ಪ್ರತಿಭಟನಾನಿರತ ಟ್ಯಾಂಕರ್ ಚಾಲಕರ ಸೆರೆ

ಸುರತ್ಕಲ್, ಜ.2: ಮಂಗಳೂರಿನ ಎಚ್‌ಪಿಸಿಎಲ್ ಘಟಕದಿಂದ ಆಂಧ್ರ ಪ್ರದೇಶಕ್ಕೆ ಗ್ಯಾಸ್ ಸಾಗಿಸುತ್ತಿದ್ದ ಸಂದ ರ್ಭದಲ್ಲಿ ಚೆರ್ಲವಲ್ಲಿಯಲ್ಲಿ ನಡೆದ ಟ್ಯಾಂಕರ್ ಚಾಲಕ ಸರವಣನ್ ಹತ್ಯೆ ಯನ್ನು ಖಂಡಿಸಿ ಕಳೆದ 4 ದಿನಗಳಿಂದ ಸುರತ್ಕಲ್ ಸಮೀಪದ ಕಾನಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸುಮಾರು 50 ಮಂದಿಯನ್ನು ಪೊಲೀಸರು ಇಂದು ಬೆಳಗ್ಗೆ ಬಂಧಿಸಿದ್ದಾರೆ.
ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ಗ್ಯಾಸ್ ಟ್ಯಾಂಕರ್ ಚಾಲಕ ತಮಿಳುನಾಡಿನ ಸರವಣನ್ ಕುಟುಂಬಕ್ಕೆ ಹಾಗೂ ಗಂಭೀರ ಗಾಯಗೊಂಡಿರುವ ತಂಗರಾಜುರಿಗೆ ಪರಿಹಾರ ನೀಡಬೇಕು. ಟ್ಯಾಂಕರ್ ಚಾಲಕರಿಗೆ ಕಾನೂನಿನಂತೆ ಭದ್ರತೆ ಒದಗಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಡಿವೈಎಫ್‌ಐ ಮತ್ತು ಸಿಐಟಿಯು ನೇತೃತ್ವದಲ್ಲಿ ಟ್ಯಾಂಕರ್ ಚಾಲಕರು ಮಂಗಳವಾರದಿಂದ ಕಾನಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇದರಿಂದ ಎಚ್‌ಪಿಸಿಎಲ್‌ನಿಂದ ಸರಬರಾಜು ಆಗಬೇಕಾಗಿದ್ದ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಟ್ಯಾಂಕರ್ ಮಾಲಕರ ಸೂಚನೆ ಯಂತೆ ಕರ್ತವ್ಯಕ್ಕೆ ಹಾಜರಾಗಲು ಚಾಲಕರು ಹಿಂದೇಟು ಹಾಕಿದಾಗ ಸ್ವತಃ ಮಾಲಕರೇ ಇತರೆಡೆಗಳಿಂದ ಚಾಲಕರನ್ನು ಕರೆತಂದಿದ್ದರು. ಆದರೆ ಗ್ಯಾಸ್ ತುಂಬಿದ ಟ್ಯಾಂಕರ್‌ನ್ನು ಪ್ರತಿ ಭಟಕಾರರು ರಸ್ತೆ ಮಧ್ಯೆ ತಡೆಯುವ ಭೀತಿಯ ಹಿನ್ನೆಲೆಯಲ್ಲಿ ಮಾಲಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಹೇಳಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾನಿರತ ಎಲ್ಲರನ್ನೂ ಬಂಧಿಸಿದರು. ಲಾರಿ ಮಾಲಕರು ಹಾಗೂ ಎಚ್‌ಪಿಸಿಎಲ್ ಕಂಪೆನಿಯು ಪೊಲೀಸ್ ರಕ್ಷಣೆಯೊಂದಿಗೆ ಇಂದು ಸುಮಾರು 400ಕ್ಕೂ ಹೆಚ್ಚು ಟ್ಯಾಂಕರ್‌ಗಳು ಗ್ಯಾಸ್ ತುಂಬಿಸಿಕೊಂಡು ಹೊರ ರಾಜ್ಯಕ್ಕೆ ಸಂಚರಿಸಿದವು.
ಈ ಸಂದರ್ಭ ಡಿಸಿಪಿ ಕಾಂತರಾಜು, ಎಸಿಪಿ ಮದನ್ ಗಾಂವ್ಕರ್, ಸುರತ್ಕಲ್ ನಿರೀಕ್ಷಕ ಮಂಜುನಾಥ ನೇತೃತ್ವದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದರು.
ಎಫ್‌ಐಆರ್ ದಾಖಲು: ಪ್ರತಿಭ ಟನೆಗೆ ಸಂಬಂಧಿಸಿ ಬಂಧಿತ ಐವರು ಡಿವೈಎಫ್‌ಐ ಮತ್ತು ಸಿಐಟಿಯು ಮುಖಂಡರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
ಡಿವೈಎಫ್‌ಐ ದ.ಕ. ಜಿಲ್ಲಾ ಉಪಾಧ್ಯಕ್ಷ ಡಿ.ಕೆ.ಇಮ್ತಿಯಾಝ್, ಮಂಗಳೂರು ಉತ್ತರ ಘಟಕದ ನವೀನ್ ಕೊಂಚಾಡಿ, ಸುರತ್ಕಲ್ ಘಟಕದ ನಾಸಿರ್, ಸಿಐಟಿಯು ಮುಖಂಡರಾದ ಯೋಗೀಶ್ ಜಪ್ಪಿನಮೊಗರು, ವಿಲ್ಲಿ ವಿಲ್ಸನ್‌ರ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.





