ಎಂಡೋಸಲ್ಫಾನ್ ಸಂತ್ರಸ್ತರಿಗೆ ಕೇರಳ ಸರಕಾರದಿಂದ ಮನೆ ಕೊಡುಗೆ
.jpg)
ಕಾಸರಗೋಡು, ಜ.3: ಎಂಡೋಸಲ್ಫಾನ್ ಸಂತ್ರಸ್ತ ಕುಟುಂಬವೊಂದಕ್ಕೆ ಕೇರಳ ಸರಕಾರ ಮನೆ ನಿರ್ಮಿಸಿಕೊಟ್ಟಿದ್ದು, ಎಲ್ಲರ ಶ್ಲಾಘನೆಗೆ ಪಾತ್ರವಾಗಿದೆ. ಪೆರ್ಲ ಎನ್ಮಕಜೆ ಕಟ್ಟತ್ತಾಡೆಯ ಬಾಲಕೃಷ್ಣ ಮತ್ತು ಇವರ ಸಹೋದರಿ ಸುಂದರಿಗೆ ಸರಕಾರ ಮನೆ ನಿರ್ಮಿಸಿಕೊಡುವ ಮೂಲಕ ಹಲವು ವರ್ಷಗಳ ಕನಸು ನನಸುಗೊಳಿಸಿದೆ.
ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ‘ಪಾರದರ್ಶಕ ಕೇರಳ’ ಎಂಬ ಯೋಜನೆಯಡಿ ಮನೆ ನಿರ್ಮಿಸಲಾಗಿದೆ. ಬಾಲಕೃಷ್ಣ ಮತ್ತು ಸುಂದರಿ ದೃಷ್ಟಿ ದೋಷ ಹೊಂದಿದ್ದಾರೆ. ಇವರ ತಂದೆ ತಾಯಿ ನಿಧನರಾದ ಬಳಿಕ ಹಿರಿಯ ಸಹೋದರನ ಜೊತೆ ಜೀವನ ಸಾಗಿಸಬೇಕಾದ ಸ್ಥಿತಿ ಇವರಿಬ್ಬರಿಗೆ ಉಂಟಾಗಿತ್ತು. ಕೆಲ ಸಮಯದ ಬಳಿಕ ಸಹೋದರ ಬೇರೆ ಮನೆಗೆ ವಾಸ್ತವ್ಯ ಬದಾಲಾಯಿಸಿದ್ದರಿಂದ ಇವರಿಬ್ಬರ ಜೀವನ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿತ್ತು. ಇತರರ ಸಹಾಯವಿಲ್ಲದೆ ಇವರಿಗೆ ಜೀವನ ಸಾಗಿಸುವುದೇ ಕಷ್ಟವಾಗಿತ್ತು. ಒಂದೆಡೆ ವಾಸ್ತವ್ಯಕ್ಕೆ ಸೂಕ್ತ ಸೂರಿಲ್ಲ ಮತ್ತೊಂದೆಡೆ ದೃಷ್ಟಿ ದೋಷ ಇವರ ಬದುಕನ್ನು ಹೈರಾಣಾಗಿಸಿತ್ತು.
ಈ ನಡುವೆ ಮುಖ್ಯಮಂತ್ರಿಯವರ ‘ಪಾರದರ್ಶಕ ಕೇರಳ’ ಯೋಜನೆಯಡಿ 2014ರಲ್ಲಿ ಬಾಲಕೃಷ್ಣ ಮತ್ತು ಸುಂದರಿ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸರಕಾರದ ವತಿಯಿಂದ ಸಂತ್ರಸ್ತರಿಗೆ ಮನೆ ಒದಗಿಸಿದ್ದು, ಜೊತೆಗೆ ಇಬ್ಬರಿಗೂ ತಲಾ ಎರಡು ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. ಕಾಸರ ಗೋಡು ಜಿಲ್ಲಾಧಿಕಾರಿ, ಎಂಡೋ ಸೆಲ್ ಅಧಿಕಾರಿಗಳ ಮುತುವರ್ಜಿಯಿಂದ ಸಂತ್ರಸ್ತ ಕುಟುಂಬಕ್ಕೆ ಸೂರು ಹಾಗೂ ನೆರವು ಲಭಿಸಿದೆ.





