ತೊಟ್ಟಿಲಗುರಿ ಸಂತ್ರಸ್ತರ ಪುನರ್ವಸತಿ ಸಮುಚ್ಚಯ ಉದ್ಘಾಟನೆ

ಮಂಗಳೂರು, ಜ.2: ದ.ಕ. ಜಿಪಂ, ಮಂಗಳೂರು ತಾಪಂ ಹಾಗೂ ಬಜ್ಪೆ ಗ್ರಾಪಂಗಳ ಸಹಭಾಗಿತ್ವದಲ್ಲಿ ಬಜ್ಪೆ ಗ್ರಾಮದ ತೊಟ್ಟಿಲಗುರಿ ಸಂತ್ರಸ್ತರಿಗೆ ಪೊರ್ಕೋಡಿಯಲ್ಲಿ ನಿರ್ಮಿಸಲಾಗಿರುವ ಪುನರ್ವಸತಿ ಸಮುಚ್ಚಯ ಹಾಗೂ ಕುಡಿಯುವ ನೀರಿನ ಟ್ಯಾಂಕ್ ಉದ್ಘಾಟನೆ ಶನಿವಾರ ನಡೆಯಿತು. ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಫಲಾ ನುಭವಿಗಳಿಗೆ ಮನೆಗಳ ಕೀಗಳನ್ನು ಹಸ್ತಾಂತರಿಸಿದರು. ವಸತಿ ಸಮುಚ್ಚಯ ಹಾಗೂ ಕುಡಿಯುವ ನೀರಿನ ಸ್ಥಾವರವನ್ನು ಉದ್ಘಾಟಿಸಿ ಮಾತನಾಡಿದ ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಫಲಾನುಭವಿಗಳು ಪೊರ್ಕೋಡಿ ಯಲ್ಲಿ ನಿವೇಶನಕ್ಕೆ ಆರಂಭದಲ್ಲಿ ವಿರೋಧ ವ್ಯಕ್ತಪಡಿ ಸಿದ್ದರೂ ಬಳಿಕ ಅವರನ್ನು ಒಪ್ಪಿಸಿ, ಖಾಸಗಿ ಹಾಗೂ ಸರಕಾರಿ ಸಹಭಾಗಿತ್ವದಲ್ಲಿ ಸುಂದರ ಮನೆಗಳೊಂದಿಗೆ ಮಾದರಿ ಕಾಲನಿಯನ್ನು ನಿರ್ಮಿಸಲಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಕಾಲನಿಯಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆಗೆ ಕೆಐಒಸಿಎಲ್ ಮುಂದಾಗುವಂತೆ ಮನವಿ ಮಾಡಿದರಲ್ಲದೆ, ಕಾಲನಿಯ ಸುತ್ತಮುತ್ತ ಸ್ವಚ್ಛತೆಗಾಗಿ 1 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದರು. ಕೆಐಒಸಿಎಲ್ ಅಧ್ಯಕ್ಷ ಮಲಯ ಚಟರ್ಜಿ, ಜನರಲ್ ಮ್ಯಾನೇಜರ್ ಭೋಬ್‌ರಾಜ್ ಜೆಹ್ರನ್, ಜಿಪಂ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮೀನಾಕ್ಷಿ, ಮಂಗಳೂರು ತಾಪಂ ಅಧ್ಯಕ್ಷೆ ರಜನಿ, ಜಿಪಂ ಯೋಜನಾ ನಿರ್ದೇಶಕ ಲೋಕೇಶ್, ಬಜ್ಪೆ ಗ್ರಾಪಂ ಅಧ್ಯಕ್ಷೆ ರೋಸಿ ಮಥಾಯಿಸ್, ಉಪಾಧ್ಯಕ್ಷ ಮುಹಮ್ಮದ್ ಶರೀಫ್, ಮೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ಲೋರ್ದು ಸ್ವಾಮಿ, ಎಂಜಿನಿಯರ್ ಪ್ರಭಾಕರ್, ದಲಿತ ಮುಖಂಡ ಚಂದಪ್ಪ, ಫಲಾನುಭವಿ ಸುಜಾತಾ ಉಪಸ್ಥಿತರಿದ್ದರು.
ತಾಪಂ ಇಒ ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ಜಿಪಂ ಉಪ ಕಾರ್ಯದರ್ಶಿ ಎನ್.ಆರ್.ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೆ ನಿರ್ಮಾಣಕ್ಕೆ ಸಹಕರಿಸಿದವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ತೊಟ್ಟಿಲಗುರಿಯಲ್ಲಿದ್ದ 18 ಕುಟುಂಬಗಳಲ್ಲಿ 15ಕ್ಕೆ ಪೊರ್ಕೋಡಿ ಪುನರ್ವಸತಿ ಕಾಲನಿಯಲ್ಲಿ ಮನೆ ನಿರ್ಮಾ ಣವಾಗಿದ್ದು, ಇನ್ನುಳಿದ ಮೂರು ಕುಟುಂಬಗಳಲ್ಲಿ ಎರಡು ಕುಟುಂಬಗಳು ಇಲ್ಲಿಗೆ ಬರಲು ನಿರಾಕರಿಸಿವೆ. ಮತ್ತೊಂದು ಕುಟುಂಬದಲ್ಲಿ ವೃದ್ಧೆಯೊಬ್ಬರು ಮಾತ್ರ ಇರುವುದರಿಂದ ಅವರು ಬೇರೆ ಮನೆಯಲ್ಲಿ ವಾಸವಾಗಿದ್ದಾರೆ.
ಮಾದರಿ ಪುನರ್ವಸತಿ ಸಮುಚ್ಚಯ
3.50 ಲಕ್ಷ ರೂ. ವೆಚ್ಚದಲ್ಲಿ ವಿವಿಧ ರೀತಿಯ ಅನುದಾನ, ಸಹಾಯಧನ ಹಾಗೂ ಕೊಡುಗೆಗಳ ಮೂಲಕ ನಿರ್ಮಾಣವಾಗಿರುವ ಈ ಪುನರ್ವಸತಿ ಸಮುಚ್ಚಯದ ತಾರಸಿ ಮನೆಗಳು ಟೈಲ್ಸ್ ನೆಲದೊಂದಿಗೆ ಹಾಲ್, ಬೆಡ್‌ರೂಂ, ಅಡುಗೆ ಮನೆ ಹಾಗೂ ಶೌಚಾಲಯ ಮತ್ತು ಬಚ್ಚಲುಮನೆಯನ್ನು ಒಳಗೊಂಡಿದೆ. ಬಜ್ಪೆ ಗ್ರಾಮದ ಪೊರ್ಕೋಡಿಯಲ್ಲಿ 3.43 ಎಕರೆ ಜಮೀನನ್ನು ಜಿಲ್ಲಾಧಿಕಾರಿಯ ತುರ್ತು ಆದೇಶದ ಮೇರೆಗೆ ಮಂಜೂರಾತಿ ಮಾಡಿಸಿಕೊಂಡು ಗ್ರಾಪಂ ವತಿಯಿಂದ 3.75 ಲಕ್ಷ ರೂ. ವೆಚ್ಚದಲ್ಲಿ ಸಮತಟ್ಟು ಮಾಡಿಸಿ ನಿವೇಶನ ರಚಿಸಿ ಫಲಾನುಭವಿಗಳಿಗೆ ವಿತರಿಸಲಾಗಿದೆ. ಇಲ್ಲಿ 15 ಮನೆಗಳು ಸುವ್ಯವಸ್ಥಿತವಾಗಿ ನಿರ್ಮಾಣವಾಗಿದ್ದು, ಕುಡಿಯುವ ನೀರು ಪೊರೈಕೆಗಾಗಿ ಪೈಪ್‌ಲೈನ್ ವ್ಯವಸ್ಥೆ ಮಾಡಲಾಗಿದೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪೈಪ್ ಕಾಂಪೋಸ್ಟ್ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸುಮಾರು 1.15 ಕೋ.ರೂ. ವೆಚ್ಚದಲ್ಲಿ ಮಾದರಿ ಪುನರ್ವಸತಿ ಸಮುಚ್ಚಯವಾಗಿ ಇದು ರೂಪುಗೊಂಡಿದೆ.
ತಡವಾಗಿಯಾದರೂ ಸಿಕ್ಕಿತು ನೆಮ್ಮದಿ
2013ರ ಜೂನ್ 18ರಂದು ಬಜ್ಪೆ ತೊಟ್ಟಿಲಗುರಿ ಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನಾಲ್ವರು ಮೃತ ಪಟ್ಟಿದ್ದಲ್ಲದೆ, 18 ಕುಟುಂಬಗಳು ನಿರ್ವಸಿತ ವಾಗಿತ್ತು. ಮೊದಲೇ ತೀರಾ ಸಂಕಷ್ಟ ಪರಿಸ್ಥಿತಿಯಲ್ಲಿ ಜೀವಿಸುತ್ತಿದ್ದ ಆ ಕುಟುಂಬಗಳು ಆ ಅವಘಡದ ಬಳಿಕ 3 ವರ್ಷಗಳ ಕಾಲ ಒಂದೇ ಶೌಚಾಲಯ, ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸಲು, ಸ್ನಾನ ಮಾಡಲು ಪರದಾಡುವ ಪರಿಸ್ಥಿತಿಯಲ್ಲಿ ಜೀವಿಸ ಬೇಕಾಗಿತ್ತು. ಇದೀಗ ಸ್ವಂತ ಹಾಗೂ ಸುಂದರವಾದ ಮನೆಗಳು ನಿರ್ಮಾಣವಾಗಿರುವುದು ನೆಮ್ಮದಿ ದೊರಕಿದಂತಾಗಿದೆ.
- ಬಜ್ಪೆ ಗ್ರಾಪಂ ಸದಸ್ಯೆ ಲಲಿತಾ
ನಮಗೆ ಇದೀಗ ಮನೆ, ಕುಡಿಯುವ ನೀರು, ವಿದ್ಯುತ್ ಸೌಲಭ್ಯ ಸರಕಾರದಿಂದ ದೊರೆತಿವೆ. ಆದರೆ ಇಲ್ಲಿನ ಕಚ್ಚಾ ರಸ್ತೆಯಲ್ಲಿ ಮಳೆಗಾಲದಲ್ಲಿ ಸಂಚರಿಸಲು ಕಷ್ಟಕರವಾಗಬಹುದು. ಅದಕ್ಕೆ ಡಾಮರು ಅಥವಾ ಕಾಂಕ್ರಿಟ್ ಹಾಕಿಸಿ ಸುವ್ಯವ ಸ್ಥಿತ ಗೊಳಿಸಬೇಕೆಂಬುದು ನಮ್ಮ ಬೇಡಿಕೆ. ಅಲ್ಲದೆ ತೊಟ್ಟಿಲಗುರಿಯಲ್ಲಿರುವ ಇನ್ನೆರಡು ಕುಟುಂಬ ಗಳನ್ನು ಒಕ್ಕಲೆಬ್ಬಿಸಿ, ಪೊರ್ಕೋಡಿಗೆ ಸ್ಥಳಾಂತರಿ ಸಬೇಕು.
- ಸುಜಾತಾ, ಫಲಾನುಭವಿ







