ಮಹತ್ವದ ಹೆಜ್ಜೆಯಿಟ್ಟ ಕಾರ್ಕಳ ಪುರಸಭೆ: ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಎರೆಗೊಬ್ಬರ ತಯಾರಿ
ಕಾರ್ಕಳ, ಜ.1: ಕಾರ್ಕಳ ಪುರಸಭೆಯು ‘ಕಸದಿಂದ ರಸ’ ಎನ್ನುವ ಯೋಜನೆಗೆ ಚಾಲನೆ ನೀಡಿದ್ದು, ತ್ಯಾಜ್ಯವಿಲೇವಾರಿ ಘಟಕದಲ್ಲಿ ಇನ್ನೊಂದು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರಸ್ತುತ ಎರೆಹುಳು ಗೊಬ್ಬರ ತಯಾರಿ ವಿಧಾನಕ್ಕೆ ಚಾಲನೆಯನ್ನು ನೀಡಿದೆ.
13ನೆ ಹಣಕಾಸು ಯೋಜನೆಯಡಿಯಲ್ಲಿ 40 ಲಕ್ಷ ರೂ. ಮೊತ್ತವನ್ನು ಇದಕ್ಕಾಗಿ ಕಾದಿರಿಸಿದ್ದು, ಪ್ರತ್ಯೇಕ ಎರಡು ಘಟಕಗಳನ್ನು ತೆರೆಯಲಾಗಿದೆ. ಕಸ ವಿಲೇವಾರಿಯಲ್ಲಿ ಕಾರ್ಕಳ ಪುರಸಭೆ ಇತರ ಪುರಸಭೆಗಳಿಗೆ ಮಾದರಿಯಾಗಿದ್ದು, ಉತ್ಪಾದಿತ ಕಸವನ್ನು ವಿಲೇವಾರಿ ಮಾಡುವ ಸಂದರ್ಭ ಅನ್ಯ ಬಳಕೆ/ ಯೋಜನೆಗಳಿಗೆ ಬಳಸಲು ಸಾಧ್ಯ ವಿದೆಯೇ ಎಂಬುವುದನ್ನು ಅವಲೋಕಿಸಿ ಇಂತಹ ಹೆಜ್ಜೆಗಳನ್ನು ಇಡುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಬಯೋಗ್ಯಾಸ್ ಘಟಕವನ್ನು ತೆಳ್ಳಾರು ಶಬರಿ ಆಶ್ರಮದಲ್ಲಿ ಆರಂಭಿಸಲು ಮುಂದಾದ ಪುರಸಭೆ, ಪ್ರಸ್ತುತ ಕರಿಯಕಲ್ಲಿನ ಬಳಿಯಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಎರೆಹುಳು ಗೊಬ್ಬರ ತಯಾರಿ ಯೋಜನೆಗೆ ಮುಂದಡಿಯಿಟ್ಟಿದೆ. ಪುರಸಭೆಯು ಈ ಘಟಕದ ನಿರ್ವಹಣೆಯನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ತಮ ರೀತಿಯ ಫಲಿತಾಂಶ ಬಂದಲ್ಲಿ ಅದನ್ನು ಟೆಂಡರ್ ಮೂಲಕ ವಹಿಸಿಕೊಡುವ ಯೋಜನೆ ಪುರಸಭೆ ಮುಂದಿದೆ. ದಿನಕ್ಕೆ ನಾಲ್ಕು ಜನ ಕಾರ್ಮಿಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದರಿಂದ ವರ್ಷಕ್ಕೆ 15ರಿಂದ 20 ಲಕ್ಷ ರೂ. ಲಾಭ ಸಿಗಬೇಕಾಗಿದೆ. ಒಳ್ಳೆಯ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಯಶಸ್ಸು ಸಾಧ್ಯ. ಗೊಬ್ಬರವನ್ನು ಕೃಷಿಕರಿಗೆ ಶೇ.25 ರಿಯಾಯಿತಿ ದರದಲ್ಲಿ ನೀಡುವ ಯೋಜನೆಯಿದೆ. ಅದರಲ್ಲಿ ಉತ್ಪಾದಿತ ಕೊಳಚೆ ನೀರು ಕೂಡಾ ಕೃಷಿಗೆ ಯೋಗ್ಯ ಎನ್ನುತ್ತಾರೆ ಪುರಸಭೆ ಪರಿಸರ ಅಭಿಯಂತರ ಮದನ್. ವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಘಟಕವನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಈ ಯೋಜನೆ ಯಶಸ್ವಿಯಾಗಿಲ್ಲ ಎನ್ನುವುದನ್ನು ಮನಗಂಡು, ಎರೆಗೊಬ್ಬರ ಘಟಕಕ್ಕೆ ಸಂಬಂಧಿಸಿದಂತೆ ಹರೀಶ್ ಜೋಶಿ ಎಂಬವರ ಮಾರ್ಗದರ್ಶನ ಪಡೆಯಲಾಗಿದೆ ಎನ್ನುತ್ತಾರೆ ಪುರಸಭೆ ಅಭಿಯಂತರ ದುರ್ಗಾಪ್ರಸಾದ್.
ನಮ್ಮದು ಇನ್ನೊಂದು ಹೆಜ್ಜೆ
ಕಸವನ್ನು ಬಳಕೆ ಮಾಡುವ ಮೂಲಕ ಅದರಿಂದ ಲಾಭ ಪಡೆಯಲು ಸಾಧ್ಯ ಎನ್ನುವುದನ್ನು ಮನಗಂಡು ನಾವು ಇನ್ನೊಂದು ಹೆಜ್ಜೆ ಇಟ್ಟಿದ್ದೇವೆ. ಬಯೋಗ್ಯಾಸ್ ಘಟಕ ನಿರ್ಮಾಣ ಹಂತದಲ್ಲಿದ್ದರೆ, ಎರೆಗೊಬ್ಬರ ಘಟಕವು ಕಾರ್ಯಾರಂಭಿಸಲು ಸಿದ್ಧವಾಗಿದೆ. ಯಶಸ್ಸು ಕಂಡಲ್ಲಿ ಇದನ್ನು ಪುರಸಭೆ ವ್ಯಾಪ್ತಿಯ ಇನ್ನಿತರ ಕಡೆಗೆ ವಿಸ್ತರಿಸಲಿದ್ದೇವೆ ಎನ್ನುತ್ತಾರೆ ಪುರಸಭಾಧ್ಯಕ್ಷೆ ರಹ್ಮತ್ ಎನ್. ಶೇಖ್.
ಘಟಕಗಳಿಗೆ ತ್ಯಾಜ್ಯ ಮಿಶ್ರಣವನ್ನು ಅಳವಡಿಸಿಕೊಂಡ ಬಳಿಕ 21 ದಿನಗಳ ನಂತರ ಈ ಹುಳಗಳನ್ನು ಬಿಡಲಾಗುವುದು. ಒಂದು ಎರೆಹುಳ ದಿನಕ್ಕೆ ನಾಲ್ಕು ಕೆ.ಜಿ. ತ್ಯಾಜ್ಯವನ್ನು ತಿನ್ನುತ್ತದೆ. ಬಳಿಕ ಅದರ ವಿಸರ್ಜನೆಯೇ ಈ ಗೊಬ್ಬರವಾಗಿದೆ. ಒಂದು ವರ್ಷದಲ್ಲಿ ಮೂರು ಬಾರಿ ರೀ-ವರ್ಕ್ ಮಾಡಲಾಗುತ್ತದೆ. ಒಂದು ಬಾರಿ ರೀ-ವರ್ಕ್ ಮಾಡುವುದರಿಂದ 40 ಟನ್ ಗೊಬ್ಬರ ಸಿಗುತ್ತದೆ. ಪುರಸಭೆ ವ್ಯಾಪ್ತಿಯಲ್ಲಿ 10 ಟನ್‌ಗಳಷ್ಟು ಈಗಾಗಲೇ ತ್ಯಾಜ್ಯ ಸಿಗುತ್ತಿದ್ದು, ಅದರಿಂದ 5ರಿಂದ 6 ಟನ್‌ಗಳು ಹಸಿ ಕಸ ಹಾಗೂ ಈ ಪಿಟ್‌ಗಳಿಗೆ ಬೇಕಾದ ರೀತಿಯ ಕಸ ಸಿಗುತ್ತದೆ. ಕಸಗಳನ್ನು ನೇರವಾಗಿ ಪಿಟ್‌ಗಳಿಗೆ ಹಾಕದೆ, ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೇರ್ಪಡಿಸಿ ನಂತರ ಪಿಟ್‌ಗಳಿಗೆ ಹಾಕುವ ವಿಧಾನವನ್ನು ಅನುಸರಿಸುತ್ತಿದ್ದೇವೆ.
-ರಾಯಪ್ಪ, ಮುಖ್ಯಾಧಿಕಾರಿ, ಕಾರ್ಕಳ ಪುರಸಭೆ.
ಎರೆಹುಳಗಳಿಗಾಗಿ ನೀರು, ಶುದ್ಧ, ತಂಪು ಗಾಳಿ ಒದಗಿಸಬೇಕು. ಆ ನಿಟ್ಟಿನಲ್ಲಿ ಎಲ್ಲ ಪಿಟ್‌ಗಳಿಗೆ ಸ್ಪ್ರಿಂಕ್ಲರ್‌ಗಳನ್ನು ಅಳವಡಿಸಲಾಗಿದೆ. ಈ ರೀತಿ ಮಾಡುವುದರಿಂದ ಎರೆಹುಳಗಳು ಸ್ಪಂದನಾ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇರುವೆಗಳು ಬಾರದಂತೆ ಎಚ್ಚರಿಕೆ ವಹಿಸಬೇಕು. ಅದರಿಂದಾಗಿ ಸುತ್ತಲೂ ಸದಾ ನೀರಿನ ವ್ಯವಸ್ಥೆಯನ್ನು ಕಾಪಾಡಿಕೊಳ್ಳಬೇಕಾಗಿದೆ.
-ಮದನ್, ಪುರಸಭೆ ಪರಿಸರ ಅಭಿಯಂತರ.