ಜ.4ರಿಂದ ನಾಲ್ಕನೆ ಸುತ್ತಿನ ಮಿಷನ್ ಇಂದ್ರಧನುಷ್

ಉಡುಪಿ, ಜ.1: ಜ.4ರಿಂದ 12ರವರೆಗೆ ನಡೆ ಯುವ ರಾಷ್ಟ್ರೀಯ ಮಿಷನ್ ಇಂದ್ರಧನುಷ್ ಲಸಿಕಾ ಕಾರ್ಯಕ್ರಮದ ನಾಲ್ಕನೆ ಸುತ್ತನ್ನು ಜಿಲ್ಲೆಯಲ್ಲಿ ಯುಶಸ್ವಿಯಾಗಿ ನಡೆಸಲು ತಹಶೀಲ್ದಾರ್ ಹಾಗೂ ಇತರ ಇಲಾಖಾ ಮುಖ್ಯಸ್ಥರ ಸಹಕಾರ ಪಡೆಯುವಂತೆ ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾ ಡುತ್ತಿದ್ದರು. ಇತರ ಸ್ವಯಂಸೇವಾ ಸಂಸ್ಥೆಗಳ ಸಹಕಾರ ಪಡೆಯುವ ಬಗ್ಗೆ ವಿವಿಧ ಸಲಹೆ ಸೂಚನೆ ಗಳನ್ನು ನೀಡಿದ ಅವರು, ಜ.4ರಿಂದ ನಡೆಯುವ ಇಂದ್ರಧನುಷ್ ಲಸಿಕಾ ಕಾರ್ಯ ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊ ಳಿಸಲು 4ನೆ ಸುತ್ತಿನ ಕ್ರಿಯಾಯೋಜನೆ ವರದಿಯನ್ನು ಕೂಡಲೇ ನೀಡುವಂತೆ ತಾಲೂಕು ಆರೋಗ್ಯಾಧಿಕಾರಿಗೆ ಸೂಚನೆ ನೀಡಿದರು.
ಲಸಿಕೆ ವಂಚಿತ 0-2 ವರ್ಷದೊಳಗಿನ ಮಕ್ಕಳನ್ನು ಮತ್ತು ಗರ್ಭಿಣಿ ಮಹಿಳೆಯರನ್ನು ಲಸಿಕೆ ಪಡೆಯಲು ಪ್ರೇರೇಪಿಸುವುದು ಹಾಗೂ ಗುರುತಿಸುವುದು ಮುಖ್ಯ. ಇದಕ್ಕಾಗಿ ಆರೋಗ್ಯ ಸಹಾಯಕರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎಂದರು. ನಗರ ಪ್ರದೇಶಗಳಲ್ಲಿ ಲಸಿಕೆ ಹಾಕುವುದು ಸವಾಲಾಗಿದ್ದು, ಹೊಸ ಬಡಾವಣೆ, ವಲಸೆ ಕಾರ್ಮಿಕರು ವಾಸಿಸುವ ಪ್ರದೇಶ, ಕಟ್ಟಡ ಕಾಮಗಾರಿ, ರಸ್ತೆ ಕಾಮಗಾರಿ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಫಲಾನುಭವಿಗಳ ಮನವೊಲಿಸಿ ಸಮೀಪದ ಲಸಿಕಾ ಕೇಂದ್ರಕ್ಕೆ ಕರೆತರಲು ಹೆಚ್ಚಿನ ಪ್ರಯತ್ನ ಮಾಡಿ ಎಂದು ಇಲಾಖಾ ವೈದ್ಯರಿಗೆ ಸೂಚನೆ ನೀಡಿದರು.
ಜ.3ರಿಂದ 12ರವರೆಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಸಿಇಒ ಮೆಸ್ಕಾಂಗೆ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರೋಹಿಣಿ, ತಾಲೂಕು ವೈದ್ಯಾಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಇಂದ್ರಧನುಷ್ ರಾಷ್ಟ್ರೀಯ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ಎಂಟು ಮಾರಕ ರೋಗಗಳಿಗೆ ಲಸಿಕೆ ನೀಡಲಾಗುತ್ತಿದ್ದು, 0ಯಿಂದ 2 ವರ್ಷದ ಮಕ್ಕಳು ಮತ್ತು ಗರ್ಭಿಣಿ ಸ್ತ್ರೀಯರಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಮಿಷನ್ ಇಂದ್ರಧನುಷ್ ಯಶಸ್ವಿಯಾಗಿಸಲು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕು ಸಮನ್ವಯ ಸಮಿತಿ ಸಭೆ ಕರೆಯಲು ಹಾಗೂ ಎಲ್ಲಾ ಸಂಘ, ಸಂಸ್ಥೆ ಹಾಗೂ ಇಲಾಖಾ ಮುಖ್ಯಸ್ಥರ ನೆರವು ಪಡೆಯಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಸೂಚಿಸಿದರು.







