ಅಫ್ಝಲ್ ಗುರು ನೇಣಿಗೆ ಪ್ರತಿಕಾರವಾಗಿ ಉಗ್ರರ ದಾಳಿ

ಪಠಾಣ್‌ಕೋಟ್: ಸಂಸತ್ ಭವನದ ಮೇಲೆ ದಾಳಿಯ ಆರೋಪಿ ಅಫ್ಝಲ್ ಗುರುವಿಗೆ ಮರಣ ದಂಡನೆ ವಿಧಿಸಿ ನೇಣುಗಂಭಕ್ಕೆ ಏರಿಸಿರುವುದಕ್ಕೆ ಪ್ರತಿಕಾರ ತೀರಿಸಲು ಪಠಾಣ್‌ಕೋಟ್‌ನ ವಾಯುನೆಲೆಗೆ ದಾಳಿ ನಡೆಸುತ್ತಿರುವುದಾಗಿ ಪಾಕ್‌ನ ಉಗ್ರರು ಹೇಳಿರುವುದಾಗಿ ಉಗ್ರರಿಂದ ಹಲ್ಲೆಗೊಳಗಾದ ಗುರುದಾಸಪುರ ನಿವಾಸಿ ರಾಜೇಶ್ ವರ್ಮಾ ಹೇಳಿದ್ಧಾರೆ.
ಪಠಾಣ್‌ಕೋಟ್‌ನಿಂದ ಉಗ್ರರಿಂದ ಅಪಹರಣಕ್ಕೊಳಗಾದ ಮೂವರಲ್ಲಿ ಒಬ್ಬರಾಗಿರುವ ರಾಜೇಶ್ ವರ್ಮಾ ಅವರ ಗಂಟಲನ್ನು ಉಗ್ರರು ಸೀಳಿದ್ದಾರೆ. ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನಡೆಯುತ್ತಿರುವ ರಾಜೇಶ್ ಉಗ್ರರನ್ನು ಹತ್ತಿರದಿಂದ ಕಂಡವರು.
40ರ ಹರೆಯದ ರಾಜೇಶ್ ಮತ್ತು ಪೊಲೀಸ್ ಅಧಿಕಾರಿ ಸಲ್ವಿಂದರ್ ಸಿಂಗ್ ಜ.1ರಂದು ಭಾರತ-ಪಾಕ್ ಗಡಿಯಲ್ಲಿರುವ ಸೈಂಟ್ ಮಝಾರ್‌ಗೆ ಭೇಟಿ ನೀಡಿ ವಾಪಸ್ ಬರುತ್ತಿದ್ದಾಗ ಉಗ್ರರು ಅಪಹರಿಸಿದ್ದರು.
ನಾವು ಕಾರ್‌ನಲ್ಲಿ ವಾಪಾಸ್ ಬರುತ್ತಿದ್ದಾಗ ಸೇನಾ ಸಮವಸ್ತ್ರ ಧರಿಸಿದ್ದ ನಾಲ್ವರು ನಮ್ಮ ಕಾರನ್ನು ಅಡ್ಡಗಟ್ಟಿದರು. ವಾಹನದೊಳಕ್ಕೆ ನುಗ್ಗಿದ ನಾಲ್ವರು ನಮ್ಮನ್ನು ಹಗ್ಗದಿಂದ ಕಟ್ಟಿ ಹಾಕಿದರು’’ ಎಂದು ಅವರು ತಮಗಾದ ಅನುಭವವನ್ನು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
‘‘ಉರ್ದು ಮಾತನಾಡುತ್ತಿದ್ದ ಅವರಲ್ಲಿ ರೈಫಲ್, ಗ್ರೆನೇಡ್ ಜೊತೆಗೆ ಜಿಪಿಎಸ್ ನೇವಿಗೇಶನ್ ಸಿಸ್ಟಮ್ ಇತ್ತು. ನೀವು ಅಫ್ಝಲ್ ಗುರುವನ್ನು ಕೊಂದಿರುವಿರಿ. ಅದಕ್ಕಾಗಿ ಪ್ರತಿಕಾರ ತೀರಿಸುತ್ತಿರುವುದಾಗಿ ಹೇಳುತ್ತಾ ರೈಫಲ್‌ನ ತುದಿಯಿಂದ ನಮ್ಮ ಮೇಲೆ ಹಲ್ಲೆ ನಡೆಸಿದರು.’’
ಕಾರು 30 ಕಿ.ಮೀ ದೂರಕ್ಕೆ ತಲುಪುವಷ್ಟರಲ್ಲಿ ಪೊಲೀಸ್ ಅಧಿಕಾರಿ ಹಾಗೂ ಇನ್ನೊಬ್ಬರನ್ನು ಕಾರ್‌ನಿಂದ ಹೊರದಬ್ಬಿದರು. ಆದರೆ ನನ್ನನ್ನು ಕರೆದೊಯ್ದು ತೇಜ್‌ಪುರ ತಲುಪುಷ್ಟರಲ್ಲಿ ನನ್ನ ಗಂಟಲು ಕೊಯ್ದರು. ವಾಯುನೆಲೆ ಪ್ರವೇಶಿಸುವ ಯೋಜನೆ ರೂಪಿಸಿದ್ದ ಅವರು, ನನ್ನನ್ನು ಕಾರ್‌ನಲ್ಲಿ ಬಿಟ್ಟು ಪರಾರಿಯಾದರು.
‘‘ರಕ್ತ ಸುರಿಯುತ್ತಿದ್ದ ಜಾಗಕ್ಕೆ ಗಾಯಕ್ಕೆ ಬಟ್ಟೆ ಕಟ್ಟಿ ಅಲ್ಲಿಂದ ಓಡಿ ಹೋಗಿ ಗುರುದ್ವಾರ ತಲುಪಿದೆ. ಬಳಿಕ ದೂರವಾಣಿ ಮೂಲಕ ಸಂಬಂಧಿಕರಿಗೆ ಮಾಹಿತಿ ನೀಡಿದೆ. ಅವರು ಕೂಡಲೇ ಧಾವಿಸಿ ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು.’’
ಭಯೋತ್ಪಾಕರು ತನ್ನ ಮುಂದೆ ಹೇಳಿದ ಎಲ್ಲವನ್ನು ಗುಪ್ತಚರ ಇಲಾಖೆ ಮತ್ತು ಪೊಲೀಸರಿಗೆ ತಿಳಿಸಿರುವುದಾಗಿ ರಾಜೇಶ್ ವರ್ಮ ವಿವರಿಸಿದರು.







