ಸ್ಯಾಫ್ ಕಪ್: ಭಾರತ ಚಾಂಪಿಯನ್

ಸುನೀಲ್ ಚೆಟ್ರಿ ಗೆಲುವಿನ ರೂವಾರಿ
ತಿರುವನಂತಪುರ, ಜ.3: ನಾಯಕ ಸುನೀಲ್ ಚೆಟ್ರಿ ಹೆಚ್ಚುವರಿ ಸಮಯದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಆತಿಥೇಯ ಭಾರತ ತಂಡ ರವಿವಾರ ಇಲ್ಲಿ ನಡೆದ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಅಫ್ಘಾನಿಸ್ತಾನವನ್ನು 2-1 ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದೆ. ತಲಾ ಒಂದು ಗೋಲು ಬಾರಿಸಿದ ಚೆಟ್ರಿ ಹಾಗೂ ಜೇಜೆ ಲಾಲ್ ಪೆಕುಲ್ವಾ ಭಾರತ ನಾಲ್ಕು ವರ್ಷಗಳ ನಂತರ ಏಳನೆ ಬಾರಿ ಸ್ಯಾಫ್ ಕಪ್ ಗೆಲ್ಲಲು ಪ್ರಮುಖ ಕಾಣಿಕೆ ನೀಡಿದರು. ಈ ಗೆಲುವಿನ ಮೂಲಕ ಭಾರತ 2013ರ ಸ್ಯಾಫ್ ಕಪ್ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿತು. ಕಳೆದ ಆವೃತ್ತಿಯ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ ಅಫ್ಘಾನ್ ವಿರುದ್ಧ 0-2 ಅಂತರದಿಂದ ಸೋತಿತ್ತು.
ಭಾರತ 2011ರಲ್ಲಿ ದಿಲ್ಲಿಯಲ್ಲಿ ನಡೆದ ಸ್ಯಾಫ್ ಕಪ್ ಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿ ಕೊನೆಯ ಬಾರಿ ಟ್ರೋಫಿ ಜಯಿಸಿತ್ತು.
ಅತ್ಯಂತ ಪೈಪೋಟಿಯಿಂದ ಕೂಡಿದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಉಭಯ ತಂಡಗಳಿಂದ ಗೋಲು ದಾಖಲಾಗಲಿಲ್ಲ. 70ನೆ ನಿಮಿಷದಲ್ಲಿ ಝುಬೈರ್ ಅಮಿರಿ ಅಫ್ಘಾನ್‌ಗೆ 1-0 ಮುನ್ನಡೆ ಒದಗಿಸಿಕೊಟ್ಟರು. ತಕ್ಷಣವೇ ಪ್ರತಿರೋಧ ಒಡ್ಡಿದ ಭಾರತದ ಪರ ಲಾಲ್ ಪೆಕುಲ್ವಾ 72ನೆ ನಿಮಿಷದಲ್ಲಿ ಗೋಲು ಬಾರಿಸಿ ಸ್ಕೋರನ್ನು 1-1 ರಿಂದ ಸಮಬಲಗೊಳಿಸಿದರು.
ನಿಗದಿತ 90 ನಿಮಿಷದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನೀಡಿದ ಕಾರಣ ಪಂದ್ಯವು ಹೆಚ್ಚುವರಿ ಸಮಯಕ್ಕೆ ವಿಸ್ತರಣೆಯಾಯಿತು. ಹೆಚ್ಚುವರಿ ಸಮಯದ 101ನೆ ನಿಮಿಷದಲ್ಲಿ ಫ್ರೀಕಿಕ್‌ನ ಮೂಲಕ ಗೋಲು ಬಾರಿಸಿದ ಚೆಟ್ರಿ ಭಾರತಕ್ಕೆ 2-1 ಮುನ್ನಡೆ ಒದಗಿಸಿಕೊಟ್ಟರು. ಚೆಟ್ರಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ 50ನೆ ಗೋಲು ಬಾರಿಸಿದರು.
ಗೋಲು ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಅತ್ಯುತ್ತಮ ಆಟದ ನೆರವಿನಿಂದ ಕೊನೆ ತನಕ ಮುನ್ನಡೆಯನ್ನು ಕಾಯ್ದುಕೊಳ್ಳಲು ಯಶಸ್ವಿಯಾದ ಭಾರತ ಸ್ಯಾಫ್ ಕಪ್‌ನ್ನು ಎತ್ತಿ ಹಿಡಿದು ಹೊಸ ವರ್ಷದಲ್ಲಿ ಮೊದಲ ಉಡುಗೊರೆ ಪಡೆಯಿತು.







