ಎನ್‌ಎಚ್‌ಆರ್‌ಸಿಯಿಂದ ವೈದ್ಯಕೀಯ ನಿರ್ಲಕ್ಷದ ಪ್ರಕರಣಗಳ ಬಹಿರಂಗ ವಿಚಾರಣೆ
ಮುಂಬೈ,ಜ.2: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ವು ಇದೇ ಮೊದಲ ಬಾರಿಗೆ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ವಿರುದ್ಧದ ವೈದ್ಯಕೀಯ ನಿರ್ಲಕ್ಷದ ಪ್ರಕರಣಗಳ ಬಹಿರಂಗ ವಿಚಾರಣೆ ನಡೆಸಲಿದೆ. ಜನ ಸ್ವಾಸ್ಥ ಅಭಿಯಾನ್(ಜೆಎಸ್‌ಎ) ಜ.6-7ರಂದು ಇಲ್ಲಿಯ ಟಾಟಾ ಸಮಾಜ ವಿಜ್ಞಾನ ಸಂಸ್ಥೆ ಕ್ಯಾಂಪಸ್‌ನಲ್ಲಿ ಏರ್ಪಡಿಸಿರುವ ದೂರು ಪರಿಹಾರ ವೇದಿಕೆಯಲ್ಲಿ ಇಂತಹ ದೂರುಗಳನ್ನು ಆಲಿಸಲು ಆಯೋಗವು ಒಪ್ಪಿಕೊಂಡಿದೆ.
ನಾವು ಕಾರ್ಯಸೂಚಿಯನ್ನು ರೂಪಿಸಿದ್ದು,ವಿಚಾರಣೆಗೆ ಪ್ರಕರಣಗಳನ್ನು ಆಯ್ಕೆ ಮಾಡಿದ್ದೇವೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಅವುಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗುವುದು. ಮಾನವ ಹಕ್ಕುಗಳ ರಕ್ಷಣೆಯ ನಿಟ್ಟಿನಲ್ಲಿ ಇದೊಂದು ಅಪರೂಪದ ಉಪಕ್ರಮವಾಗಿದೆ ಎಂದು ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್.ಬನ್ನೂರಮಠ ಅವರು ತಿಳಿಸಿದರು.
ಮಹಾರಾಷ್ಟ್ರ,ಗುಜರಾತ್,ಗೋವಾ ಮತ್ತು ರಾಜಸ್ಥಾನ ರಾಜ್ಯಗಳ ವ್ಯಾಪ್ತಿಯ ಸುಮಾರು 125 ದೂರುಗಳನ್ನು ವಿಚಾರಣೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ ಕಾರ್ಯಕ್ರಮದ ಸಂಯೋಜಕಿ ಹಾಗೂ ಜೆಎಸ್‌ಎ ಸದಸ್ಯೆ ಡಾ.ಲೆನಿ ಚೌಧರಿ ಅವರು,ನ್ಯಾಯಕ್ಕಾಗಿ ಕಂಬದಿಂದ ಕಂಬಕ್ಕೆ ಅಲೆದಾಡುವ ವೈದ್ಯಕೀಯ ನಿರ್ಲಕ್ಷದ ಬಲಿಪಶುಗಳು ತಮ್ಮ ನೋವುಗಳನ್ನು ಎನ್ನೆಚ್ಚಾರ್ಸಿ ಮತ್ತು ಈ ನಾಲ್ಕು ರಾಜ್ಯಗಳ ಮಾನವ ಹಕ್ಕು ಆಯೋಗಗಳ ಮುಖ್ಯಸ್ಥರೊಂದಿಗೆ ಹಂಚಿಕೊಳ್ಳಲು ಈ ವೇದಿಕೆಯು ಅವಕಾಶ ಕಲ್ಪಿಸುತ್ತದೆ ಎಂದರು.







