ಶ್ರೀಲಂಕಾ ಕ್ರಿಕೆಟ್ ಮಂಡಳಿ ಚುನಾವಣೆ: ರಣತುಂಗ ಸಹೋದರರಿಗೆ ಸೋಲು
ಕೊಲಂಬೊ, ಜ.3: ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ(ಎಸ್‌ಎಲ್‌ಸಿ) ರವಿವಾರ ನಡೆದ ಚುನಾವಣೆಯಲ್ಲಿ ರಣತುಂಗಾ ಸಹೋದರರಾದ ಅರ್ಜುನ ಹಾಗೂ ನಿಶಾಂತ ಹೀನಾಯ ಸೋಲುಂಡಿದ್ದು, ಥಿಲಂಗ ಸುಮಥಿಪಾಲಾ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅತ್ಯಂತ ಬಿಗಿ ಭದ್ರತೆಯಲ್ಲಿ ರವಿವಾರ ಕ್ರೀಡಾ ಸಚಿವಾಲಯದಲ್ಲಿ ನಡೆದ ಚುನಾವಣೆಯಲ್ಲಿ ಹಾಲಿ ಸಂಸತ್‌ನ ಉಪ ಸಭಾಪತಿಯೂ ಆಗಿರುವ ಸುಮಥಿಪಾಲಾ 88 ಮತಗಳನ್ನು ಪಡೆದರೆ, ಎದುರಾಳಿ ನಿಶಾಂತ ರಣತುಂಗಾ 56 ಮತಗಳನ್ನು ಪಡೆದಿದ್ದರು. ಸುಮಿಥಿಪಾಲಾ ಮೂರನೆ ಬಾರಿ ಎಸ್‌ಎಲ್‌ಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಸುಮಿಥಿಪಾಲಾ ಹಂಗಾಮಿ ಸಮಿತಿಯಿಂದ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಿಶಾಂತ್ ಕಳೆದ ಅವಧಿಯಲ್ಲಿ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ನಿಶಾಂತರ ಸಹೋದರ, ಶ್ರೀಲಂಕಾದ ಮಾಜಿ ನಾಯಕ ಹಾಗೂ ಹಾಲಿ ಬಂದರು ಹಾಗೂ ಶಿಪ್ಪಿಂಗ್ ಖಾತೆಯ ಸಚಿವರಾದ ಅರ್ಜುನ ರಣತುಂಗ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸೋತಿದ್ದಾರೆ.
ರಣತುಂಗ ಅವರು ಸುಮಥಿಪಾಲಾ ಬಣದೊಂದಿಗೆ ಗುರುತಿಸಿಕೊಂಡಿರುವ ಎಂ. ಮಥಿವನನ್ ಹಾಗೂ ಜಯಂತ ಧರ್ಮದಾಸ ವಿರುದ್ಧ ಸೋತಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧ ಭ್ರಷ್ಟಾಚಾರ ಹಾಗೂ ದುರಾಡಳಿತ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಳೆದ ವರ್ಷದ ಮಾರ್ಚ್‌ನಲ್ಲಿ ಶ್ರೀಲಂಕ ಸರಕಾರ ಕ್ರಿಕೆಟ್ ಮಂಡಳಿಯನ್ನು ವಿಸರ್ಜಿಸಿತು. ಭ್ರಷ್ಟಾಚಾರದ ತನಿಖೆಗಾಗಿ ಸಮಿತಿಯನ್ನು ನೇಮಕ ಮಾಡಿತ್ತು.
ಬಿಕ್ಕಟ್ಟು ಎದುರಿಸುತ್ತಿರುವ ಕ್ರಿಕೆಟ್ ಮಂಡಳಿಗೆ ಆದಷ್ಟು ಬೇಗನೆ ಚುನಾವಣೆ ನಡೆಸುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಐಸಿಸಿ)ಶ್ರೀಲಂಕಾ ಸರಕಾರಕ್ಕೆ ತಿಳಿಸಿತ್ತು







