ದಿಲ್ಲಿ: ಮೂರನೆ ದಿನವೂ ಸಮ-ಬೆಸ ಯಶಸ್ವಿ; ವಾಯುಮಾಲಿನ್ಯ ಮಟ್ಟ ಶೇ.300 ಇಳಿಕೆ

ಹೊಸದಿಲ್ಲಿ,ಜ.3: ವಾಹನ ಸಂಚಾರಕ್ಕೆ ದಿಲ್ಲಿ ಸರಕಾರದ ಸಮ-ಬೆಸ ಸಂಖ್ಯಾ ಸೂತ್ರವು ಶನಿವಾರ ಕೂಡ ಯಶಸ್ವಿಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇಂದು ರಾಜಧಾನಿಯ ಕೆಲವು ಭಾಗಗಳಲ್ಲಿ ವಾಯುಮಾಲಿನ್ಯ ಮಟ್ಟದಲ್ಲಿ ಶೇ.300ರಷ್ಟು ಇಳಿಕೆ ಕಂಡುಬಂದಿದೆ.
ದಿಲ್ಲಿಯಲ್ಲಿ ವಾಯುಮಾಲಿನ್ಯದ ಮಟ್ಟವನ್ನು ನಿಯಂತ್ರಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾರಿಗೊಳಿಸಿರುವ ಸಮ-ಬೆಸ ಸೂತ್ರಕ್ಕೆ ನಾಗರಿಕರಿಂದ ಮಿಶ್ರಪ್ರತಿಕ್ರಿಯೆಗಳು ವ್ಯಕ್ತವಾಗಿರುವ ಮಧ್ಯೆ, ಸರಕಾರವು ಸೋಮವಾರ ದೊಡ್ಡದೊಂದು ಪರೀಕ್ಷೆಗೆ ಸಜ್ಜಾಗಿದೆ. ಅಂದು ಕೇವಲ ಸಮ ಸಂಖ್ಯೆ ನೋಂದಣಿಯ ಕಾರುಗಳಿಗೆ ದಿಲ್ಲಿಯ ರಸ್ತೆಗಳಲ್ಲಿ ಸಂಚರಿಸಲು ಅನುಮತಿ ನೀಡಲಾಗಿದೆ. ಸುದೀರ್ಘ ವಾರಾಂತ್ಯದ ರಜೆಯ ಬಳಿಕ ಅಂದು ಕಚೇರಿಗಳು ಪುನರಾರಂಭಗೊಳ್ಳಲಿದ್ದು, ಹೊಸ ನಿಯಮದ ಜಾರಿಯಿಂದ ಜನಜೀವನ ಅಸ್ತವ್ಯಸ್ತಗೊಳ್ಳದಂತೆ ನೋಡಿಕೊಳ್ಳುವ ಮಹತ್ವದ ಹೊಣೆ ದಿಲ್ಲಿ ಸರಕಾರದ ಹೆಗಲೇರಿದೆ.
ಶನಿವಾರದಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬೈಸಿಕಲ್ ಮೂಲಕ ತನ್ನ ಕಚೇರಿಗೆ ಆಗಮಿಸಿದರು.
‘‘ದಿಲ್ಲಿಯಲ್ಲಿ ವಾಹನಗಳಿಗೆ ಸಮ-ಬೆಸ ಸಂಖ್ಯಾ ಸೂತ್ರವನ್ನು, 15 ದಿನಗಳವರೆಗೆ ಕಡ್ಜಾಯವಾಗಿ ಜಾರಿಗೊಳಿಸಿದರೂ, ಆನಂತರವೂ ಜನತೆ ಆ ಮಾದರಿಯನ್ನು ಅನುಸರಿಸಬೇಕು. ಜನತೆ ಉದ್ಯೋಗ ಮತ್ತಿತರ ಕಾರ್ಯಗಳಿಗೆ ತೆರಳಲು ಪರ್ಯಾಯ ಸಾರಿಗೆ ವ್ಯವಸ್ಥೆಯನ್ನು ಹುಡುಕಿಕೊಳ್ಳಬೇಕು ಎಂದವರು ಕಿವಿ ಮಾತು ಹೇಳಿದರು.
‘‘ಕಾರು ಮುಕ್ತ ದಿನದಿಂದ ಹಿಡಿದು, ಸಮ-ಬೆಸ ಸಂಖ್ಯಾ ಸೂತ್ರದ ಅನುಷ್ಠಾನದವರೆಗೂ, ದಿಲ್ಲಿಯಲ್ಲಿ ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಜನತೆ ಮುಂದೆ ಬಂದಿರುವುದನ್ನು ನಾವು ಕಾಣುತ್ತಿದ್ದೇವೆ. ಈಗ ಜನತೆಯಲ್ಲಿ ಹೊಣೆಗಾರಿಕೆಯ ಭಾವನೆ ಬಂದಿದೆ. ಯಾವುದೇ ಕಾನೂನನ್ನು ಜಾರಿಗೊಳಿಸುವಾಗ ಸವಾಲುಗಳು ಎದುರಾಗುತ್ತವೆ.ದಿಲ್ಲಿಯನ್ನು ವಾಯುಮಾಲಿನ್ಯ ಮುಕ್ತಗೊಳಿಸುವ ಧ್ಯೇಯಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸುವ ಹೊಣೆ ದಿಲ್ಲಿಯ ಜನತೆಯ ಮೇಲಿದೆ’’ ಎಂದು ಸಿಸೋಡಿಯಾ ತಿಳಿಸಿದ್ದಾರೆ.
ಸಮ-ಬೆಸ ಸಂಖ್ಯಾ ಸೂತ್ರಕ್ಕೆ ಮೊದಲ ದಿನದ ಪ್ರತಿಕ್ರಿಯೆ ಅದ್ಭುತವಾಗಿತ್ತು. ಹದಿನೈದು ದಿನಗಳ ಕಾಲವೂ, ದಿಲ್ಲಿಯ ಜನತೆಯಿಂದ ಇದೇ ರೀತಿಯ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುವುದೆಂಬ ಆತ್ಮವಿಶ್ವಾಸ ತನಗಿದೆಯೆಂದು ಸಿಸೋಡಿಯಾ ಹೇಳಿದರು.ಇಂದು ಕೆಲವು ಎಎಪಿ ಸಚಿವರು, ಸಾರ್ವಜನಿಕ ಸಾರಿಗೆ ಹಾಗೂ ಮೋಟಾರ್ ಸೈಕಲ್ ಬಳಸಿ, ತಮ್ಮ ಕಚೇರಿಯನ್ನು ತಲುಪಿದರು.
ಕೆಲವು ಪ್ರಮುಖ ರಸ್ತೆಗಳಲ್ಲಿಯೂ ಸೇರಿದಂತೆ ದಿಲ್ಲಿ ನಗರಾದ್ಯಂತ, ಟ್ರಾಫಿಕ್ ಪೊಲೀಸರು, ನಿಯಮ ಉಲ್ಲಂಘಿಸಿದವರನ್ನು ನಿಲ್ಲಿಸುತ್ತಿದ್ದುದು ಕಂಡುಬರುತ್ತಿತ್ತು. ಆದರೆ ಶನಿವಾರ ಸಂಜೆಯ ವೇಳೆಗೆ ನಿಯಮ ಉಲ್ಲಂಘಿಸಿದವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿತ್ತು.
ಶನಿವಾರ ರಾತ್ರಿ 8:00 ಗಂಟೆಯ ಹೊತ್ತಿಗೆ, ಸಮ-ಬೆಸ ಸಂಖ್ಯಾ ಸೂತ್ರ ಉಲ್ಲಂಘಿಸಿದ 229 ವ್ಯಕ್ತಿಗಳಿಗೆ ನೋಟಿಸ್ ನೀಡಿದ್ದೇವೆ. ಶುಕ್ರವಾರ ರಾತ್ರಿ 8:00 ಗಂಟೆಗೆ 138 ಮಂದಿಗೆ ನೋಟಿಸ್ ನೀಡಲಾಗಿತ್ತೆಂದು, ದಿಲ್ಲಿಯ ವಿಶೇಷ ಪೊಲೀಸ್ ಆಯುಕ್ತ (ಸಾರಿಗೆ) ಮುಖ್ತೇಶ್ ಚಂದರಂ ಹೇಳಿದ್ದಾರೆ.







