ ಹೊರವಲಯದ ಹಿಂಜೆವಾಡಿ ಐಟಿ ಪಾರ್ಕ್ ಸಮೀಪದ 450 ಎಕರೆ ಸ್ಥಳದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸುಮಾರು 1.5 ಲಕ್ಷ ಆರೆಸ್ಸೆಸ್ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.
ಸಮಾವೇಶವನ್ನು ಉದ್ದೇಶಿಸಿ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್ ಮಾತನಾಡಲಿದ್ದಾರೆ. ಪಶ್ಚಿಮ ಮಹಾರಾಷ್ಟ್ರದ ಜಿಲ್ಲೆಗಳಾದ ಪುಣೆ, ನಾಶಿಕ್, ಅಹ್ಮದ್‌ನಗರ, ಸತಾರ, ಸಾಂಗ್ಲಿ, ಸೋಲಾಪುರ ಮತ್ತು ಕೊಲ್ಹಾಪುರಗಳ ಕಾರ್ಯಕರ್ತರು ಈಗಾಗಲೇ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಈ ಸಮಾವೇಶ ಇತ್ತೀಚಿನ ವರ್ಷಗಳಲ್ಲೇ ಆರೆಸ್ಸೆಸ್‌ನ ಅತ್ಯಂತ ಡೊಡ್ಡ ಸಮಾವೇಶವಾಗಿರಲಿದೆ ಎಂದು ಸಮಾವೇಶದ ಸಮನ್ವಯಕಾರ ಸಾರಂಗ್ ವಾಬ್ಳೆ ಹೇಳಿದರು.
ಸಮಾವೇಶದ ಪ್ರಮುಖ ಉದ್ದೇಶ ನಾಗರಿಕ ಸಮಾಜಗಳು ಮತ್ತು ದೇಶದ ಸಮಾಜ ಸೇವಾ ಸಂಘಟನೆಗಳನ್ನು ತಲುಪುವುದಾಗಿದೆ ಎಂದರು.
‘‘ಸಮಾವೇಶದ ಉದ್ದೇಶ ಸಮಾಜದಲ್ಲಿ ಸಂಘವನ್ನು ಧನಾತ್ಮಕ ಶಕ್ತಿಯಾಗಿ ಬಿಂಬಿಸುವುದಾಗಿದೆ ಹಾಗೂ ಹೆಚ್ಚಿನ ಜನರಿಗೆ ತಲುಪುವುದಾಗಿದೆ. ಸಂಘದ ಅನುಯಾಯಿಗಳು ಅನುಸರಿಸಿದ ಆದರ್ಶಗಳು ಮತ್ತು ಶಿಸ್ತನ್ನು ಪ್ರಮುಖವಾಗಿ ಎತ್ತಿಹಿಡಿಯಲು ನಾವು ಬಯಸಿದ್ದೇವೆ’’ ಎಂದು ಅವರು ನುಡಿದರು.





