ಉದ್ಯಮಶೀಲ ಪ್ರವೃತ್ತಿಯಿಂದ ತುಳುವರಿಗೆ ಜಾಗತಿಕ ಮನ್ನಣೆ:ರಮಾನಾಥ ರೈ

ಅಖಿಲ ಭಾರತ ತುಳು ಒಕ್ಕೂಟದ ನೂತನ ಕಚೇರಿಯನ್ನು ಇಂದು ಕಾವೂರು ಗಾಂಧಿನಗರದಲ್ಲಿ ದ. ಕ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮನಾಥ ರೈ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ತುಳು ಭಾಷಿಕರಲ್ಲಿರುವ ಕೆಲಸದಲ್ಲಿ ನಿಪುಣತೆ, ಕಾರ್ಯಕ್ಷಮತೆ , ಉದ್ಯಮಶೀಲತೆಯಿಂದ ತುಳು ಭಾಷಿಕರಿಗೆ ಜಗತ್ತಿನ ಎಲ್ಲಾ ಭಾಗದಲ್ಲಿಯೂ ಮನ್ನಣೆ ಇದೆ. ತುಳು ಭಾಷಿಕರು ಜಗತ್ತಿನ ವಿವಿಧ ಕಡೆಗಳಲ್ಲಿ ಸಾಧನೆಗಳನ್ನು ಮಾಡಿ ತೋರಿಸಿದ್ದಾರೆ ಎಂದರು.
ಯಾವುದೆ ಭಾಷೆಯೂ ಉಳಿಯಬೇಕಾದರೆ ಅದರ ಬಳಕೆ ಅಗತ್ಯ. ಬಳಕೆಯಾಗದ ಭಾಷೆ ನಾಶಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ತುಳು ಭಾಷೆಯ ಬಳಕೆ ಹೆಚ್ಚೆಚ್ಚು ಆಗಬೇಕು.ಸಾವಿರಾರು ಭಾಷೆಗಳಿರುವ ನಮ್ಮ ದೇಶದಲ್ಲಿ ಎಲ್ಲರೂ ಜಾತಿ, ಧರ್ಮ, ಭಾಷೆಯನ್ನು ಮರೆತು ಒಗ್ಗಟ್ಟಾಗಿ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಬಿತೆ ಗೊಂಚಿಲ್, ನೆಂಪು ಸಂಚಿಕೆ ಹಾಗೂ ತುಳು ಒಕ್ಕೂಟದ ಸ್ಥಾಪಕ ಅಧ್ಯಕ್ಷ ಎಸ್ ಆರ್ ಹೆಗ್ಡೆ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮವು ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ ವಹಿಸಿದ್ದರು. ಶಾಸಕಿ ಶಕುಂತಳಾ ಶೆಟ್ಟಿ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಮೇಯರ್ ಮಹಾಬಲ ಮಾರ್ಲ, ಮನಪಾ ಸದಸ್ಯ ಮಧುಕಿರಣ್, ಎ.ಸಿ ಭಂಡಾರಿ, ಧರ್ಮಪಾಲ ಯು ದೇವಾಡಿಗ, ಇಂದ್ರಾಳಿ ಜಯಕರ್ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ರತ್ನಕುಮಾರ್, ಬಿ ದಾಮೋದರ ನಿಸರ್ಗ, ಮಹಾಬಲ ಶೆಟ್ಟಿ ಅಡ್ಯಾರ್, ದಿವಾಕರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.







