ಚುಟುಕು ಸುದ್ದಿಗಳು
ನಾಳೆ ಅಧಿಕಾರಿಗಳೊಂದಿಗೆ ವರ್ತಕರ ಸಂವಾದ
ಉಡುಪಿ, ಜ.3: ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣಾ ವೇದಿಕೆಯ ವತಿ ಯಿಂದ ಅಧಿಕಾರಿಗಳೊಂದಿಗೆ ವರ್ತಕರ ಸಂವಾದ ಕಾರ್ಯಕ್ರಮವನ್ನು ಜ.5ರಂದು ಬೆಳಗ್ಗೆ 10ಕ್ಕೆ ಉಡುಪಿ ದುರ್ಗಾ ಇಂಟರ್‌ನ್ಯಾಶನಲ್ ಹೊಟೇಲ್‌ನ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾ ಎಸ್ಪಿ ಅಣ್ಣಾಮಲೈ ಉದ್ಘಾಟಿಸಲಿರುವರು. ಸಂಪನ್ಮೂಲ ವ್ಯಕ್ತಿಗಳಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ್ ಕುಮಾರ್, ಪೌರಾಯುಕ್ತ ಡಿ.ಮಂಜುನಾಥಯ್ಯ, ಆರ್‌ಟಿಒ ಎಸ್.ಪಿ. ಸುರೇಂದ್ರಪ್ಪ ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.
ಜ.8ರಂದು ಉಚಿತ ನೇತ್ರ ಚಿಕಿತ್ಸಾ ಶಿಬಿರ
ಮೂಡುಬಿದಿರೆ, ಜ.3: ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ನೇತೃತ್ವದಲ್ಲಿ ಮಂಗಳೂರು ವೆನ್ಲಾಕ್ ಅಸ್ವತ್ರೆಯ ಸಂಚಾರ ನೇತ್ರ ಘಟಕ, ಮಂಗಳೂರಿನ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ಮುಚ್ಚೂರು ನೀರುಡೆ ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ಜ.8ರಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ನಡೆಯಲಿದೆ.
ಅಂದು ಬೆಳಗೆ 9:30ರಿಂದ 12:30ವರೆಗೆ ನಡೆಯುವ ಶಿಬಿರವನ್ನು ಪುರಸಭಾಧ್ಯಕ್ಷೆ ರೂಪಾ ಎಸ್. ಶೆಟ್ಟಿ ಉದ್ಘಾಟಿಸುವರು ಎಂದು ಟ್ರಸ್ಟ್ ಅಧ್ಯಕ್ಷ ಚಾವಡಿ ಮನೆ ಜಗನ್ನಾಥ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸಂಚಾಲಕ ನರಸಿಂಹ ಮಡಿವಾಳ್, ಸದಾನಂದ ನಾರಾವಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.
ಇಂದು ಎಲ್‌ಬಿಎಸ್ ಎಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣ ಉದ್ಘಾಟನೆ
ಕಾಸರಗೋಡು, ಜ.3: ಕಾಸರಗೋಡು ಎಲ್‌ಬಿಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ 2.5 ಕೋ.ರೂ. ವೆಚ್ಚದಲ್ಲಿ ನಿರ್ಮಿಸಿದ ಕಾಲೇಜಿನ ಪ್ರಧಾನ ಕ್ರೀಡಾಂಗಣ ಹಾಗೂ ಮಲ್ಟಿ ಸ್ಪೋರ್ಟ್ಸ್ ಪ್ಲೇ ಸ್ಪೇಸ್ ಜ.4ರಂದು ಅಪರಾಹ್ನ 2:30ಕ್ಕೆ ಉದ್ಘಾಟನೆಗೊಳ್ಳಲಿದೆ. ಮುಖ್ಯಮಂತ್ರಿ ಉಮ್ಮನ್ ಚಾಂಡಿ ಉದ್ಘಾಟಿಸುವರು. ಶಿಕ್ಷಣ ಸಚಿವ ಪಿ.ಕೆ.ಅಬ್ದುರಬ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.
ಜ.14: ಬಾಲಯೇಸು ದೇವಾಲಯದ ವಾರ್ಷಿಕೋತ್ಸವ
ಮಂಗಳೂರು, ಜ.3: ಬಿಕರ್ನಕಟ್ಟೆ ಬಾಲಯೇಸುವಿನ ದೇವಾಲಯದ ವಾರ್ಷಿಕ ಮಹೋತ್ಸವ ಜ.14ರಂದು ನಡೆಯಲಿದೆ ಎಂದು ವಂ.ಜೋ. ತೌರೊ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಜ.5ರಿಂದ 13ರ ತನಕ ನವೇನಾ ಪ್ರಾರ್ಥನೆಗಳು ನಡೆಯಲಿವೆ. ಜ.14ರಂದು ಮುಂಜಾನೆಯಿಂದ ಅಪರಾಹ್ನ 12:30ರವರೆಗೆ ಬಲಿಪೂಜೆ, ಮಧ್ಯಾಹ್ನ 1:30ಕ್ಕೆ ಪ್ರಾರ್ಥನಾ ವಿಧಿ, ಸಂಜೆ 6ಕ್ಕೆ ಬಾಲಯೇಸುವಿನ ಹಬ್ಬ ನಡೆಯಲಿದೆ. ಜ.15ರಂದು ಕೂಡಾ ಹಬ್ಬದ ಬಲಿಪೂಜೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಭೋಪಾಲ್ ಧರ್ಮಪ್ರಾಂತದ ಧರ್ಮಾಧ್ಯಕ್ಷ ವಂ.ಡಾ.ಲಿಯೋ ಕರ್ನೆಲಿಯೊ ಭಾಗವಹಿಸುವರು. ನವೇನಾದಂದು ನಿತ್ಯ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಇದೆ. ಜ.4ರಂದು ಸಂಜೆ 4:30ಕ್ಕೆ ಕುಲಶೇಖರ ಕೊರ್ಡೆಲ್ ದೇವಾಲಯದಿಂದ ಬಾಲಯೇಸುವಿನ ಪುಣ್ಯಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ, ಧ್ವಜಾರೋಹಣ, ಬಲಿಪೂಜೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಾಲಯೇಸು ದೇವಾಲಯದ ನಿರ್ದೇಶಕ ವ. ಎಲಿಯಾಸ್ ಡಿಸೋಜ, ಸಮಿತಿ ಸದಸ್ಯ ಸ್ಟಾನ್ಲಿ ಬಂಟ್ವಾಳ ಉಪಸ್ಥಿತರಿದ್ದರು.
ಜ.15ರಂದು ವಿಚಾರಗೋಷ್ಠಿ
ಉಡುಪಿ, ಜ.3: ಉಡುಪಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಆಶ್ರಯದಲ್ಲಿ ‘ಸರ್ವರಿಗಾಗಿ ಉಡುಪಿ ಪ್ರವಾಸೋದ್ಯಮ’ ಎಂಬ ವಿಷಯದ ಕುರಿತ ವಿಚಾರ ಸಂಕಿರಣವೊಂದು ಜ.15ರಂದು ಹೊಟೇಲ್ ಡಯಾನ ಸಭಾಗೃಹದಲ್ಲಿ ನಡೆಯಲಿದೆ ಎಂದು ವಿಚಾರಸಂಕಿರಣದ ಸಂಯೋಜಕ ಎಂ. ನಾಗರಾಜ್ ಹೆಬ್ಬಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ವಿಚಾರ ಸಂಕಿರಣವನ್ನು ಶಾಸಕ ಪ್ರಮೋದ್ ಮಧ್ವರಾಜ್ ಉದ್ಘಾಟಿಸ ಲಿದ್ದು, ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಳಿಕ ವಿವಿಧ ವಿಷಯಗಳ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ.
ಇದರಲ್ಲಿ ಭಾಗವಹಿಸಲಿಚ್ಛಿಸುವ ಸಾರ್ವಜನಿಕರು, ವಿದ್ಯಾರ್ಥಿಗಳು ಜ.5ರೊಳಗೆ ತಮ್ಮ ಹೆಸರನ್ನು ಸಂಘಟಕರಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಚೇಂಬರ್ ಅಧ್ಯಕ್ಷ ಕೃಷ್ಣರಾವ್ ಕೊಡಂಚ, ಸಹ ಸಂಚಾಲಕ ತೋನ್ಸೆ ಗಣೇಶ ಶೆಣೈ ಹಾಗೂ ಎಸ್.ವಿ.ಭಟ್ ಉಪಸ್ಥಿತರಿದ್ದರು.
ಸಮಾಲೋಚಕರ ಹುದ್ದೆಗೆ ಅರ್ಜಿಗಳ ಆಹ್ವಾನ
ಮಂಗಳೂರು, ಜ.3: ಜಿಲ್ಲಾ ಲೇಡಿಗೋಶನ್ ಆಸ್ಪತ್ರೆಯ ಮಹಿಳಾ ವಿಶೇಷ ಚಿಕಿತ್ಸಾ ಘಟಕದಲ್ಲಿ ತೆರವಾಗುವ ಸಮಾಲೋಚಕರ ಹುದ್ದೆಗೆ ಎಂ.ಎಸ್.ಡಬ್ಲು (ಮೆಡಿಕಲ್ ಮತ್ತು ಸೈಕ್ಯಾಟಿಕ್ ಸೋಶಿಯಲ್ ವರ್ಕ್) ವಿಷಯದಲ್ಲಿ ಸ್ನಾತಕೋತ್ತರ ಪದವೀಧರ, ಕಂಪ್ಯೂಟರ್ ಜ್ಞಾನವುಳ್ಳ, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸಿದ್ಧರಿರುವ 22ರಿಂದ 35 ವರ್ಷದೊಳಗಿನ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜ.8 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗೆ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಜಿಪಂ ಕಟ್ಟಡ, ಉರ್ವಾಸ್ಟೋರ್ 575006, ದೂ.ಸಂ: 0824-2451254 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
ಜ.6: ವೃತ್ತಿ ಶಿಕ್ಷಣ ವಸ್ತುಗಳ ಪ್ರದರ್ಶನ ಉದ್ಘಾಟನೆ
ಮಂಗಳೂರು, ಜ.3: ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ, ಸರ್ವಶಿಕ್ಷಣ ಅಭಿಯಾನ ದ.ಕ. ಜಿಲ್ಲೆ, ವೃತ್ತಿ ಶಿಕ್ಷಣ ಶಿಕ್ಷಕರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ವಸ್ತುಗಳ ಪ್ರದರ್ಶನವು ಜ.6ರಂದು ಬೊಕ್ಕಪಟ್ಣದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಜ.10-- -17: ರಾಜ್ಯಮಟ್ಟದ ಇಸ್ಲಾಮಿಕ್ ವಾರ್ಷಿಕ ಪರೀಕ್ಷೆ
ಉಡುಪಿ, ಜ.3: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕರ್ನಾಟಕ ಇದರ ವಾರ್ಷಿಕ ಪರೀಕ್ಷೆಯು ಜ.10 ಮತ್ತು 17 ರಂದು ರಾಜ್ಯಾದ್ಯಂತ ಬೋರ್ಡ್‌ನ ಕೇಂದ್ರಗಳಲ್ಲಿ ನಡೆಯಲಿದೆ. ಇಸ್ಲಾಮಿಕ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ಡಿಪ್ಲೊಮಾ ಇನ್ ಇಸ್ಲಾಮಿಕ್ ಸ್ಟಡೀಸ್ ಕೋರ್ಸ್ ಗಳಿಗೆ ಪರೀಕ್ಷೆ ನಡೆಯಲಿದೆ. ರಾಜ್ಯಾದ್ಯಂತ 300ಕ್ಕೂ ಮಿಕ್ಕಿ ಕೇಂದ್ರಗಳಿದ್ದು, ಉಡುಪಿ ಜಿಲ್ಲೆಯಲ್ಲಿ ಕುಂದಾಪುರ, ಉಡುಪಿ, ಮಲ್ಪೆ, ಕಾಪು, ಕಾರ್ಕಳ, ತೋನ್ಸೆ, ಕಿರಿಮಂಜೇಶ್ವರ, ಆದಿಉಡುಪಿ, ಗಂಗೊಳ್ಳಿಯಲ್ಲಿ ಕೇಂದ್ರಗಳಿವೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಅಪರಾಹ್ನ 2:30ರಿಂದ 5:30ರವರೆಗೆ ಪರೀಕ್ಷೆಗಳು ನಡೆಯಲಿವೆ ಎಂದು ಉಡುಪಿಯ ಸಂಚಾಲಕ ನಿಸಾರ್ ಅಹ್ಮದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ







