‘ಫೆಲೆಸ್ತೀನಿಯರಿಗೆ ಯಹೂದಿಗಳಿಂದ ಮುಕ್ತಿ ಸಿಗುವವರೆಗೂ ನಾವು ಸ್ವತಂತ್ರರಲ್ಲ’
ಲೇಖಕಿ ನೇಮಿಚಂದ್ರರ ‘ಯಾದ್‌ವಶೇಮ್’ ಪುಸ್ತಕದ ಓದು ಕಾರ್ಯಕ್ರಮ;
ಬೆಂಗಳೂರು, ಜ.3: ಯಹೂದಿಗಳ ಆಕ್ರಮಣ ಮೂರನೆ ಮಹಾಯುದ್ಧವನ್ನು ಪ್ರತಿನಿಧಿಸುತ್ತಿದೆ. ಫೆಲೆಸ್ತೀನಿಯರಿಗೆ ಯಹೂದಿಗಳಿಂದ ಮುಕ್ತಿ ಸಿಗುವವರೆಗೂ ನಾವು ಎಂದಿಗೂ ಸ್ವತಂತ್ರರಲ್ಲ. ಹೀಗಾಗಿ ಫೆಲೆಸ್ತೀನಿಯರ ರಕ್ಷಣೆಗೆ ಭ್ರಾತೃತ್ವ ರಾಷ್ಟ್ರಗಳು ಧ್ವನಿಗೂಡಿಸಬೇಕು ಎಂದು ಸಾಹಿತಿ ಲಕ್ಷ್ಮೀಪತಿ ಕೋಲಾರ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘ ಮತ್ತು ಸಮುದಾಯ ಸಂಘಟನೆ ರವಿವಾರ ನಗರದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ನ ಸೇತು ಸಭಾಂಗಣದಲ್ಲಿ ಆಯೋಜಿಸಿದ್ದ ಫೆಲೆಸ್ತೀನಿ ಕಾವ್ಯ ಮತ್ತು ಲೇಖಕಿ ನೇಮಿಚಂದ್ರರ ‘ಯಾದ್‌ವಶೇಮ್’ ಪುಸ್ತಕದ ಓದು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇಸ್ರೇಲ್‌ನ ಯಹೂದಿಗಳು ನಡೆಸುತ್ತಿರುವ ನಿರಂತರ ದಾಳಿಯಿಂದ ಫೆಲೆಸ್ತೀನಿಯರಲ್ಲಿ ಶೇ.63ರಷ್ಟು ಮಂದಿ ಜನಸಾಮಾನ್ಯರು ಬಲಿಯಾಗಿದ್ದಾರೆ. ಇನ್ನುಳಿದ ನಾಗರಿಕರಿಗೆ ರಕ್ಷಣೆ ನೀಡಲು ಭಾರತ ಮತ್ತು ಇತರ ದೇಶಗಳು ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.
ವಿಶ್ವಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ಇಸ್ರೇಲ್‌ನ ಯಹೂದಿಗಳ ಆಕ್ರಮಣ ಮತ್ತು ನಿರಂತರ ದಾಳಿಯಿಂದ ಫೆಲೆಸ್ತೀನಿಯರಲ್ಲಿ ಶೇ.63 ಮಂದಿ ಬಲಿಯಾಗಿದ್ದಾರೆ. ಇಲ್ಲಿ ನಡೆಯುತ್ತಿರುವ ಪೈಶಾಚಿಕ ಕೃತ್ಯಗಳನ್ನು ಹೇಳತೀರದಂತಾಗಿದೆ. ಬರ್ಬರ ಕೊಲೆ, ಹಲ್ಲೆ, ಅತ್ಯಾಚಾರಗಳಿಗೆ ಮಿತಿಯೇ ಇಲ್ಲದಂತಾಗಿದೆ ಎಂದು ತೀವ್ರ ಕಳವಳ ವ್ಯಕ್ತಪಡಿಸಿದರು.
ಯಹೂದಿಗಳ ದಾಳಿಯಿಂದ ಇಲ್ಲಿನ ನಾಗರಿಕರು ದಿನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಇಲ್ಲಿ ಯುದ್ಧದ ನೆಪದಲ್ಲಿ ನರಮೇಧ ನಡೆಯುತ್ತಿದೆ ಎಂದು ನೋವಿನಿಂದ ನುಡಿದ ಅವರು, ಮಕ್ಕಳು, ಮಹಿಳೆಯರು, ವೃದ್ಧರನ್ನು ಗುರಿಯಾಗಿಸಿ ಯಹೂದಿಗಳು ತಮ್ಮ ಪೈಶಾಚಿಕ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಅಲ್ಲಿನ ಬೀಕರ, ಭೀಭತ್ಸ, ಘಟನೆಗಳ ಘೋರ ಚಿತ್ರಣವನ್ನು ಬಿಚ್ಚಿಟ್ಟರು.
ಇಲ್ಲಿನ ನಾಗರಿಕರಿಗೆ ಆಹಾರ, ಔಷಧಿ ಸೇರಿದಂತೆ ದಿನ ನಿತ್ಯ ಬಳಕೆ ಪದಾರ್ಥಗಳು ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಫೆಲೆಸ್ತೀನಿಯರ ಜೀವನ ದುಸ್ತರವಾಗಿದೆ. ಫೆಲೆಸ್ತೀನಿಯರ ಮೇಲೆ ನಡೆಯುತ್ತಿರುವ ಇಸ್ರೇಲ್ ದಾಳಿಯನ್ನು ನಾಟಕ ರೂಪದಲ್ಲಿ ಹೊರತರಲು ತೀರ್ಮಾನಿಸಿದ್ದೇನೆ. ಈ ನಿಟ್ಟಿನಲ್ಲಿ ಸಮಗ್ರ ಮಾಹಿತಿಯನ್ನು ಸಂಗ್ರಹಿಸುತ್ತಿರುವುದಾಗಿ ಲಕ್ಷ್ಮೀಪತಿ ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಜನವಾದಿ ಮಹಿಳಾ ಸಂಘದ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಮಾತನಾಡಿ, ಫೆಲೆಸ್ತೀನಿಯರ ಸಹಾಯಕ್ಕೆ ಎಲ್ಲರೂ ಸಹಾಯ ಚಾಚಬೇಕಿದೆ. ಫೆಲೆಸ್ತೀನಿಯರ ರಕ್ಷಣೆಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಭಾಷ್ಯವನ್ನು ರೂಪಿಸಿಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ.ಮಾಹೆರ್ ಮನ್ಸೂರ್, ಡಾ.ಕೆ.ಶರೀಫಾ, ಸುಬ್ಬು ಹೊಲೆಯಾರ್, ಷಾಕೀರ ಖಾನಂ, ಹಮೀದ್ ಬಾಬರಿ ಸಂಗಡಿಗರು ಫೆಲೆಸ್ತೀನಿ ಕಾವ್ಯವನ್ನು ವಾಚಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ನೇಮಿಚಂದ್ರ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಉಪಸ್ಥಿತರಿದ್ದರು.





