ಚೀನಾ: ಸೇನೆಯ ಆಧುನೀಕರಣ

ಬೀಜಿಂಗ್, ಜ.2: ರಾಷ್ಟ್ರದ ಸೇನೆಯನ್ನು ಬಲಪಡಿಸುವ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮೂರು ಹೊಸ ಸೇನಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ.
ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ), ಕ್ಷಿಪಣಿ ಪಡೆ ಹಾಗೂ ವ್ಯೆಹಾತ್ಮಕ ಬೆಂಬಲ ಪಡೆಗಳನ್ನು ಚಾಲನೆಗೊಳಿಸಿ ಸಂಬಂಧಪಟ್ಟ ಘಟಕಗಳ ಮುಖ್ಯಸ್ಥರಿಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇನಾ ಧ್ವಜಗಳನ್ನು ವಿತರಿಸಿ ನೀಡಿರುವ ಹೇಳಿಕೆಯನ್ನು ಸರಕಾರಿ ಟಿವಿ ವಾಹಿನಿ ಬಿತ್ತರಿಸಿದೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಪಿಎಲ್‌ಎ ಅಧಿಕಾರಿಗಳು ಮತ್ತು ಸೈನಿಕರು ರಾಷ್ಟ್ರಗೀತೆ ಹಾಡುವ ಮೂಲಕ ಘಟಕಗಳ ಉದ್ಘಾಟನೆಯನ್ನು ನೆರವೇರಿಸಲಾಯಿತು.
ಚೀನಾದ ಸೇನೆಯು ಪ್ರಸಕ್ತ 23 ಲಕ್ಷ ಯೋಧರನ್ನು ಒಳಗೊಂಡಿದೆಯಾದರೂ 3 ಲಕ್ಷದಷ್ಟು ಯೋಧರ ಸಂಖ್ಯೆಯನ್ನು ಕಡಿತಗೊಳಿಸುವ ಯೋಜನೆಯ ಬಗ್ಗೆ ಚೀನಾ ಪರಿಶೀಲನೆ ನಡೆಸಿದೆ.
ಚೀನಾವನ್ನು ಆಧುನೀಕರಣಗೊಳಿಸುವುದನ್ನು ಒಳಗೊಂಡಿರುವ ಕನಸನ್ನು ಸಾಕಾರಗೊಳಿಸುವುದು ಹಾಗೂ ಸೇನಾಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವುದು ರಾಷ್ಟ್ರದ ಪ್ರಸಕ್ತ ಅಭಿವೃದ್ಧಿಯೋಜನೆಯ ಪ್ರಮುಖ ಭಾಗವಾಗಿದೆ.
ಹಳೆಯ ಸಲಕರಣೆಗಳ ಬಳಕೆಯನ್ನು ಕಡಿತಗೊಳಿಸುವುದು, ಹೊಸ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಯೋಧರ ಸಂಖ್ಯೆಯನ್ನು ಕಡಿಮೆಗೊಳಿಸುವುದು ಕೂಡಾ ಚೀನಾ ಸುಧಾರಣಾ ಯೋಜನೆಯ ಪ್ರಮುಖ ಅಂಶಗಳಾಗಿವೆ.