ಸಭೆ ಕೋರಂ ಕೊರತೆಯಿಂದ ಮಂಗಳೂರು ತಾಪಂ ಮುಂದೂಡಿಕೆ
ಮಂಗಳೂರು, ಜ.2: ಕೋರಂ ಕೊರತೆ ಇದ್ದ ಕಾರಣ ಮಂಗಳೂರು ತಾಲೂಕು ಪಂಚಾಯತ್ ಸಾಮಾನ್ಯ ಸಭೆಯನ್ನು ಅಧ್ಯಕ್ಷರ ಅನುಮತಿ ಮೇರೆಗೆ ಮುಂದೂಡಿರುವುದಾಗಿ ತಾಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ತಿಳಿಸಿದರು.
ಇಂದು ಅಪರಾಹ್ನ 2:30ಕ್ಕೆ ಮಂಗಳೂರು ತಾಲೂಕು ಪಂಚಾಯತ್ ಸದಸ್ಯರ ಸಾಮಾನ್ಯ ಸಭೆ ತಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ರಜನಿ ಅಧ್ಯಕ್ಷತೆಯಲ್ಲಿ ನಿಗದಿಯಾಗಿತ್ತು. ಆದರೆ ಅಪರಾಹ್ನ 3:15 ಕಳೆದರೂ ಸಭಾಂಗಣದಲ್ಲಿ ಒಟ್ಟು 38 ಸದಸ್ಯರಲ್ಲಿ ಕೇವಲ 17 ಮಂದಿ ಮಾತ್ರ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರಂ ಇಲ್ಲದೆ ಸಭೆ ನಡೆಸಲು ಸಾಧ್ಯವಿಲ್ಲ ಎಂದು ಕಾರ್ಯನಿರ್ವಹಣಾಧಿಕಾರಿ ತಿಳಿಸಿ ಅನಿರ್ಧಿಷ್ಟ ಕಾಲದವರೆಗೆ ಮುಂದೂಡಿದರು.
ನಾನು ಪರಿಶಿಷ್ಟ ಜಾತಿಗೆ ಸೇರಿದವಳಾದ ಕಾರಣ ಸಭೆ ನಡೆಸಲು ಅವಕಾಶ ನಿರಾಕರಣೆ: ತಾಪಂ ಅಧ್ಯಕ್ಷೆ ರಜನಿ ಆರೋಪ
‘‘ನಾನು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯಾಗಿರುವ ಕಾರಣದಿಂದ ನನ್ನ ಅಧ್ಯಕ್ಷತೆಯಲ್ಲಿ ಸತತವಾಗಿ ಸಭೆ ನಡೆಸಲು ಅವಕಾಶ ನೀಡಲಿಲ್ಲ. ನಾನು ಅಧ್ಯಕ್ಷೆಯಾಗಿ ಆಯ್ಕೆಯಾದ ಬಳಿಕ ನಡೆದ 8 ಸಭೆಗಳಲ್ಲಿಯೂ ನನಗೆ ಸಮರ್ಪಕವಾಗಿ ಕಲಾಪ ನಡೆಸಲು ಅವಕಾಶ ನೀಡಲಿಲ್ಲ. ಈ ಬಾರಿಯೂ ನಮ್ಮ ತಾಪಂ ಉಪಾಧ್ಯಕ್ಷರ ಸಹಿತ ಬಿಜೆಪಿಯಿಂದ ಆಯ್ಕೆಯಾದ ಸದಸ್ಯರು ನನಗೆ ಸಭೆ ನಡೆಸಲು ಸಹಕಾರ ನೀಡಲಿಲ್ಲ. ಈ ಹಿಂದೆ ಅಧ್ಯಕ್ಷರ ವಿವೇಚನೆಯಡಿ ವಿನಿಯೋಗಿಸುತ್ತಿದ್ದ ಶೇ.10ರ ನಿಧಿಯನ್ನು ನಾನು ಅಧ್ಯಕ್ಷೆಯಾದ ಬಳಿಕ ನನ್ನ ವಿವೇಚನೆಯ ಪ್ರಕಾರ ವಿನಿಯೋಗಿಸಲು ಅವಕಾಶ ನೀಡಲಿಲ್ಲ. ನಾವು ಅಧಿಕಾರ ನಡೆಸುವುದನ್ನು ಸಹಿಸದೆ ಈ ರೀತಿಯ ವರ್ತನೆ ತೋರುತ್ತಿದ್ದಾರೆ’’ ಎಂದು ತಾಪಂ ಅಧ್ಯಕ್ಷೆ ರಜನಿ ಸಭೆ ಮುಂದೂಡಿದ ಬಳಿಕ ಸುದ್ದಿಗಾರರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ತಾಪಂ ಉಪಾಧ್ಯಕ್ಷ ಪ್ರಕಾಶ್, ‘‘ಅಧ್ಯಕ್ಷರ ಬಗ್ಗೆ ನಮಗೆ ಅಂತಹ ಯಾವುದೆ ಭಾವನೆ ಇಲ್ಲ. ಆ ಕಾರಣದಿಂದ ಸಭೆಗೆ ನಾವು ವಿರೋಧ ವ್ಯಕ್ತಪಡಿಸಿಲ್ಲ. ಅಧ್ಯಕ್ಷರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಕೋಟೆಕಾರು ಗ್ರಾಪಂಗೆ ಅನುದಾನ ನೀಡುವ ವಿಚಾರ ಗುದ್ದಾಟಕ್ಕೆ ಕಾರಣ
ಮಂಗಳೂರು ತಾಪಂನ ಕಳೆದ ಸಭೆಯಲ್ಲಿ ಕೋಟೆಕಾರು ಗ್ರಾಮ ಪಂಚಾಯತ್‌ಗೆ ಅನುದಾನ ನೀಡುವ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವಿನ ಸದಸ್ಯರ ನೇರ ಜಗಳ ವ್ಯಕ್ತವಾಗಿ ಮತಕ್ಕೆ ಹಾಕಲಾಗಿತ್ತು. ಇದರಲ್ಲಿ ಕಾಂಗ್ರೆಸ್ ಸದಸ್ಯರು ಮೇಲುಗೈ ಸಾಧಿಸಿದ್ದರು. ಈ ಮುಸುಕಿನ ಗುದ್ದಾಟ ಎರಡನೆ ಸಭೆಯಲ್ಲಿ ಯೂ ವ್ಯಕ್ತವಾದ ಪರಿಣಾಮವಾಗಿ ಇಂದು ಬಿಜೆಪಿ ಸದಸ್ಯರು ಸಭೆಯಲ್ಲಿ ಹಾಜರಾಗದೆ ಪರೋಕ್ಷವಾಗಿ ಪ್ರತಿಭಟಿಸಿದ್ದರು. ಕೋಟೆಕಾರು ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಕಾರಣ ತಾಲೂಕು ಪಂಚಾಯತ್ ಅನುದಾನ ಹಂಚಿಕೆ ಮಾಡುವುದು ಸರಿಯಲ್ಲ ಎಂದು ಆಡಳಿತ ಪಕ್ಷದ ಸದಸ್ಯರು ವಾದ ಮಂಡಿಸಿದಾಗ ಕಳೆದ ಸಭೆಯಲ್ಲಿ ವಾಗ್ವಾದ ನಡೆದು ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 37 ಸದಸ್ಯರಲ್ಲಿ 21 ಸದಸದಸ್ಯರು ಆಡಳಿತ ಪಕ್ಷದ ನಿಲುವನ್ನು ಬೆಂಬಲಿಸಿದ್ದರು. ಅಂತಿಮವಾಗಿ ಕೋಟೆಕಾರು ಕ್ಷೇತ್ರಕ್ಕೆ ಕಾಯ್ದಿರಿಸಿದ ಅನುದಾನವನ್ನು ಅಧ್ಯಕ್ಷರ ವಿವೇಚನ ಬಿಟ್ಟು ಕೊಡುವುದಾಗಿ ನವೆಂಬರ್ 17ರಂದು ನಡೆದ ಸಭೆಯಲ್ಲಿ ತೀರ್ಮಾನವಾಗಿತ್ತು. ಆದರೆ ಈ ಬಗ್ಗೆ ಅತೃಪ್ತರಾಗಿದ್ದ ಬಿಜೆಪಿ ಸದಸ್ಯರು ಇಂದು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರು ಕೋರಂ ಕೊರತೆಗೆ ಕಾರಣವಾದ ಅಂಶವನ್ನು ತಿಳಿಸಿದ್ದಾರೆ.







