‘ನ್ಯಾಟೊ ವಿಸ್ತರಣೆ ಒಂದು ಬೆದರಿಕೆ’

ಮಾಸ್ಕೊ, ಜ.1: ನ್ಯಾಟೊದ ವಿಸ್ತರಣಾ ಕಾರ್ಯವು ರಾಷ್ಟ್ರಕ್ಕೆ ಒಂದು ಬೆದರಿಕೆಯಾಗಿದೆ ಎಂದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸಹಿ ಹಾಕಿರುವ ನವೀಕೃತ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ದಾಖಲೆಯೊಂದು ಬಣ್ಣಿಸಿದೆ.
ರಶ್ಯದ ದೇಶೀಯ ಹಾಗೂ ಅಂತಾರಾಷ್ಟ್ರೀಯ ನೀತಿಯು ಅಮೆರಿಕ ಹಾಗೂ ಅದರ ಮೈತ್ರಿ ರಾಷ್ಟ್ರಗಳಿಂದ ಪ್ರತಿರೋಧ ಕಾರ್ಯಾಚರಣೆಗೆ ಪ್ರಚೋದನೆ ನೀಡಿದೆ ಎಂದು ದಾಖಲೆ ವಿವರಿಸಿದೆ. ಮಾತ್ರವಲ್ಲದೆ ಈ ರಾಷ್ಟ್ರಗಳು ಜಾಗತಿಕ ವ್ಯವಹಾರಗಳ ಮೇಲೆ ಹಿಡಿತ ಸಾಧಿಸಲು ತೀವ್ರ ಯತ್ನ ನಡೆಸಿವೆ ಎಂದು ಅದು ಆರೋಪಿಸಿದೆ. 2014ರಲ್ಲಿ ಯುಕ್ರೇನ್‌ನಲ್ಲಿ ಭುಗಿಲೆದ್ದ ಸಂಘರ್ಷವು ರಶ್ಯ ಹಾಗೂ ಪಶ್ಚಿಮದ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಹದಗೆಡಿಸಲು ಕಾರಣವಾಗಿದೆ ಎಂದು ಅದು ಹೇಳಿದೆ. ನ್ಯಾಟೊ ವಿಸ್ತರಣೆಯನ್ನು ಟೀಕಿಸಿರುವ ಸರಣಿ ಪತ್ರಗಳಲ್ಲಿ ಪುತಿನ್ ಸಹಿ ಹಾಕಿರುವ ಈ ದಾಖಲೆಯು ತೀರಾ ಇತ್ತೀಚಿನದಾಗಿದೆ ಎಂದು ವರದಿಗಳು ತಿಳಿಸಿವೆ.
Next Story