ಸೌದಿ ಅರೇಬಿಯ: ಪ್ರತಿಭಾ ಸ್ಪರ್ಧೆಗೆ 33 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ನೋಂದಣಿ
ಸೌದಿ ಅರೇಬಿಯ: ರಿಯಾದ್, ಜ.2: ಸರಕಾರಿ ಪ್ರಾಯೋಜಕತ್ವದ ವಾರ್ಷಿಕ ವಿಜ್ಞಾನ ಹಾಗೂ ಗಣಿತ ಸ್ಪರ್ಧೆಯಲ್ಲಿ ಭಾಗವಹಿಸಲು ಸೌದಿ ಅರೇಬಿಯದಾದ್ಯಂತದ 33 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿರುವುದಾಗಿ ವರದಿಯೊಂದು ತಿಳಿಸಿದೆ.
ಈ ರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೋಂದಾಯಿಸುವುದಕ್ಕೆ ಜನವರಿ 11 ಕೊನೆಯ ದಿನಾಂಕವಾಗಿದೆ ಎಂದು ಸೌದಿಯ ದೊರೆ ಅಬ್ದುಲ್ಲಾ ಹಾಗೂ ಕುಟುಂಬದ ಹೆಸರಿನಲ್ಲಿರುವ ಪ್ರತಿಷ್ಠಾನದ ಮಹಾಕಾರ್ಯದರ್ಶಿ ಆದಿಲ್ ಅಬ್ದುಲ್‌ರಹ್ಮಾನ್ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ವಿಜ್ಞಾನ ಹಾಗೂ ಗಣಿತ ಕ್ಷೇತ್ರಗಳಿಗೆ ಸಂಬಂದಿಸಿದಂತೆ ವಿದ್ಯಾರ್ಥಿಗಳ ಕೌಶಲವನ್ನು ಅಭಿವೃದ್ಧಿಪಡಿಸುವುದು ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ, ಅವರು ಭವಿಷ್ಯದಲ್ಲಿ ರಾಷ್ಟ್ರದ ನಾಯಕರಾಗುವವರಾಗಿದ್ದಾರೆ. ಹಾಗಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಂದು ಸೂಕ್ತ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಸೌದಿ ಆಡಳಿತವು ಶಿಕ್ಷಣ ಸಚಿವಾಲಯದ ಸಹಯೋಗದೊಂದಿಗೆ ಈ ಸ್ಪರ್ಧೆಯನ್ನು ಹಮ್ಮಿಕೊಂಡಿದೆ ಎಂದವರು ಹೇಳಿದ್ದಾರೆ.
‘‘ರಾಷ್ಟ್ರದ ಭವಿಷ್ಯದ ದೃಷ್ಟಿಕೋನದಿಂದ ಇದೊಂದು ಮಹತ್ವದ ಯೋಜನೆಯಾಗಿದ್ದು, ರಾಷ್ಟ್ರವನ್ನು ಜ್ಞಾನಾಧಾರಿತ ಆರ್ಥಿಕ ಶಕ್ತಿಯಾಗಿ ಮಾರ್ಪಡಿಸುವ ಗುರಿ ಈ ಯೋಜನೆಯದ್ದಾಗಿದೆ’’ ಎಂದು ಅವರು ವಿವರಿಸಿದ್ದಾರೆ.
ಸ್ಪರ್ಧೆಯನ್ನು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ರೂಪಿಸಲಾಗಿದೆ. ಮಾತ್ರವಲ್ಲದೆ ಸೌದಿಯೇತರ ವಿದ್ಯಾರ್ಥಿಗಳಿಗೂ ಇತರ ಸ್ಪರ್ಧೆಗಳಲ್ಲಿ ಭಾಗವಹಿಸಲು ಇದು ಅವಕಾಶ ಕಲ್ಪಿಸಿದೆ. ವಿಜೇತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದಲ್ಲದೆ ಅಂತಾರಾಷ್ಟ್ರೀಯ ವಿಜ್ಞಾನ ಹಾಗೂ ಗಣಿತ ಒಲಿಂಪಿಯಾಡ್‌ಗೆ ಅವರ ಹೆಸರನ್ನು ಶಿಫಾರಸು ಮಾಡಲಾಗುತ್ತದೆ ಎಂದು ವರದಿ ವಿವರಿಸಿದೆ.