ತ್ರಿವಳಿ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾವಳಿ

ವಿಟ್ಲ, ಜ.3: ಕ್ರೀಡಾಕೂಟಗಳಿಂದ ಶಾಂತಿ ಹಾಗೂ ಸಾಮರಸ್ಯದ ವಧರ್ನೆ ಸಾಧ್ಯ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ಮಾಣಿ ಯುವಕ ಮಂಡಲ, ಮಾಣಿ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಕಾರದೊಂದಿಗೆ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ದ.ಕ.-ಉಡುಪಿ, ಕಾಸರಗೋಡು ಜಿಲ್ಲಾಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮುಹಮ್ಮದ್, ತಾಪಂ ಸದಸ್ಯ ಮಾಧವ ಎಸ್.ಮಾವೆ, ಮಾಜಿ ಸದಸ್ಯ ಕುಶಲ ಎಂ.ಪೆರಾಜೆ, ಪ್ರಗತಿಪರ ಕೃಷಿಕ ಸಂಜೀವ ಶೆಟ್ಟಿ ಸಾಗು ಮುಖ್ಯ ಅತಿಥಿಗಳಾಗಿದ್ದರು. ಇದೇ ವೇಳೆ ರಾಜ್ಯಮಟ್ಟದ ಜ್ಯೂನಿ ಯರ್ ಕಬಡ್ಡಿ ತಂಡದ ಆಟಗಾರ ನವೀನ್ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಯುವಕ ಮಂಡಲ ಗೌರವಾಧ್ಯಕ್ಷ ಎಂ. ನಾಗರಾಜ್ ಶೆಟ್ಟಿ ಸಾಗು, ಅಧ್ಯಕ್ಷ ಕೆ.ಸುದೀಪ್ ಕುಮಾರ್ ಶೆಟ್ಟಿ, ಪದಾಧಿಕಾರಿಗಳಾದ ಜಗದೀಶ್ ಜೈನ್, ನಾಗರಾಜ ಪೂಜಾರಿ, ದಯಾನಂದ ಪೂಜಾರಿ, ಜಗತ್ಪಾಲ ಹೆಗ್ಡೆ, ಹಬೀಬ್ ಕೊಡಾಜೆ, ಮಜೀದ್ ಮಾಣಿ ಉಪಸ್ಥಿತರಿದ್ದರು. ಬಾಲಕೃಷ್ಣ ಆಳ್ವ ಸ್ವಾಗತಿಸಿ, ವಂದಿಸಿದರು. ದಿವಾಕರ ಉಪ್ಪಳ ಕಾರ್ಯಕ್ರಮ ನಿರೂಪಿಸಿದರು. ವರುಣ್ ಟ್ರಾವೆಲ್ಸ್ ತಂಡಕ್ಕೆ ಪ್ರಶಸ್ತಿ 24 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಬೆಳ್ತಂಗಡಿಯ ವರುಣ್ ಟ್ರಾವೆಲ್ಸ್ ತಂಡವು ಪ್ರಥಮ, ಮಾಣಿ ಕ್ವಾಲಿಟಿ ಫ್ರೆಂಡ್ಸ್ ತಂಡ ದ್ವಿತೀಯ, ಫ್ರೆಂಡ್ಸ್ ಮಾಣಿ ತಂಡ ತೃತೀಯ ಹಾಗೂ ಸ್ಪೋರ್ಟಿಂಗ್ ಉಳ್ಳಾಲ ತಂಡ ಚತುರ್ಥ ಸ್ಥಾನಗಳನ್ನು ಗಳಿಸಿತು. ಕ್ವಾಲಿಟಿ ಫ್ರೆಂಡ್ಸ್ ತಂಡದ ನಿತಿನ್ ಶೆಟ್ಟಿ ಹಾಗೂ ವರುಣ್ ಟ್ರಾವೆಲ್ಸ್ ತಂಡದ ಅದ್ದು ಉತ್ತಮ ಹಿಡಿತಗಾರ ಹಾಗೂ ಆಶೀಕ್ ಸವ್ಯಸಾಚಿ ಪ್ರಶಸ್ತಿಗೆ ಪಾತ್ರರಾದರು.





