ಕಾಸರಗೋಡಿಗೆ ಇಂದು ಉಮ್ಮನ್‌ಚಾಂಡಿ
ಕಾಸರಗೋಡು, ಜ.3: ಮುಖ್ಯಮಂತ್ರಿ ಹಾಗೂ ರಾಜ್ಯದ ಹಲವು ಸಚಿವರು ಜ.4ರಂದು ಜಿಲ್ಲೆಗೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಶಿಕ್ಷಣ ಸಚಿವ ಪಿ.ಕೆ.ಅಬ್ದುರಬ್, ಸಂಸ್ಕೃತಿ ಹಾಗೂ ವಾರ್ತಾ ಸಚಿವ ಕೆ.ಸಿ.ಜೋಸೆಫ್, ಗೃಹಸಚಿವ ರಮೇಶ್ ಚೆನ್ನಿತ್ತಲ, ಆರೋಗ್ಯ ಹಾಗೂ ಕ್ರೀಡಾಸಚಿವ ತಿರುವಂಜೂರು ರಾಧಾಕೃಷ್ಣನ್ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಕೆ.ಪಿ.ಸಿ.ಸಿ. ಅಧ್ಯಕ್ಷ ವಿ.ಎಂ.ಸುಧೀರನ್ ನೇತೃತ್ವದ ಜನರಕ್ಷಾ ಯಾತ್ರೆಗೆ ಸಂಜೆ 5 ಗಂಟೆಗೆ ಕುಂಬಳೆಯಲ್ಲಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಚಾಲನೆ ನೀಡುವರು.
ಕಾಸರಗೋಡು ಎಲ್ಬಿಎಸ್ ಕಾಲೇಜಿನಲ್ಲಿ ಸುಮಾರು 2.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕ್ರೀಡಾಂಗಣ ಹಾಗೂ ಇತರ ಸೌಲಭ್ಯವನ್ನು ಅಪರಾಹ್ನ 2:30ಕ್ಕೆ ಮುಖ್ಯಮಂತ್ರಿ ಉದ್ಘಾಟಿಸುವರು. ಶಿಕ್ಷಣ ಸಚಿವ ಪಿ.ಕೆ.ಅಬ್ದುರಬ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕ್ರೀಡಾ ಸಚಿವ ತಿರುವಂಜೂರು ರಾಧಾಕೃಷ್ಣನ್ ಉಪಸ್ಥಿತರಿರುವರು.
ಬೆಳಿಗ್ಗೆ 9:30ಕ್ಕೆ ಮಾಯಿಪ್ಪಾಡಿ ಡಯೆಟ್‌ನಲ್ಲಿ ನೂತನ ಇ-ಸಂಪನ್ಮೂಲ ಕೋರ್ಸ್ ಮ್ಯಾನೇಜ್‌ಮೆಂಟ್ ಸಿಸ್ಟಂ ಫಾರ್ ಟೀಚರ್ಸ್ ಟೆರ್ಮ್ಸ್‌ನ್ನು ಶಿಕ್ಷಣ ಸಚಿವ ಪಿ.ಕೆ.ಅಬ್ದುರಬ್ ಉದ್ಘಾಟಿಸುವರು.
ಸಂಜೆ ನಾಲ್ಕು ಗಂಟೆಗೆ ಗಲ್ಫ್ ಉದ್ಯೋಗಿಗಳ, ಅನಿವಾಸಿ ಭಾರತೀಯರ ಅನುಕೂಲಕ್ಕಾಗಿ ಆರಂಭಿಸಲಾಗುವ ನೋರ್ಕ ರೂಟ್ಸ್‌ನ್ನು ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ಕೆ.ಸಿ.ಜೋಸೆಫ್ ಉದ್ಘಾಟಿಸುವರು.
ಪೂರ್ವಾಹ್ನ 11 ಗಂಟೆಗೆ ಗಂಟೆಗೆ ಚೆಮ್ನಾಡ್ ಜಮಾಅತ್ ಹಯರ್ ಸೆಕಂಡರಿ ಶಾಲೆಯ ಮಾಹಿತಿ ಮತ್ತು ವಿಜ್ಞಾನ ಕೇಂದ್ರವನ್ನು ಹಾಗೂ ಸಂಜೆ 4 ಗಂಟೆಗೆ ಎರಿಯಾಲ್ ಜಮಾಅತ್ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡವನ್ನು ಶಿಕ್ಷಣ ಸಚಿವ ಅಬ್ದುರಬ್ ಉದ್ಘಾಟಿಸುವರು.







