ಅರಸು ಮಾನವೀಯ ಗುಣಗಳುಳ್ಳಸುಸಂಸ್ಕೃತ ವ್ಯಕ್ತಿ-ಚಿರಂಜೀವಿ ಸಿಂಗ್
ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ತಮ್ಮ ಸರಳ, ಸೌಮ್ಯ ಮತ್ತು ಸಜ್ಜನಿಕೆಯಿಂದಾಗಿ ‘ಸಂತ’ ಎಂಬ ಬಿರುದಿಗೆ ಪಾತ್ರರಾದವರು. 70ರ ದಶಕದಲ್ಲಿ ದೂರದ ಪಂಜಾಬಿನಿಂದ ಕರ್ನಾಟಕಕ್ಕೆ ಬಂದವರು ಇಂದು ನಮ್ಮ ನಾಡಿನ ಹೆಮ್ಮೆಯ ಸಂಸ್ಕೃತಿ ಚಿಂತಕರಾಗಿ, ನಮ್ಮವರೇ ಆಗಿದ್ದಾರೆ. ತರೀಕೆರೆಯ ಸಹಾಯಕ ಆಯುಕ್ತರಿಂದ ಹಿಡಿದು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿವರೆಗೆ, ಸುದೀರ್ಘ ಕಾಲ ಸೇವೆ ಸಲ್ಲಿಸಿದ ಸಿಂಗ್, ತಮ್ಮ ಸರಳತೆ, ದಕ್ಷತೆ, ಪ್ರಾಮಾಣಿಕತೆಯ ಮೂಲಕ ಎಲ್ಲರ ಪ್ರೀತಿ ಗಳಿಸಿಕೊಂಡವರು. ಸರಕಾರದ ಉನ್ನತ ಹಂತದ ಅಧಿಕಾರಿಯಾಗಿದ್ದರೂ ವೈಚಾರಿಕ ಬದ್ಧತೆಯನ್ನುಳಿಸಿಕೊಂಡವರು. ಸೇವೆಯುದ್ದಕ್ಕೂ ಜನಪರ ಕಾರ್ಯಕ್ರಮಗಳ ಕುರಿತ ಚಿಂತಿಸುತ್ತ, ಕೈ-ಬಾಯಿ ಶುದ್ಧಿಯಾಗಿಟ್ಟುಕೊಂಡವರು. ಯೋಚನೆ-ಆಲೋಚನೆಗಳನ್ನು ಸ್ವಚ್ಛವಾಗಿಟ್ಟುಕೊಂಡವರು. ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ ಕುರಿತು ಅಗಾಧ ಅರಿವುಳ್ಳ ಚಿರಂಜೀವಿ ಸಿಂಗ್, ಇವತ್ತಿಗೂ ಸಾಧಕರ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರು. ಶಿಸ್ತು, ಶ್ರದ್ಧೆ ಮತ್ತು ನಿಯಮಪಾಲನೆಗಳನ್ನು ವ್ರತದಂತೆ ಪಾಲಿಸಿಕೊಂಡು ಬಂದವರು. ನಿವೃತ್ತಿಯಾದ ದಿನ ಸಮಸ್ತ ಸರಕಾರಿ ಸವಲತ್ತು, ಸೌಲಭ್ಯಗಳನ್ನು ಬದಿಗೊತ್ತಿ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಆಟೋ ಹತ್ತಿ ಮನೆಗೆ ತೆರಳಿದವರು. ನಿವೃತ್ತರಾಗಿ ಹತ್ತು ವರ್ಷ ಕಳೆದರೂ ಇಂದಿಗೂ ಓಡಾಟಕ್ಕೆ ಸ್ವಂತ ಕಾರಿಲ್ಲದ, ಮೊಬೈಲ್ ಫೋನ್ ಬಳಸದ, ಪ್ರಚಾರ ಬಯಸದ ಅಪರೂಪದ ಅಧಿಕಾರಿ ಎನಿಸಿಕೊಂಡವರು. ಅವರ ಬೆಳ್ಳನೆಯ ನೀಳ ಗಡ್ಡ, ಪುಟ್ಟ ಕಣ್ಗಳ ನಗುಮೊಗ, ಪಂಜಾಬಿ ಪೇಟ, ತಿಳಿಗೊಳದಂತಹ ತಣ್ಣಗಿನ ಸ್ಥಿತಿ... ಸಂತ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿವೆ.
ಅಧಿಕಾರಿವರ್ಗಕ್ಕೆ, ಸಮಾಜಕ್ಕೆ ಮಾದರಿಯಾಗಿದ್ದಾರೆ. 1969 ರಲ್ಲಿ ಐಎಎಸ್ ಸೇವೆಗೆ ಸೇರಿದ, 1970-71 ರಲ್ಲಿ ಕರ್ನಾಟಕಕ್ಕೆ ಬಂದ ಚಿರಂಜೀವಿ ಸಿಂಗ್, ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ, ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದರು. ಆಡಳಿತಾತ್ಮಕವಾಗಿ ಮತ್ತು ಸಾರ್ವಜನಿಕವಾಗಿ, ಸಾಮಾನ್ಯರಿಂದ ಹಿಡಿದು ಗಣ್ಯರವರೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡರು. ಎಲ್ಲರೊಂದಿಗೆ ಬೆರೆತು ಕನ್ನಡ ಕಲಿತರು, ಮಾತನಾಡಿದರು, ಪತ್ರಿಕೆಗಳಿಗೆ ಅಂಕಣ ಬರೆದು ಜನಪ್ರಿಯರಾದರು. ಸರಕಾರಿ ಅಧಿಕಾರಿಗಳು ಸಾಮಾನ್ಯವಾಗಿ ಜನರೊಂದಿಗೆ ಬೆರೆಯುವವರಲ್ಲ, ನಾಡಿನ ಒಳಿತಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದವರೂ ಅಲ್ಲ. ಆದರೆ ಈ ನಮ್ಮ ಅಧಿಕಾರಿ ಚಿರಂಜೀವಿ ಸಿಂಗ್ ಅದಕ್ಕೆ ತದ್ವಿರುದ್ಧ. ಹಾಗಾಗಿಯೇ ಕರ್ನಾಟಕ ಕಂಡ ಅತ್ಯುತ್ತಮ ಅಧಿಕಾರಿಗಳ ಪಟ್ಟಿಯಲ್ಲಿ ಚಿರಂಜೀವಿ ಸಿಂಗ್ ಸದಾ ಜೀವಂತ. ಇಂತಹ ನಿಸ್ವಾರ್ಥ ಜೀವಿಗೆ ಈಗ 71 ವರ್ಷ. ನಿವೃತ್ತ ಜೀವನದಲ್ಲೂ ಸದಾ ಚಟುವಟಿಕೆಯಿಂದಿರುವ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಚಿರಂಜೀವಿ ಸಿಂಗ್, ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆಪ್ತ ಅಧಿಕಾರಿಗಳಲ್ಲೊಬ್ಬರು. 1973ರಿಂದ 77ರವರೆಗೆ, ಮುಖ್ಯಮಂತ್ರಿಗಳ ಕಚೇರಿಯಲ್ಲಿ ಡೆಪ್ಯುಟಿ ಸೆಕ್ರೆಟರಿ ಟು ಸಿಎಂ ಆಗಿ ಸೇವೆ ಸಲ್ಲಿಸಿದ ಸಿಂಗ್, ಅರಸು ಅವರೊಂದಿಗಿನ 5 ವರ್ಷಗಳನ್ನು ಇಲ್ಲಿ ಮೆಲುಕು ಹಾಕಿದ್ದಾರೆ.
ವಾರ್ತಾ ಭಾರತಿ: ಅರಸು ಅವರ ಆಪ್ತವರ್ಗದ ಅಧಿಕಾರಿಯಾಗಿ ಸೇರಿದ್ದು ಹೇಗೆ?
ಚ್ಟ-ಚಿರಂಜೀವಿ ಸಿಂಗ್: ಅರಸು ಮುಖ್ಯಮಂತ್ರಿಗಳಾಗಿದ್ದಾಗ ರೆಬೆಲೊ ಸಾಹೇಬರು ಚೀಫ್ ಸೆಕ್ರಟರಿಯಾಗಿದ್ದರು. ಆಗ ಪಿಎಸ್ ಟು ಸಿಎಂ ಹುದ್ದೆ ಇದ್ದು, ಲಿನ್ ಸಾಹೇಬರು ನಿರ್ವಹಿಸುತ್ತಿದ್ದರು. ಫೈಲ್ ನೋಡುವುದು, ನೋಟ್ಸ್ ಮಾಡುವುದು, ಸಮ್ಮರಿ ಬರೆಯುವುದು, ಪುಟಪ್... ಹೀಗೆ ಒಬ್ಬರಿಗೆ ಹೆಚ್ಚೆನ್ನಿಸುವಷ್ಟು ಕೆಲಸವಿತ್ತು. ಅದನ್ನು ಗಮನಿಸಿದ ರೆಬೆಲೊ ಸಾಹೇಬರು, ಪಿಎಸ್ ಟು ಸಿಎಂ ಪೋಸ್ಟನ್ನು ರಿಡಿಸೈನ್ ಮಾಡಿ, ಸೆಕ್ರೆಟರಿ ಟು ಸಿಎಂ ಅಂತ ಮಾಡಿದರು. ಆ ಸೆಕ್ರೆಟರಿಗೆ ಕೆಲಸದ ಹೊರೆ ಹೆಚ್ಚು ಅನ್ನುವ ಕಾರಣಕ್ಕೆ ಅವರಿಗೊಬ್ಬರು ಡೆಪ್ಯುಟಿ ಸೆಕ್ರೆಟರಿ ಹುದ್ದೆಯನ್ನು ಕ್ರಿಯೇಟ್ ಮಾಡಿದರು.
ಹೀಗೆ ರಿಡಿಸೈನ್ ಆದ ಸೆಕ್ರೆಟರಿ ಟು ಸಿಎಂ ಹುದ್ದೆಗೆ ಜೆ.ಸಿ.ಲಿನ್ ಸಾಹೇಬರೇ ಮುಂದುವರಿದರು. ನಂತರದ ಹುದ್ದೆಗೆ ಯಾರನ್ನು ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಅರಸು ಅವರನ್ನು ಕೇಳಿದರು. ಅವರು ‘ಒಕ್ಕಲಿಗರು-ಲಿಂಗಾಯತರು ಬೇಡ. ಪ್ರಿಫರಬಲಿ, ಔಟ್‌ಸೈಡರ್ಸ್ ಇದ್ದರೆ ಒಳ್ಳೆಯದು’ ಅಂದರು. ಹಾಗಾಗಿ ಆ ಹುದ್ದೆಗೆ ನಾನು ಬರುವಂತಾಯಿತು. ಆ ಹುದ್ದೆಯಲ್ಲಿ ಬರವಣಿಗೆ ಕೆಲಸ ಹೆಚ್ಚಾಗಿತ್ತು. ಅದು ನನಗೆ ಅನುಕೂಲವೇ ಆಯಿತು. ನೋಡಿ, ಅಲ್ಲೂ ಅರಸರು ತಮ್ಮ ಸಾಮಾಜಿಕ ನ್ಯಾಯಕ್ಕೆ-ಲಿನ್ ಮತ್ತು ಸಿಂಗ್‌ರನ್ನು ನೇಮಿಸುವ ಮೂಲಕ ಒತ್ತು ಕೊಟ್ಟಿದ್ದರು.
ಅರಸು ಅವರ ಆಡಳಿತ ಶೈಲಿ ಹೇಗಿತ್ತು?
ದೇವರಾಜ ಅರಸು ಅತ್ಯುತ್ತಮ ಆಡಳಿತಗಾರರು. ಜೆ.ಸಿ.ಲಿನ್ ಸಾಹೇಬರು ಮುಖ್ಯಮಂತ್ರಿ ಅರಸು ಅವರಿಗೆ ಸೆಕ್ರೆಟರಿ, ನಾನು ಡೆಪ್ಯುಟಿ ಸೆಕ್ರೆಟರಿ. ನನಗಿನ್ನು ಚಿಕ್ಕ ವಯಸ್ಸು. ಆ ವಯೋಸಹಜ ಬುದ್ಧಿಯಿಂದ ಕೆಲವು ಸಲ ನೇರವಾಗಿ ಮಾತನಾಡಿಬಿಡುತ್ತಿದ್ದೆ. ಆದರೆ ಅವರು ಬೇಸರಿಸಿಕೊಳ್ಳದೆ ನಮ್ಮನ್ನು ಮನೆ ಮಕ್ಕಳಂತೆ ಟ್ರೀಟ್ ಮಾಡುತ್ತಿದ್ದರು. ‘ಯಂಗ್ ಫೆಲೋ’ ಎಂದು ಬೆನ್ನುತಟ್ಟುತ್ತಿದ್ದರು. ಅವರೊಂದಿಗೆ ಆತ್ಮೀಯ ಸಂಬಂಧವೇರ್ಪಟ್ಟಿತ್ತು. ನಾನು ಮತ್ತು ಲಿನ್ ಸಾಹೇಬರು ಪತ್ರಿಕೆಗಳಲ್ಲಿ ಬಂದ ಉತ್ತಮ ಲೇಖನಗಳನ್ನು ಹಾಗೂ ನಾನು ಓದಿದ ಪುಸ್ತಕಗಳನ್ನು ಅರಸು ಅವರಿಗೆ ರೆಫರ್ ಮಾಡುತ್ತಿದ್ದೆವು. ಅವುಗಳನ್ನು ಅವರು ಓದಿ ನಮ್ಮೆಂದಿಗೆ ಮುಕ್ತವಾಗಿ ಚರ್ಚೆ ಮಾಡುತ್ತಿದ್ದರು. ಅರಸು ಅವರದು ಸುಸಂಸ್ಕೃತ ನಡವಳಿಕೆ. ಪರ್ಸನಲ್ ಸ್ಟಾಫ್‌ಗೆ ಫುಲ್ ಫ್ರೀಡಂ ಕೊಟ್ಟಿದ್ದರು. ನಾನು ಅವರ ಮನೆಗೆ ಹೋದರೆ, ಬೆಡ್ ರೂಮಿಗೂ ಎಂಟ್ರಿ ಇರ್ತಿತ್ತು. ಅವರು ಎಲ್ಲಿದ್ದರೂ ಕರೆದು ಕೂರಿಸಿಕೊಂಡು ಮಾತನಾಡುತ್ತಿದ್ದರು. ನಾವೂ ಅಷ್ಟೆ, ಸುಮ್ಮನೆ ಅವರ ಮನೆಗೆ ಹೋದವರಲ್ಲ. ನಾವು ಹೋಗಿದ್ದೀವಿ ಅಂದರೆ ಅದು ಅರ್ಜೆಂಟ್ ಕೆಲಸವಿದೆ ಎಂದೇ ಅವರು ಭಾವಿಸುತ್ತಿದ್ದರು.
ಅರಸು ಅವರೊಂದಿಗೆ ಪ್ರವಾಸ ಹೋಗ್ತಿದ್ರಿ, ಅಲ್ಲಿ ಕಂಡ ಅರಸು ಹೇಗಿದ್ದರು?
ಅರಸು ಅವರೊಂದಿಗೆ ತುಂಬಾನೆ ಪ್ರವಾಸ ಮಾಡಿದ್ದೇನೆ. ಐದರಿಂದ ಎಂಟು ಗಂಟೆಗಳ ಕಾಲ, ದೂರದ ಬಿಜಾಪುರ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಅನೇಕ ಕಡೆಗೆ ಅವರೊಂದಿಗೆ ಹೋಗಿದ್ದೇನೆ. ವಿಮಾನದಲ್ಲಿ ದಿಲ್ಲಿಗೆ ಹೋಗಿದ್ದೇನೆ. ರಾಜಕೀಯ ಪ್ರವಾಸವಾದರೆ ಮೊಯಿನುದ್ದೀನ್ ಮತ್ತು ಗೋಪಾಲಶಾಸ್ತ್ರಿ ಹೋಗುತ್ತಿದ್ದರು. ಆಡಳಿತಾತ್ಮಕವಾಗಿದ್ದರೆ ನಾನು ಹೋಗುತ್ತಿದ್ದೆ. ಆಗ ಈಗಿನಂತೆ ಹೆಲಿಕಾಪ್ಟರ್, ಹತ್ತಾರು ಎಕ್ಸಾರ್ಟ್ ಕಾರು, ಜೀಪುಗಳು, ಪೊಲೀಸ್‌ನವರು ಇರುತ್ತಿರಲಿಲ್ಲ. ಅವುಗಳನ್ನು ಅವರೂ ಬಯಸುತ್ತಿರಲಿಲ್ಲ. ಎಷ್ಟೇ ದೂರವಿರಲಿ ಕಾರಿನಲ್ಲಿಯೇ ಪ್ರವಾಸ. ಡ್ರೈವರ್, ಹಿಂದೆ ನಾನು ಮತ್ತು ಅವರು. ಆ ದೃಶ್ಯ ನನಗೆ ಇವತ್ತಿಗೂ ಕಣ್ಣಿಗೆ ಕಟ್ಟಿದಂತಿದೆ. ಜಿಯಾಲಜಿ ಓದಿ ಕೊಂಡಿದ್ರು ಜಿಯಾಗ್ರಫಿ ಓದಿದ್ದ ನನ್ನ ಜೊತೆ ಚರ್ಚಿಸುತ್ತಿದ್ದರು. ಬಾಟ್ನಿ ಬಗ್ಗೆ, ಸಾಹಿತ್ಯದ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಮಹಾಭಾರತದ ಬಗ್ಗೆ, ಅದರಲ್ಲಿ ಬರುವ ಪಾತ್ರಗಳ ಕುರಿತು ವಿಶೇಷ ಆಸಕ್ತಿಯಿಂದ ಮಾತನಾಡುತ್ತಿದ್ದರು. ಚಾರ್ಲ್ಸ್ ಡಿಕನ್ಸ್ ಅವರಿಗೆ ಪ್ರಿಯವಾದ ಕಾದಂಬರಿಕಾರ. ಪ್ರಕೃತಿ-ಪರಿಸರ-ವನಸ್ಪತಿ ಬಗ್ಗೆ ಮಾತನಾಡುತ್ತಿದ್ದರು. ಕರ್ನಾಟಿಕ್ ಸಂಗೀತ ಇಷ್ಟಪಡುತ್ತಿದ್ದರು. ಕೆಲವೊಂದು ಸಲ ಕಾರಿನಲ್ಲಿಯೇ ಹಾಡುತ್ತಿದ್ದರು. ಇದನ್ನು ಗಮನಿಸಿದ ನಾನು ಅವರನ್ನು ಕೆಲವು ಸಾರ್ವಜನಿಕ ಕಾರ್ಯಕ್ರಮಗಳಿಗೆ, ಅವರಿಗೆ ತಿಳಿಸದಂತೆ ಕರೆದುಕೊಂಡು ಹೋದ ಪ್ರಸಂಗಗಳೂ ಇವೆ. ಮುಖ್ಯಮಂತ್ರಿಗಳು ಬರುತ್ತಾರೆಂದು ಕಾರ್ಯಕ್ರಮ ಆಯೋಜಕರಿಗೂ ಗೊತ್ತಿರಲಿಲ್ಲ, ಮುಖ್ಯಮಂತ್ರಿ ಅರಸು ಅವರಿಗೂ ವಿಷಯವನ್ನು ಮೊದಲೇ ತಿಳಿಸಿರುತ್ತಿರಲಿಲ್ಲ. ಅಂತಹ ಕೆಲವು ಸಂಗೀತ ಕಾರ್ಯಕ್ರಮಗಳಿಗೆ ಹೋದಾಗ, ಅರಸು ಅವರು ಸಂಗೀತಗಾರರಿಗೆ ಗೌರವ ತೋರಿ, ತನ್ಮಯರಾಗಿ ಸಂಗೀತ ಆಲಿಸಿದ್ದನ್ನು ಕಂಡಿದ್ದೇನೆ. ಪ್ರವಾಸದಲ್ಲಿದ್ದಾಗ ಅವರದ್ದೊಂದು ಶೈಲಿ ಇತ್ತು- ಆ ಜಿಲ್ಲೆಗೆ ಎಂಟ್ರಿಯಾಗುತ್ತಿದ್ದಂತೆ ಡಿಸಿ, ಎಸ್ಪಿ ರಿಸೀವ್ ಮಾಡಿಕೊಳ್ಳುತ್ತಿದ್ದರಲ್ಲ, ಅವರೊಂದಿಗೆ ಆ ಜಿಲ್ಲೆಯ ಜನಜೀವನ, ಆಗುಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದರು. ಅಲ್ಲಿಯೇ ವಿವರವಾಗಿ ಬ್ರೀಫಿಂಗ್ ಕೂಡ ನಡೆಯುತ್ತಿತ್ತು. ಪ್ರವಾಸದುದ್ದಕ್ಕೂ ಕೆರೆ ಕಟ್ಟೆ ನೋಡ್ತಿದ್ರು, ಹೊಲ ಗದ್ದೆಗಳನ್ನು ಗಮನಿಸುತ್ತಿದ್ದರು. ಮಳೆ-ಬೆಳೆ ಆಗಿಲ್ಲ ಅಂದರೆ, ಈ ಪ್ರದೇಶ ಬರಗಾಲಕ್ಕೆ ತುತ್ತಾಗಿದೆ, ಹಿಂದುಳಿದಿದೆ, ಜನ ಕಷ್ಟಕ್ಕೆ ಸಿಲುಕಿದ್ದಾರೆ ಎನ್ನುತ್ತಿದ್ದರು. ನೀರಾವರಿಗೆ ಅವರು ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಕಾಳಿ ಪ್ರಾಜೆಕ್ಟ್ ಬಗ್ಗೆ ವಿಶೇಷ ಒಲವಿತ್ತು. ಬಡವರಿಗೆ ಮನೆ ಕೊಡುವ ಹೌಸಿಂಗ್ ಸ್ಕೀಮ್ ಬಗ್ಗೆ ಯಾವಾಗಲೂ ಮಾತನಾಡುತ್ತಿದ್ದರು. ಎಲ್ಲೆಂದರಲ್ಲಿ, ಜನ ಕಂಡ ತಕ್ಷಣ ಕಾರು ನಿಲ್ಲಿಸುತ್ತಿದ್ದರು. ಅವರನ್ನು ಆತ್ಮೀಯವಾಗಿ ಮಾತನಾಡಿಸಿ, ಅವರಿಂದ ಮನವಿಗಳನ್ನು ಸ್ವೀಕರಿಸುತ್ತಿದ್ದರು. ಅವರಿಗೆ ಅವರ ಸ್ವಂತ ಕ್ಷೇತ್ರ ಹುಣಸೂರಿನಲ್ಲಿ ಎಲ್ಲರ ಪರಿಚಯವಿತ್ತು. ಹೆಸರಿಡಿದು ಕರೆದು ಮಾತನಾಡಿಸುತ್ತಿದ್ದರು.
ಅವರ ರಾಜಕೀಯ ಜಂಜಾಟಗಳ ನಡುವೆ ಫೈಲ್ ಕ್ಲಿಯರ್ ಮಾಡುವುದು ತಡವಾದಾಗ, ನಮ್ಮ ಲಿನ್ ಸಾಹೇಬರು ಮತ್ತು ನಾನು ಅವರನ್ನು ತಿಪ್ಪಗೊಂಡನಹಳ್ಳಿ ಅಥವಾ ಪ್ಯಾಲೆಸ್ ಗೆಸ್ಟ್‌ಹೌಸ್‌ಗೆ ಕರೆದುಕೊಂಡು ಹೋಗುತ್ತಿದ್ದೆವು. ಅಲ್ಲಿ ನಾವು ಮೂವರೆ, ರಾಜ್ಯದ ಆಗುಹೋಗುಗಳ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದ್ದೆವು. ನಮ್ಮ ಅಭಿಪ್ರಾಯಗಳನ್ನು ಕೇಳಿ, ಸರಿ ಎನಿಸಿದರೆ ಅಲ್ಲಿಯೇ, ಕಾರ್ಯಕ್ರಮಗಳಿಗೆ, ಅನುಷ್ಠಾನಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದರು.
ಶಾಸನ ಸಭೆಯಲ್ಲಿ ಅರಸು ಹೇಗಿರುತ್ತಿದ್ದರು?
ಎಲ್ಲರ ಪ್ರಶ್ನೆಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತಿದ್ದರು. ಎಲ್ಲದಕ್ಕೂ ಉತ್ತರ ಕೊಡುತ್ತಿದ್ದರು. ಅವರ ಉತ್ತರದಲ್ಲಿದ್ದ ಪ್ರಮುಖ ಅಂಶವೆಂದರೆ, ಅಂಕಿ ಅಂಶ. ಅದಿಲ್ಲದೆ ಅವರು ಮಾತನಾಡುತ್ತಿರಲಿಲ್ಲ. ಅದರಲ್ಲೂ ಮೇಲ್ಮನೆಯಲ್ಲಿ ಆಗ ವಿರೋಧಪಕ್ಷದ ನಾಯಕರಾಗಿದ್ದ ರಾಮಕೃಷ್ಣ ಹೆಗಡೆಯವರು ಇದ್ದಾರೆಂದರೆ, ಅವರು ಪ್ರಶ್ನೆ ಕೇಳಲು ಎದ್ದು ನಿಂತರೆ, ಅರಸು ಅಲರ್ಟ್ ಆಗುತ್ತಿದ್ದರು. ಉತ್ತರಕ್ಕೆ ತುಂಬಾ ತಯಾರಿ ಮಾಡಿಕೊಳ್ಳುತ್ತಿದ್ದರು. ನಾನು ಶಾಸನ ಸಭೆಯಲ್ಲಿ ಅಧಿಕಾರಿಗಳ ಗ್ಯಾಲರಿಯಲ್ಲಿ ಕೂತಿರುತ್ತಿದ್ದೆ. ಅವರು ಕೇಳಿದ ಅಂಕಿ ಅಂಶಗಳನ್ನು ಒದಗಿಸಲು ಎದ್ದು ಹೊರಗೆ ಹೋಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಪಡೆದು ಕೊಡುತ್ತಿದ್ದೆ. ಅರಸು ಯಾವಾಗಲೂ ನಿಜಲಿಂಗಪ್ಪನವರ ಕಾಲದ್ದು ಮತ್ತು ತಮ್ಮ ಕಾಲದ್ದನ್ನು ಹೋಲಿಕೆ ವ್ಯತ್ಯಾಸಗಳನ್ನಿಟ್ಟು ಮಾತನಾಡುತ್ತಿದ್ದರು. ಅದರಲ್ಲಿ ಅಂಕಿ ಅಂಶಗಳು ಕಡ್ಡಾಯ. ಆಗ ನಾನು ಗಮನಿಸಿದಂತೆ, ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಮತ್ತು ಕೋಣಂದೂರು ಲಿಂಗಪ್ಪನವರು ಸರಕಾರದ ಬಗ್ಗೆ, ಅರಸು ಅವರ ಆಡಳಿತದ ಬಗ್ಗೆ ಭಾರೀ ಜೋರಾಗಿ ಟೀಕೆಗಳನ್ನು ಮಾಡುತ್ತಿದ್ದರು. ಅವರ ಬಗ್ಗೆ ಅಷ್ಟೇನೂ ತಲೆಕೆಡಿಸಿಕೊಳ್ಳದ ಅರಸು, ಹೆಗಡೆ ಅಂದಾಕ್ಷಣ ಅಲರ್ಟ್ ಆಗುತ್ತಿದ್ದುದು ವಿಶೇಷವಾಗಿತ್ತು.
ಒಂದು ಸಲ, ಶಾಸನ ಸಭೆಗೆ ಹೋಗುವ ಮುಂಚೆ ಸಿಎಂ ಅರಸು ಮತ್ತು ಲಿನ್ ಸಾಹೇಬರ ನಡುವೆ ಯಾವುದೋ ಗಹನವಾದ ವಿಚಾರ ಚರ್ಚೆಯಾಗುತ್ತಿತ್ತು. ಅದು ಫೈನಲೈಸ್ ಆಗಬೇಕು ಎನ್ನುವಾಗ, ಪಕ್ಕದಲ್ಲಿಯೇ ಇದ್ದ ನನಗೆ ಅದು ಸರಿ ಇಲ್ಲ ಅನ್ನಿಸಿ, ಹೇಳಲು ಮುಂದಾದೆ. ಆದರೆ ಲಿನ್ ಸಾಹೇಬರು, ಕೈ ಸನ್ನೆಯ ಮೂಲಕ ಸುಮ್ಮನಿರಿಸಲು ಸೂಚಿಸಿದರು. ಅದನ್ನು ಸೂಕ್ಷ್ಮವಾಗಿ ಗಮನಿಸಿದ ಅರಸು, ‘ಚಿರಂಜೀವಿ ಸಿಂಗ್ ಹೇಳಲಿ, ನಾನು ಇವರ ಮಾತನ್ನೇ ಕೇಳದಿದ್ದರೆ, 300 ಜನ ಶಾಸಕರು ಹೇಗೆ ನನ್ನ ಮಾತು ಕೇಳುತ್ತಾರೆ’ ಎಂದರು. ಅದು ಆ ಕ್ಷಣದ ಮಾತಾಗಿರಬಹುದು, ಆದರೆ ಅದರಲ್ಲಿ ಅಡಗಿರುವ ವಿವೇಕ ಮತ್ತು ದೂರದೃಷ್ಟಿತ್ವ ಸಾಮಾನ್ಯದ್ದಲ್ಲ.
ತುರ್ತು ಪರಿಸ್ಥಿತಿಯ ಸಂದರ್ಭವನ್ನು ಅರಸು ನಿಭಾಯಿಸಿದ ಬಗೆ ಹೇಗಿತ್ತು?
ಚ್ಟ-ತುರ್ತು ಪರಿಸ್ಥಿತಿಯನ್ನು ಅರಸು ಅವರು ಸಮರ್ಥವಾಗಿಯೇ ನಿಭಾಯಿಸಿದರು. ವಿರೋಧಿಗಳನ್ನು ವಿರೋಧಿಗಳೆಂದು ಪರಿಗಣಿಸದೆ, ಎಲ್ಲರನ್ನು ಸಮಾನವಾಗಿ ನೋಡಿಕೊಂಡರು. ನಾನು ಗಮನಿಸಿದಂತೆ, ಆ ಸಂದರ್ಭದಲ್ಲಿ 2-3 ಜಿಲ್ಲೆಗಳು ವಿವಿಧ ಕಾರಣಗಳಿಗಾಗಿ ಸುದ್ದಿಯಾದವು. ಅದಕ್ಕೆ ಕಾರಣ ಆ ಜಿಲ್ಲೆಗಳ ಜಿಲ್ಲಾಧಿಕಾರಿಗಳೇ ಹೊರತು ಅರಸು ಅವರಲ್ಲ. ನನ್ನ ಪ್ರಕಾರ ತುರ್ತು ಪರಿಸ್ಥಿತಿಯಿಂದ ಅರಸು ಅವರ ಸರಕಾರಕ್ಕೆ ಯಾವ ಅನುಕೂಲವೂ ಆಗಲಿಲ್ಲ. ಅರಸು ಅಂದುಕೊಂಡದ್ದು ತುರ್ತು ಪರಿಸ್ಥಿತಿಯಲ್ಲಿ ನೆರವೇರಲಿಲ್ಲ. ಉದಾಹರಣೆಗೆ ಭೂ ಸುಧಾರಣೆ ಕಾಯ್ದೆ ಇದೆಯಲ್ಲ, ಅದು ಕರಾವಳಿಯಲ್ಲಿ ಸ್ವಲ್ಪ ಯಶಸ್ವಿಯಾದದ್ದನ್ನು ಬಿಟ್ಟರೆ, ಬೇರೆ ಪ್ರಯೋಜನ ಆಗಲಿಲ್ಲ. ಈಗ ನೋಡಿದ್ರೆ ಅಂಥದ್ದೇನೂ ಆಗಿಯೇ ಇಲ್ಲವೇನೋ ಅನ್ನಿಸುತ್ತಿದೆ. ತುರ್ತು ಪರಿಸ್ಥಿತಿ ಬರದೆ ಇದ್ದಿದ್ದರೆ, ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲು ಅರಸು ಅವರಿಗೆ ಫ್ರೀ ಹ್ಯಾಂಡ್ ಸಿಕ್ತಿತ್ತು ಅನ್ನುವುದು ನನ್ನ ಅನಿಸಿಕೆ. ಅಷ್ಟರಮಟ್ಟಿಗೆ ಅವರಲ್ಲಿ ಕನಸುಗಳಿದ್ದವು, ಕಾರ್ಯಕ್ರಮಗಳಿದ್ದವು.
ಇಷ್ಟಿದ್ದರೂ ಕನ್ನಡದ ಚಿಂತಕರು, ಬುದ್ಧಿಜೀವಿಗಳು ಅರಸು ವಿರುದ್ಧವಿದ್ದರಲ್ಲ?
ಬುದ್ಧಿಜೀವಿಗಳ ದೃಷ್ಟಿಯೆಲ್ಲ ಇಂದಿರಾ ಮತ್ತು ಕಾಂಗ್ರೆಸ್ ವಿರುದ್ಧವಿತ್ತು. ತುರ್ತು ಪರಿಸ್ಥಿತಿ ಹೇರಿಕೆ ಅದಕ್ಕೆ ಪೂರಕವಾಗಿ ಕೆಲಸ ಮಾಡಿತ್ತು. ಆ ಸಂದರ್ಭದಲ್ಲಿ, ನಾನು ವಾರ್ತಾ ಇಲಾಖೆಯ ನಿರ್ದೇಶಕ(ಅಡಿಷನಲ್ ಇನ್‌ಚಾರ್ಜ್)ನಾಗಿದ್ದಾಗ, ಪತ್ರಿಕಾ ಸಂಪಾದಕರು, ಹಿರಿಯ ಪತ್ರಕರ್ತರು ಮತ್ತು ಕೆಲ ಬುದ್ಧಿಜೀವಿಗಳ ಜೊತೆ ಅರಸು ಅವರನ್ನು ಒನ್ ಟು ಒನ್ ಡಿಸ್ಕಷನ್‌ಗೆ, ಡಿನ್ನರ್‌ಗೆ ಅರೇಂಜ್ ಮಾಡಿದ್ದೆ. ಆಗ ಅರಸು ಅವರ ಮೇಲಿದ್ದ ಅಭಿಪ್ರಾಯ ಕೊಂಚ ಬದಲಾಗಿತ್ತು.
ಲಂಕೇಶರು ಕೂಡ ಅರಸರನ್ನು ಕಟುವಾಗಿ ಟೀಕಿಸುತ್ತಿದ್ದರಲ್ಲ?
ಟ-ಲಂಕೇಶ್ ನನ್ನ ಒಳ್ಳೆಯ ಸ್ನೇಹಿತರು. ಅವರೊಂದಿಗೆ ಕಾಲ ಕಳೆಯುವ, ಕೂತು ಮಾತನಾಡುವ ಸಂದರ್ಭ ಒದಗಿ ಬಂದಾಗಲೆಲ್ಲ ನಾನು ದೇವರಾಜ ಅರಸು ಅವರ ಬಗ್ಗೆ, ಅವರ ಕಾರ್ಯಕ್ರಮಗಳ ಬಗ್ಗೆ, ಅವರ ಗುಣ-ಸ್ವಭಾವಗಳ ಬಗ್ಗೆ... ಹೀಗೆ ನಾನು ಹತ್ತಿರದಿಂದ ಕಂಡ ಚಿತ್ರಣವನ್ನು ಸಾಕಷ್ಟು ವಿವರವಾಗಿ ಹೇಳುತ್ತಿದ್ದೆ. ಅದನ್ನು ಕೇಳಿಸಿಕೊಂಡ ಲಂಕೇಶ್, ‘ನಮಗೆ ಇದೆಲ್ಲ ಗೊತ್ತೇ ಇರಲಿಲ್ಲ’ ಎಂದಿದ್ದೂ ಇದೆ. ಅಷ್ಟೇ ಅಲ್ಲ, ಲಂಕೇಶ್ ಅಲ್ಲಿಗೇ ಸುಮ್ಮನಾಗದೆ ನನ್ನ ಆಫೀಸಿಗೂ ಎರಡುಮೂರು ಸಲ ಬಂದಿದ್ದರು, ಬಂದಾಗ ಸರಕಾರದ ಯೋಜನೆಗಳು, ಕಾರ್ಯಕ್ರಮಗಳಿಗೆ ಸಂಬಂಧಿಸಿದ ಫೈಲ್‌ಗಳನ್ನು ತೋರಿಸಿದ್ದೆ. ಮುಂದುವರಿದು ಅರಸು ಮತ್ತು ಲಂಕೇಶ್ ಭೇಟಿಗಾಗಿ ಎರಡು ಸಲ ದಿನಾಂಕ ಕೂಡ ಗೊತ್ತು ಮಾಡಿದ್ದೆ. ಇದೆಲ್ಲ ಆದ ಮೇಲೆ ಲಂಕೇಶರು, ‘ಅರಸು ಬಗ್ಗೆ ನನ್ನ ಅಭಿಪ್ರಾಯ ಬೇರೆ ಇತ್ತು, ಈಗ ಬದಲಾಗಿದೆ’ ಎಂದಿದ್ದರು. ಅರಸು ತೀರಿಕೊಂಡ ನಂತರ, ಅದನ್ನವರು ಅವರ ಪತ್ರಿಕೆಯಲ್ಲೂ ಬರೆದರು.
ಅರಸು ಅವರ ಗುಣ-ಸ್ವಭಾವಗಳು ಹೇಗಿದ್ದವು?
ಅರಸು ಅವರದು ಬಹಳ ದೊಡ್ಡಮನಸ್ಸು. ಮಾನವೀಯ ವ್ಯಕ್ತಿತ್ವ. ಆಗ ಅವರದೇ ಪಕ್ಷದಲ್ಲಿದ್ದ ಲಿಂಗಾಯತ ನಾಯಕರಾದ ಕೆ.ಎಚ್.ಪಾಟೀಲ್, ಅರಸು ಅವರ ಕ್ಯಾಬಿನೆಟ್ ಸಚಿವರಾಗಿದ್ದರೂ, ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ ಕೆ.ಎಚ್.ಪಾಟೀಲ್ ಮತ್ತು ಅರಸು ಇಬ್ಬರೂ ದೊಡ್ಡಮನಸ್ಸಿನ ದೊಡ್ಡ ನಾಯಕರು. ಇಬ್ಬರಲ್ಲೂ ಸಣ್ಣತನವಿರಲಿಲ್ಲ. ಸಾರ್ವಜನಿಕವಾಗಿ, ವೈಯಕ್ತಿಕವಾಗಿ ಒಬ್ಬರಿಗೊಬ್ಬರು ಗೌರವಿಸುವ, ಘನತೆಯಿಂದ ನಡೆಸಿಕೊಳ್ಳುವ ಬಗೆಯಲ್ಲಿ ಇಬ್ಬರದೂ ಮೇಲುಗೈ.
ಅರಸು ಅವರ ದೊಡ್ಡ ಗುಣ ಅಂದಿರಿ, ಅದಕ್ಕೊಂದು ಉದಾಹರಣೆ:
ಅರಸು ಅವರಿಗೆ ಮುಸ್ಲಿಮರ ಜೊತೆ ಬಹಳ ಒಳ್ಳೆಯ ಬಾಂಧವ್ಯವಿತ್ತು. ಮುಸ್ಲಿಮರ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿದ್ದರು. ಮುಸ್ಲಿಮ್ ನಾಯಕರನ್ನು ಗುರುತಿಸಿ ಅವಕಾಶಗಳನ್ನು ಸೃಷ್ಟಿಸಿದ್ದರು. ಅದರಲ್ಲಿ ಮೈಸೂರಿನ ಅಝೀಝ್ ಸೇಠ್ ಕೂಡ ಒಬ್ಬರು. ಇವರು ಅರಸು ಅವರಿಗೆ ಆತ್ಮೀಯರಾಗಿದ್ದರು. ಅರಸು ಅವರ ಕೊನೆಯ ದಿನಗಳಲ್ಲಿ, ಅಝೀಝ್ ಸೇಠ್, ‘ಸ್ವಲ್ಪ ಹಣ ಸಹಾಯ ಬೇಕಾಗಿತ್ತು’ ಎಂದು ಕೇಳಿಕೊಂಡರು. ತಕ್ಷಣ ಅರಸು ಅವರು, ಮೊಯಿನುದ್ದೀನ್ ಕರೆಸಿ, ‘ಸೇಠ್‌ರಿಗೆ ಏನೋ ಪ್ರಾಬ್ಲಂ ಅಂತೆ, ಹಣದ ಆವಶ್ಯಕತೆ ಇದೆಯಂತೆ, ಕೊಟ್ಟುಬಿಟ್ಟು ಬಾ’ ಎಂದರು. ಆದರೆ ಅಝೀಝ್ ಸೇಠ್‌ರ ಅವತ್ತಿನ ರಾಜಕೀಯ ನಡೆಯನ್ನು ಮತ್ತು ನಾಯಕನಿಷ್ಠೆಯನ್ನು ಬಹಳ ಹತ್ತಿರದಿಂದ ಕಂಡಿದ್ದ ಮೊಯಿನುದ್ದೀನ್, ‘ಸಾರ್, ಅವರು ನಿಮ್ಮನ್ನು ಬಿಟ್ಟು, ನಮ್ಮ ವಿರೋಧಿ ಪಾಳೆಯವಾದ ಗುಂಡೂರಾವ್ ಜೊತೆ ಸೇರಿಕೊಳ್ಳಲು ಓಡಾಡು ತ್ತಿದ್ದಾರೆ’ ಎಂದು ಖಚಿತ ಮಾಹಿತಿಗಳನ್ನೊಳಗೊಂಡ ಸುದ್ದಿಯನ್ನು ಕೊಟ್ಟರು. ‘ಇಲ್ಲ, ಅವರು ಕಷ್ಟದಲ್ಲಿದ್ದಾರಂತೆ, ಹಣ ಕೊಟ್ಟು ಬಾ’ ಎಂದು ಹೇಳಿ ಕೊಡಿಸಿದರು. ಹಣ ಪಡೆದ ಅಝೀಝ್ ಸೇಠ್, ಮಾರನೆ ದಿನ ಬೆಳಗ್ಗೆ ಗುಂಡೂರಾಯರ ಪಕ್ಷದಲ್ಲಿದ್ದರು.
ಅಝೀಝ್ ಸೇಠ್ ಅಲ್ಲಿಗೆ ಹಾರುವುದು ಅರಸು ಅವರಿಗೆ ಗೊತ್ತಿತ್ತು. ಗೊತ್ತಿದ್ದೂ ಅವರಿಗೆ ಹಣ ಕೊಡಿಸಿದರು. ಇದು ಅರಸು ಅವರ ದೊಡ್ಡ ಗುಣ, ಸೇಠ್‌ರ ಸಣ್ಣತನ.