ಮೂರನೆ ಟೆಸ್ಟ್: ಸಂಕಷ್ಟದಲ್ಲಿ ವಿಂಡೀಸ್

ಸಿಡ್ನಿ, ಜ.3: ವೆಸ್ಟ್‌ಇಂಡೀಸ್ ತಂಡ ರವಿವಾರ ಇಲ್ಲಿ ಆರಂಭವಾಗಿರುವ ಮಳೆ ಬಾಧಿತ ಮೂರನೆ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯದ ಬೌಲರ್‌ಗಳಾದ ನಥನ್ ಲಿಯೊನ್ ಹಾಗೂ ಸ್ಟೀಫನ್ ಒ’ಕೀಫೆ ದಾಳಿಗೆ ನಲುಗಿದೆ.
ಮೊದಲ ದಿನವಾದ ರವಿವಾರ ಆಟ ಕೊನೆಗೊಂಡಾಗ ವಿಂಡೀಸ್ 6 ವಿಕೆಟ್‌ಗಳ ನಷ್ಟಕ್ಕೆ 207 ರನ್ ಗಳಿಸಿತ್ತು. ದಿನೇಶ್ ರಾಮ್ದಿನ್(23) ಹಾಗೂ ಕಾರ್ಲೊಸ್ ಬ್ರಾತ್‌ವೇಟ್(ಔಟಾಗದೆ 35) ಕ್ರೀಸ್ ಕಾಯ್ದುಕೊಂಡಿದ್ದರು.
ಇಲ್ಲಿನ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ(ಎಸ್‌ಸಿಜಿ) ನಡೆದ 3ನೆ ಟೆಸ್ಟ್‌ನ ಮೊದಲ ದಿನದ ಎರಡು ಗಂಟೆ ಹಾಗೂ 45 ನಿಮಿಷಗಳ ಪಂದ್ಯ ಮಳೆಗಾಹುತಿಯಾಯಿತು. ಆತಿಥೇಯ ಆಸ್ಟ್ರೇಲಿಯ ಸ್ಪಿನ್ ಸ್ನೇಹಿ ಎಸ್‌ಸಿಜಿ ಪಿಚ್‌ನಲ್ಲಿ ಮೊದಲ ಬಾರಿ ಇಬ್ಬರು ಸ್ಪಿನ್ನರ್‌ಗಳಾದ ಲಿಯೊನ್ ಹಾಗೂ ಒ’ಕೀಫೆ ಅವರನ್ನು ಕಣಕ್ಕಿಳಿಸಿತ್ತು.
ಆಫ್ ಸ್ಪಿನ್ನರ್ ಲಿಯೊನ್(2-68) ಜೆರೊಮ್ ಬ್ಲಾಕ್‌ವುಡ್(10) ಹಾಗೂ ಕ್ರೆಗ್ ಬ್ರಾತ್‌ವೇಟ್(85) ವಿಕೆಟ್‌ಗಳನ್ನು ಕಬಳಿಸಿದರು. ಎಡಗೈ ಸ್ಪಿನ್ನರ್ ಒ’ಕೀಫೆ(1-42) ವೆಸ್ಟ್‌ಇಂಡೀಸ್ ನಾಯಕ ಜಾಸನ್ ಹೋಲ್ಡರ್ ವಿಕೆಟ್ ಉರುಳಿಸಿದರು. ಈ ಮೂಲಕ ತವರು ನೆಲದಲ್ಲಿ ತನ್ನ ಚೊಚ್ಚಲ ವಿಕೆಟ್ ಗಳಿಸಿದರು.
ವಿಂಡೀಸ್ ಆರಂಭಿಕ ಆಟಗಾರ ಶೈ ಹೋಪ್(9) ವಿಕೆಟ್‌ನ್ನು ಬೇಗನೆ ಕಳೆದುಕೊಂಡಿತು. ಬ್ರಾತ್‌ವೇಟ್ ಹಾಗೂ ಡ್ವೇಯ್ನಾ ಬ್ರಾವೊ(33) ಲಂಚ್ ವಿರಾಮದ ತನಕ ವಿಕೆಟ್ ಬೀಳದಂತೆ ನೋಡಿಕೊಂಡರು. 1 ವಿಕೆಟ್ ನಷ್ಟಕ್ಕೆ 92 ರನ್ ಗಳಿಸಿದ್ದ ವಿಂಡೀಸ್‌ಗೆ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್ ಶಾಕ್ ನೀಡಿದರು. ಪ್ಯಾಟಿನ್ಸನ್ ಅವರು ಬ್ರಾವೊ ವಿಕೆಟ್ ಕಬಳಿಸಿ 91 ರನ್ ಜೊತೆಯಾಟಕ್ಕೆ ಬ್ರೇಕ್ ಹಾಕಿದರು.
ಹಿರಿಯ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಈ ನಡುವೆ ಬ್ರಾತ್‌ವೇಟ್ 8ನೆ ಅರ್ಧಶತಕ ಪೂರೈಸಿ ಲಿಯೊನ್‌ಗೆ ವಿಕೆಟ್ ಒಪ್ಪಿಸಿದರು.







