‘ಬೈರಪ್ಪ ಕಾದಂಬರಿಗಳನ್ನು ಓದಲು ವೈಜ್ಞಾನಿಕತೆಯ ಅಗತ್ಯವಿಲ್ಲ’

ಬೆಂಗಳೂರು, ಜ. 3: ಹಿರಿಯ ಸಾಹಿತಿ ಡಾ. ಎಸ್.ಎಲ್.ಬೈರಪ್ಪರ ಕಾದಂಬರಿಗಳನ್ನು ಓದಲು ವೈಜ್ಞಾನಿಕ ಮನೋಭಾವನೆಯ ಅಗತ್ಯವಿಲ್ಲ ಎಂದು ಲೇಖಕ ಶತಾವಧಾನಿ ಡಾ.ಆರ್.ಗಣೇಶ್ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಡಾ.ಎಸ್.ಎಲ್.ಬೈರಪ್ಪ ‘ಕಾದಂಬರಿ ಪ್ರಿಯರ ಕೂಟ’ ನಗರದ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಆಯೋಜಿಸಿದ್ದ ‘ಎಸ್.ಎಲ್.ಬೈರಪ್ಪ ಕಾದಂಬರಿಗಳನ್ನು ಆಧರಿಸಿದ ಅಷ್ಟಾವಧಾನ’ ಕಾರ್ಯಕ್ರಮದಲ್ಲಿ ಅವಧಾನಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಎಸ್.ಎಲ್.ಬೈರಪ್ಪ ಅವರ ಕಾದಂಬರಿಗಳನ್ನು ಓದಲು ನಿರ್ಮಲವಾದ ಮನಸ್ಸಿರಬೇಕು. ಆದರೆ, ಬೈರಪ್ಪ ಕಾದಂಬರಿಗಳನ್ನು ವಿರೋಧಿಸುವುದನ್ನೆ ಪರಿಪಾಠ ಮಾಡಿಕೊಂಡಿರುವ ಬುದ್ಧಿಜೀವಿಗಳಿಗೆ ಕೊಂಬು ಬೆಳೆದುಕೊಂಡಿದೆ. ಹೀಗಾಗಿ ಅವರ ಕಾದಂಬರಿಗಳಲ್ಲಿ ಬರುವ ಪಾತ್ರಗಳ ರೂಪ, ಸ್ವರೂಪಗಳ ಬಗ್ಗೆ ಬುದ್ಧಿ ಜೀವಿಗಳಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಶತಾವಧಾನಿ ಗಣೇಶ್ ಅಭಿಪ್ರಾಯಿಸಿದರು.
ಸಮಾಜದಲ್ಲಿ ಕಂಡುಬರುವ ಯಾವುದೇ ವಸ್ತುವನ್ನು ಇದ್ದ ರೀತಿಯಲ್ಲಿಯೇ ನೋಡಿದರೆ ಕಲಾತ್ಮಕತೆ ಕಾಣಿಸುತ್ತದೆ. ಆದರೆ, ಬಹುತೇಕ ಮಂದಿ ಪ್ರತಿಯೊಂದನ್ನು ಪೂರ್ವಗ್ರಹ ಪೀಡಿತರಾಗಿಯೇ ನೋಡುವವರಿದ್ದಾರೆ. ಅಂತಹವರಿಗೆ ಎಸ್.ಎಲ್.ಬೈರಪ್ಪರ ಕಾಂದಬರಿಗಳು ನಕಾರಾತ್ಮಕವಾಗಿ ಕಾಣು ವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂತವರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ ಅಗತ್ಯವಿಲ್ಲವೆಂದು ಅವರು ತಿಳಿಸಿದರು.
ಸಮಾಜದಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳ ನಿವಾರಣೆಗೆ ಪ್ರತಿಯೊಬ್ಬರು ಆಂತರಿಕವಾಗಿ ಸಿದ್ಧರಾಗಬೇಕು. ಸಮಸ್ಯೆಯನ್ನು ಬಗೆಹರಿಸಲು ಹಲವು ಮಾರ್ಗಗಳಿವೆ. ಆ ಎಲ್ಲ ಮಾರ್ಗಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಅನುಸರಿಸುವ ಮೂಲಕ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಕೈ ಜೋಡಿಸಬೇಕೆಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಕಾದಂಬರಿಕಾರ ಎಸ್.ಎಲ್.ಬೈರಪ್ಪ, ಕವಿ ಲಕ್ಷ್ಮೀನಾರಾಯಣ ಭಟ್ಟ, ಬರಹಗಾರ್ತಿ ಸುಧಾಮೂರ್ತಿ ಮತ್ತಿತರರಿದ್ದರು.





