ಪ್ರಸಕ್ತ ಮಕ್ಕಳ ಸಂಖ್ಯೆಯಾಧಾರದಲ್ಲಿ ಲಸಿಕೆ ಹಾಕಲು ಡಿಸಿ ಸೂಚ: ಪಲ್ಸ್ ಪೋಲಿಯೊ

ಮಂಗಳೂರು, ಜ.3: ಈ ತಿಂಗಳ 17 ಮತ್ತು ಫೆ.21ರಂದು ನಡೆಯುವ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಹಿಂದಿನ ವರ್ಷದ ಸಾಧನೆಯನ್ನಿಟ್ಟುಕೊಂಡು ನಿಗದಿತ ಗುರಿಯೊಂದಿಗೆ ಕಾರ್ಯಾಚರಿಸುವ ಬದಲು ದ.ಕ. ಜಿಲ್ಲೆಯಲ್ಲಿರುವ ಮಕ್ಕಳ ಬಗ್ಗೆ ಸಮಗ್ರ ಮಾಹಿತಿ ಯನ್ನು ಒಟ್ಟುಗೂಡಿಸಿ ಆ ಸಂಖ್ಯೆಯನ್ನು ನಿಗದಿತ ಗುರಿಯನ್ನಾಗಿರಿಸಿ ಲಸಿಕೆಯನ್ನು ಹಾಕಬೇಕು ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಸೂಚಿಸಿದ್ದಾರೆ.
ಪಲ್ಸ್ ಪೋಲಿಯೊ ಲಸಿಕೆಯನ್ನು ಹಾಕುವ ಬಗ್ಗೆ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಳೆದ ಹಲವು ವರ್ಷಗಳಿಂದ ಪಲ್ಸ್ ಪೋಲಿಯೊ ಹಾಕುವ ವಿಚಾರದಲ್ಲಿ ಆರೋಗ್ಯ ಇಲಾಖೆ ಈ ಹಿಂದಿನ ವರ್ಷದಲ್ಲಿ ಲಸಿಕೆ ಹಾಕಿದ ಸಂಖ್ಯೆಯನ್ನು ಮುಂದಿನ ವರ್ಷದ ಗುರಿಯಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿತ್ತು. ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಈ ವರ್ಷದಿಂದಲೇ ಜಿಲ್ಲೆ ಯಲ್ಲಿರುವ ಮಕ್ಕಳ ಸಂಖ್ಯೆಯ ಆಧಾರದಲ್ಲಿ ಲಸಿಕೆ ಹಾಕಬೇಕು ಎಂದು ಆದೇಶಿಸಿದರು.
ಈ ರೀತಿ ಮಾಡಿದಾಗ ಜಿಲ್ಲೆಯ ಮಕ್ಕಳು ಲಸಿಕೆ ಹಾಕಿಸಿಕೊಳ್ಳುವುದರಿಂದ ಹೊರಗುಳಿಯುವುದಿಲ್ಲ. ಜಿಲ್ಲೆಯ ಮಕ್ಕಳು ಹೊರಜಿಲ್ಲೆಗಳಿಗೆ ಹೋಗಿದ್ದರೆ ಅದನ್ನು ಗಮನಿಸಿ ಆ ಮಕ್ಕಳಿಗೆ ಲಸಿಕೆಯನ್ನು ಹಾಕಬೇಕು ಮತ್ತು ಹೊರಜಿಲ್ಲೆಗಳಿಂದ ಬರುವ ಮಕ್ಕಳಿಗೂ ಲಸಿಕೆಯನ್ನು ಹಾಕಬೇಕು ಎಂದು ಸೂಚಿಸಿದರು.ಪಲ್ಸ್ ಪೋಲಿಯೊ ದಿನದಂದು ಬೂತ್ ಮಟ್ಟ ದಲ್ಲಿ ಲಸಿಕೆ ಹಾಕಿ ನಂತರದ 3 ದಿನಗಳಲ್ಲಿ ಮನೆಮನೆ ಗಳಿಗೆ ತೆರಳಿ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಹಾಕಲಿದ್ದಾರೆ. ಲಸಿಕೆ ಹಾಕುವ 4 ದಿನಗಳಲ್ಲೂ ಸಂಜೆ ಅಧಿಕಾರಿಗಳು ಪರೀಶೀಲನೆ ಸಭೆ ನಡೆಸಿ ಮರುದಿನದ ಕಾರ್ಯಾಚರಣೆಯ ಬಗ್ಗೆ ಯೋಜನೆಗಳನ್ನು ಹಾಕಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಜ.4ರಿಂದ ಜ.12ರವರೆಗೆ ನಡೆಯಲಿರುವ ಮಿಷನ್ ಇಂದ್ರಧನುಷ್ ನಾಲ್ಕನೆ ಸುತ್ತಿನ ಕಾರ್ಯ ಕ್ರಮದಲ್ಲೂ ಶೇ.100 ಸಾಧನೆಯಾಗುವಂತೆ ನೋಡಿ ಕೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ದ.ಕ ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಸಿಕಂದರ್ ಪಾಶಾ, ನೋಡಲ್ ಅಧಿಕಾರಿ ಸತೀಶ್ಚಂದ್ರ ಉಪಸ್ಥಿತರಿದ್ದರು.





