ಇಂಗ್ಲೆಂಡ್‌ನ ಯುವ ಕ್ರಿಕೆಟಿಗ ಹಾಬ್ಡೆನ್ ನಿಧನ
ಲಂಡನ್, ಜ.3: ಇಂಗ್ಲೆಂಡ್‌ನ ಪ್ರತಿಭಾವಂತ ಹಾಗೂ ಉದಯೋನ್ಮುಖ ಕ್ರಿಕೆಟಿಗ ನಾಗಿದ್ದ ಮ್ಯಾಥ್ಯೂ ಹಾಬ್ಡೆನ್(22 ವರ್ಷ) ಹಠಾತ್ ನಿಧನರಾಗಿದ್ದಾರೆ.
ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯು ರವಿವಾರ ಮ್ಯಾಥ್ಯೂ ಹಾಬ್ಡೆನ್ ನಿಧನರಾಗಿದ್ದಾರೆಂದು ತಿಳಿಸಿದೆ. ಆದರೆ, ಅವರ ಸಾವಿಗೆ ಕಾರಣವೇನೆಂದು ಸ್ಪಷ್ಟಪಡಿಸಿಲ್ಲ.
ಬೌಲರ್ ಆಗಿದ್ದ ಮ್ಯಾಥ್ಯೂ ಕಳೆದ ಎರಡು ವರ್ಷಗಳಿಂದ ಇಂಗ್ಲೆಂಡ್‌ನ ಪಿಇಪಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದರು. ಕೌಂಟಿ ಕ್ರಿಕೆಟ್‌ನಲ್ಲಿ ಸಸ್ಸೆಕ್ಸ್ ತಂಡದ ಪರ ಆಡುತ್ತಿದ್ದರು.
‘‘ ಹಾಬ್ಡೆನ್ ತಾನು ಕಂಡ ಓರ್ವ ಶಕ್ತಿಶಾಲಿ ಕ್ರಿಕೆಟಿಗ. ವಿವಿಧ ಕ್ರೀಡೆಗಳ ಅಥ್ಲೀಟ್‌ಗಳು ಪಿಇಪಿ ಕಾರ್ಯಕ್ರಮದಲ್ಲಿದ್ದರು. ಅವರ ಪೈಕಿ ಹಾಬ್ಡೆನ್ ಹೆಚ್ಚು ಶಕ್ತಿಶಾಲಿಯಾಗಿದ್ದರು. ಪಾದರಸದಂತಿದ್ದ ಅವರು ಮುಂದಿನ ದಿನಗಳಲ್ಲಿ ಇಂಗ್ಲೆಂಡ್ ತಂಡದಲ್ಲಿ ಆಡುವ ನಿರೀಕ್ಷೆ ಹುಟ್ಟಿಸಿದ್ದರು’’ ಎಂದು ಇಸಿಬಿಯ ವೇಗದ ಬೌಲಿಂಗ್ ಕೋಚ್ ಕೆವಿನ್ ಶೈನ್ ಹೇಳಿದ್ದಾರೆ.
ಯುವ ಕ್ರಿಕೆಟಿಗ ಹಾಬ್ಡೆನ್ ನಿಧನದ ಸ್ಮರಣಾರ್ಥ ರವಿವಾರ ಕೇಪ್‌ಟೌನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಎರಡನೆ ಟೆಸ್ಟ್‌ನ ಎರಡನೆ ದಿನದಾಟದಲ್ಲಿ ಇಂಗ್ಲೆಂಡ್‌ನ ಆಟಗಾರರು ಶೋಕ ಸೂಚಕವಾಗಿ ಕೈಗೆ ಕಪ್ಪುಪಟ್ಟಿ ಧರಿಸಿದ್ದರು.







