ಐತಿಹಾಸಿಕ ಪೇಜಾವರ ಶ್ರೀ ಪರ್ಯಾಯಕ್ಕೆ ಸರ್ವಸಿದ್ಧತೆ
ಉಡುಪಿ, ಜ.2: ಪೇಜಾವರ ಶ್ರೀಯವರ ದಾಖಲೆಯ ಐದನೆ ಪರ್ಯಾಯ ಪೀಠಾರೋಹಣಕ್ಕೆ ಸರ್ವಸಿದ್ಧತೆಗಳನ್ನು ಮಾಡಿ ಕೊಳ್ಳಲಾಗಿದೆ ಎಂದು ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರಾಚಾರ್ಯ ಹಾಗೂ ಪ್ರಧಾನ ಕಾರ್ಯದರ್ಶಿ ರತ್ನಕುಮಾರ್ ಹೇಳಿದ್ದಾರೆ.
ಪೇಜಾವರ ಮಠದಲ್ಲಿರುವ ಸ್ವಾಗತ ಸಮಿತಿಯ ಕಚೇರಿಯ ಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 500 ವರ್ಷಗಳ ಬಳಿಕ ದ್ವೆವಾರ್ಷಿಕ ಕೃಷ್ಣಪೂಜಾ ಪರ್ಯಾಯ ಸರ್ವಜ್ಞ ಪೀಠಾರೋಹಣವನ್ನು ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವೇಶ ತೀರ್ಥರು ತಮ್ಮ ಶಿಷ್ಯ ಶ್ರೀವಿಶ್ವ ಪ್ರಸನ್ನ ತೀರ್ಥರೊಂದಿಗೆ ಜ.18ರ ಮುಂಜಾನೆ ಮಾಡುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ. ಈ ಮಹೋನ್ನತ ಸಂಭ್ರಮಕ್ಕೆ ಸಾಕ್ಷಿಯಾಗಲು ಪರ್ಯಾಯೋತ್ಸವ ಸ್ವಾಗತ ಸಮಿತಿ ಜ.4ರಿಂದ 24ರವರೆಗೆ ವೈಭವದ ಏರ್ಪಾಡುಗಳನ್ನು ಮಾಡಿ ಕೊಂಡಿದೆ ಎಂದರು.
ಜ.4ರ ಸಂಜೆ 4 ಗಂಟೆಗೆ ಅಧಿಕೃತವಾಗಿ ಪುರಪ್ರವೇಶ ಮಾಡಲಿದ್ದಾರೆ. ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ ವೈಭವದ ಶೋಭಾಯಾತ್ರೆಯಲ್ಲಿ ರಥಬೀದಿಗೆ ಕರೆತರಲಾಗುವುದು.
ರಥಬೀದಿಯ ಪೂರ್ಣಪ್ರಜ್ಞ ಮಂಟಪದಲ್ಲಿ ಪರ್ಯಾಯ ಶ್ರೀ ಕಾಣಿಯೂರು ಶ್ರೀಗಳ ಅಧ್ಯಕ್ಷತೆಯಲ್ಲಿ ಸಚಿವ ವಿನಯಕುಮಾರ್ ಸೊರಕೆ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಪ್ರಮೋದ್ ಮಧ್ವರಾಜ್, ನಗರಸಭಾ ಅಧ್ಯಕ್ಷ ಯುವರಾಜ್‌ರ ಉಪಸ್ಥಿತಿಯಲ್ಲಿ ಉಭಯ ಶ್ರೀಗಳಿಗೆ ಪೌರಸನ್ಮಾನ ನಡೆಯಲಿದೆ. ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಅಭಿನಂದನಾ ಸಂದೇಶ ನೀಡುವರು ಎಂದು ರತ್ನಕುಮಾರ್ ವಿವರಿಸಿದರು.
ಇದೇ ಸಂದರ್ಭದಲ್ಲಿ ನಗರಸಭೆಯು ಕಲ್ಸಂಕ-ವಾದಿರಾಜ ರಸ್ತೆಯ ಸಂಪರ್ಕ ಮಾರ್ಗಕ್ಕೆ ಪೇಜಾವರ ಶ್ರೀಗಳ ಹೆಸರಿಟ್ಟು ನಾಗರಿಕ ಗೌರವ ಸಲ್ಲಿಸಲಿದೆ. ಇದರ ಲೋಕಾರ್ಪಣೆಯೂ ಇಲ್ಲಿ ನಡೆಯಲಿದೆ.
ಹೊರೆಕಾಣಿಕೆ:
ಜ.5ರಿಂದ 16ರವರೆಗೆ ಪ್ರತಿದಿನ ಕರಾವಳಿ ಜಿಲ್ಲೆಯ ವಿವಿಧೆಡೆ ಸಂಘ ಸಂಸ್ಥೆಗಳು, ನಾಗರಿಕರಿಂದ ಹೊರೆ ಕಾಣಿಕೆ ನಡೆಯಲಿದೆ. ರಾಜ್ಯದ ಗಡಿಜಿಲ್ಲೆಯಾದಯಾದಗಿರಿ ಸೇರಿದಂತೆ ಉತ್ತರ ಕರ್ನಾಟಕದ ಬಳ್ಳಾರಿ, ರಾಯಚೂರು, ಕಲಬುರಗಿಯಿಂದಲೂ ಈ ಬಾರಿ ಹೊರೆ ಕಾಣಿಕೆ ಬರಲಿದೆ. ಮೊದಲ ದಿನ ಮಲ್ಪೆಯಿಂದ ಹೊರೆಕಾಣಿಕೆ ಬರಲಿದೆ.
ಪರ್ಯಾಯ ಮಹೋತ್ಸವದ ಅಂಗವಾಗಿ ಜ.17ರಂದು ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ನಡೆಯಲಿವೆ. ಅಂದು ರಾತ್ರಿ ಪೇಜಾವರ ಶ್ರೀಗಳ ಅಧ್ಯಕ್ಷತೆಯಲ್ಲಿ, ಪರ್ಯಾಯ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥರಿಗೆ ನಾಗರಿಕ ಅಭಿನಂದನೆ ನಡೆ ಯಲಿದೆ ಎಂದು ರತ್ನಕುಮಾರ್ ವಿವರಿಸಿದರು.
ಜ.18ರಂದು ಮುಂಜಾವ 2:30ಕ್ಕೆ ಚಾರಿತ್ರಿಕ ಪರ್ಯಾಯ ಮೆರವಣಿಗೆ, ಪರ್ಯಾಯ ಸರ್ವಜ್ಞ ಪೀಠಾರೋಹಣ, ದರ್ಬಾರ್ ಸಭೆ ನಡೆಯಲಿದೆ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶಗಳ ಮುಖ್ಯಮಂತ್ರಿಗಳು, ಕೇಂದ್ರದ ಮತ್ತು ರಾಜ್ಯದ ಹಲವು ಸಚಿವರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ, ಸ್ವಾಗತ ಸಮಿತಿ ಪದಾಧಿಕಾರಿಗಳಾದ ಭುವನೇಂದ್ರ ಕಿದಿಯೂರು, ಹೆರಂಜೆ ಕೃಷ್ಣ ಭಟ್, ಪ್ರದೀಪ್ ಕಲ್ಕೂರ, ಪದ್ಮನಾಭ ಭಟ್, ವಾಸುದೇವ ಭಟ್ ಮುಂತಾದವರು ಉಪಸ್ಥಿತರಿದ್ದರು.







