ಚುಟುಕು ಸುದ್ದಿಗಳು
ಚೀನಾ, ಅಫ್ಘಾನ್‌ನಲ್ಲಿ ಭೂಕಂಪ
ಬೀಜಿಂಗ್, ಜ.2: ಚೀನಾದ ಈಶಾನ್ಯ ಭಾಗದಲ್ಲಿ ಶನಿವಾರ ಮಧ್ಯಮ ಪ್ರಮಾಣದ ಭೂಕಂಪ ಸಂಭವಿಸಿದ್ದು, ಅದರ ತೀವ್ರತೆಯು 6.4ರಷ್ಟಿತ್ತೆಂದು ಚೀನಾದ ಭೂಕಂಪನ ಮಾಪನ ಕೇಂದ್ರವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸ್ಥಳೀಯ ಕಾಲಮಾನ ಮಧ್ಯರಾತ್ರಿ 12:22ರ ಸುಮಾರಿಗೆ ಹಿಲಾಂಗ್‌ಜಿಯಾಂಗ್ ಪ್ರಾಂತದ ಲಿಂಕೌನಲ್ಲಿ ಕಂಪನವು ಕೇಂದ್ರೀಕರಿಸಿತ್ತು ಎಂದು ವರದಿ ತಿಳಿಸಿದೆ.
ಯಾವುದೇ ಸಾವುನೋವಿನ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲವೆನ್ನಲಾಗಿದೆ.
ಅಫ್ಘಾನಿಸ್ತಾನದಲ್ಲೂ ಶನಿವಾರ ನಸುಕಿನ ವೇಳೆ 5.3 ತೀವ್ರತೆಯ ಕಂಪನ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಅಫ್ಘಾನಿಸ್ತಾನದ ಜಾರ್ಮ್ ಸಮೀಪ ಹಿಂದೂಕುಶ್ ಪರ್ವತಶ್ರೇಣಿಯಲ್ಲಿ ಕಂಪನವು ಕೇಂದ್ರೀಕರಿಸಿತ್ತು ಎಂದು ವರದಿ ತಿಳಿಸಿದೆ. ಪಾಕಿಸ್ತಾನ ಹಾಗೂ ಉತ್ತರ ಭಾರತದಲ್ಲೂ ಕಂಪನ ಗೋಚರಿಸಿದೆ.
ಗಾಝಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ
ಜೆರುಸಲೇಂ, ಜ.2: ಗಾಝಾಪಟ್ಟಿಯಲ್ಲಿರುವ ಹಮಾಸ್ ನೆಲೆಗಳ ಮೇಲೆ ಶನಿವಾರ ಮುಂಜಾನೆ ಇಸ್ರೇಲ್‌ನ ವಾಯುಪಡೆ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಗಳು ತಿಳಿಸಿವೆ.
ಗಾಝಾಪಟ್ಟಿಯಿಂದ ದಕ್ಷಿಣ ಇಸ್ರೇಲ್‌ನತ್ತ ರಾಕೆಟ್ ದಾಳಿಗಳು ನಡೆದ ಕೆಲವೇ ತಾಸುಗಳಲ್ಲಿ ಈ ದಾಳಿ ನಡೆದಿರುವುದಾಗಿ ವರದಿಗಳು ಹೇಳಿವೆ.
ಉತ್ತರದಲ್ಲಿ ಬೈತ್ ಹನೌನ್ ಹಾಗೂ ದಕ್ಷಿಣದಲ್ಲಿ ರಫಾ ಪ್ರದೇಶದವರೆಗಿನ ಪ್ರದೇಶವನ್ನು ಗುರಿಯಾಗಿಸಿ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು ಫೆಲೆಸ್ತೀನ್‌ನ ಭದ್ರತಾ ಮೂಲಗಳು ತಿಳಿಸಿವೆ.
ಇಸ್ರೇಲ್ ಸೇನೆಯು ಗಾಝಾಪಟ್ಟಿಯಲ್ಲಿರುವ ಹಮಾಸ್‌ನ ಎರಡು ಸೇನಾ ತರಬೇತಿ ಶಿಬಿರಗಳು ಹಾಗೂ ಎರಡು ಸೇನಾ ನೆಲೆಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿರುವುದಾಗಿ ಅವು ಹೇಳಿವೆ.
ಗಾಝಾಪಟ್ಟಿಯಲ್ಲಿ ಸಂಭವಿಸುವ ಎಲ್ಲ ಹಿಂಸಾಕೃತ್ಯಗಳಿಗೆ ಹಮಾಸ್ ಹೊಣೆಯಾಗಿದೆ ಎಂದು ಇದೇ ವೇಳೆ ಹೇಳಿಕೆಯೊಂದರಲ್ಲಿ ಇಸ್ರೇಲ್‌ನ ಭದ್ರತಾ ಪಡೆಗಳು ಆರೋಪಿಸಿವೆ.
ಶುಕ್ರವಾರ ನಡೆದ ದಾಳಿಯ ವೇಳೆ ಇಬ್ಬರು ಫೆಲೆಸ್ತೀನಿಯರು ಗಾಯಗೊಂಡಿರುವುದಾಗಿ ವೈದ್ಯಕೀಯ ಮೂಲಗಳು ತಿಳಿಸಿವೆ.