ಇರಾನ್‌ನಲ್ಲಿ ಸೌದಿ ದೂತಾವಾಸಕ್ಕೆ ಪ್ರತಿಭಟನಕಾರರಿಂದ ಮುತ್ತಿಗೆ
ಸೌದಿ ಮರಣದಂಡನೆ ಪ್ರಕರಣ
ಟೆಹರಾನ್, ಜ.3: ಸೌದಿ ಅರೇಬಿಯದಲ್ಲಿ ಶನಿವಾರ ಓರ್ವ ಪ್ರಮುಖ ಶಿಯಾ ವಿದ್ವಾಂಸ ಹಾಗೂ ಇತರ 46 ಮಂದಿಯನ್ನು ಮರಣದಂಡನೆಗೆ ಒಳಪಡಿಸಿರುವುದನ್ನು ಖಂಡಿಸಿ ಟೆಹರಾನ್‌ನಲ್ಲಿರುವ ಸೌದಿ ಅರೇಬಿಯದ ದೂತಾವಾಸ ಹಾಗೂ ಮಶಾದ್‌ನಲ್ಲಿರುವ ಕಾನ್ಸುಲೇಟ್ ಕಚೇರಿಗಳಿಗೆ ರವಿವಾರ ಮುಂಜಾನೆ ಪ್ರತಿಭಟನಕಾರರು ಮುತ್ತಿಗೆ ಹಾಕಿರುವುದಾಗಿ ವರದಿಗಳು ತಿಳಿಸಿವೆ.
ಸೌದಿ ದೂತಾವಾಸಕ್ಕೆ ಮುತ್ತಿಗೆ ಹಾಕಿರುವ ಪ್ರತಿಭಟನಕಾರರನ್ನು ಪೊಲೀಸರು ಚದುರಿಸಿದ್ದು, ರಾಜತಾಂತ್ರಿಕ ಕಚೇರಿಗಳ ಆವರಣಗಳಿಗೆ ಹಾನಿಯುಂಟು ಮಾಡದಂತೆ ಇರಾನ್‌ನ ವಿದೇಶಾಂಗ ಸಚಿವಾಲಯವು ಬಿಡುಗಡೆಗೊಳಿಸಿರುವ ಹೇಳಿಕೆಯೊಂದರಲ್ಲಿ ಪ್ರತಿಭಟನಕಾರರನ್ನು ಕೋರಿದೆ.
ಸೌದಿಯ ದೂತಾವಾಸಕ್ಕೆ ಮುತ್ತಿಗೆ ಹಾಕುವ ಮುನ್ನ ಪ್ರತಿಭಟನಾಕಾರರು ಮಶಾದ್‌ನಲ್ಲಿರುವ ಸೌದಿ ಕಾನ್ಸುಲೇಟ್ ಕಚೇರಿ ಮುಂದೆ ಧರಣಿ ನಡೆಸಿದ್ದರು. ಶಿಯಾ ಮುಖಂಡ ಶೇಕ್ ನಿಮ್ರ್ ಅವರನ್ನು ಮರಣದಂಡನೆಗೊಳಪಡಿಸಿರುವುದನ್ನು ಇರಾನ್‌ನ ವಿದ್ವಾಂಸ ಹಾಗೂ ಸಂಸತ್‌ನ ತಜ್ಞರ ಸಮಿತಿಯ ಸದಸ್ಯ ಆಯತುಲ್ಲಾ ಅಹ್ಮದ್ ಖತಮಿ ಟೀಕಿಸಿದ್ದಾರೆ. ಮರಣದಂಡನೆ ಜಾರಿಗೊಳಿಸಿರುವುದಕ್ಕೆ ಸಂಬಂಧಿಸಿ ಸೌದಿ ಅರೇಬಿಯವು ಸೂಕ್ತ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂದವರು ಎಚ್ಚರಿಸಿದ್ದಾರೆ.
ಧಾರ್ಮಿಕ ವಿದ್ವಾಂಸರನ್ನು ಮರಣದಂಡನೆಗೊಳ ಪಡಿಸಿರುವ ಸೌದಿಯ ಕ್ರಮವನ್ನು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಜಬೀರ್ ಅನ್ಸಾರಿ ತೀವ್ರವಾಗಿ ಖಂಡಿಸಿದ್ದಾರೆ.
40 ಮಂದಿಯ ಬಂಧನ: ಇರಾನ್
ಟೆಹರಾನ್, ಜ.3: ಸೌದಿ ದೂತಾವಾಸಕ್ಕೆ ಮುತ್ತಿಗೆ ಹಾಕಿ ಬೆಂಕಿ ಹಚ್ಚಲು ಪ್ರಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 40 ಮಂದಿ ಪ್ರತಿಭಟನಕಾರರನ್ನು ಬಂಧಿಸಲಾಗಿದೆ ಎಂದು ಇರಾನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಂಕಿತರನ್ನು ಗುರುತಿಸಿ ಬಂಧಿಸಲಾಗಿದೆ ಮತ್ತು ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಬಾನ್ ಕಿ ಮೂನ್ ತೀವ್ರ ಅಸಮಾಧಾನ
ವಿಶ್ವಸಂಸ್ಥೆ, ಜ.3: ಸೌದಿ ಅರೇಬಿಯವು ಶನಿವಾರ ಓರ್ವ ಖ್ಯಾತ ಶಿಯಾ ವಿದ್ವಾಂಸ ಹಾಗೂ ಇತರ 46 ಮಂದಿಯನ್ನು ಮರಣದಂಡನೆಗೆ ಒಳಪಡಿಸಿರುವ ಘಟನೆಯ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ‘ತೀವ್ರ ಅಸಮಾಧಾನ’ ವ್ಯಕ್ತಪಡಿಸಿರುವುದಾಗಿ ವರದಿಯೊಂದು ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಭುಗಿಲೆದ್ದಿರುವ ಅಶಾಂತಿ ಹಾಗೂ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಬಾನ್ ಕಿ ಮೂನ್, ಶಾಂತಿ ಹಾಗೂ ಸಂಯಮ ಕಾಯ್ದುಕೊಳ್ಳುವಂತೆ ಮನವಿ ಮಾಡಿದ್ದಾರೆ.
ಸೌದಿ ಅರೇಬಿಯವು ಶನಿವಾರ ಪ್ರಮುಖ ಶಿಯಾ ವಿದ್ವಾಂಸ ಶೇಖ್ ನಿಮ್ರ್ ಅಲ್ ನಿಮ್ರ್ ಹಾಗೂ ಅಲ್ ಖಾಯಿದಾ ಸದಸ್ಯರೆನ್ನಲಾದ ಇತರ 46 ಮಂದಿಯನ್ನು ಮರಣದಂಡನೆಗೆ ಒಳಪಡಿಸಿತ್ತು. ಈ ಪ್ರಕರಣವು ಮಧ್ಯ ಪ್ರಾಚ್ಯದಾದ್ಯಂತ ಜನಾಂಗೀಯ ಆಕ್ರೋಶಕ್ಕೆ ಕಾರಣವಾಗಿದೆ.
ಶೇಖ್ ನಿಮ್ರ್ ಅಲ್ ನಿಮ್ರ್ ಹಾಗೂ ಇತರರನ್ನು ವಿಚಾರಣೆಗಳ ಬಳಿಕ ಮರಣದಂಡನೆಗೆ ಒಳಪಡಿಸಿರುವ ಪ್ರಕ್ರಿಯೆಯು, ಆರೋಪಗಳ ಸ್ವರೂಪ ಹಾಗೂ ನ್ಯಾಯ ವಿಚಾರಣೆಯ ಸೂಕ್ತತೆಯ ಬಗ್ಗೆ ಆತಂಕಗಳನ್ನು ಮೂಡಿಸಿದೆ’’ ಎಂದು ಬಾನ್ ಕಿ ಮೂನ್ ಅಭಿಪ್ರಾಯಿಸಿರುವುದಾಗಿ ಅವರ ವಕ್ತಾರ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಶಿಯಾ ಮುಖಂಡ ಹಾಗೂ ಇತರರ ವಿರುದ್ಧ ಪ್ರಕಟಿಸಲಾಗಿದ್ದ ಮರಣದಂಡನೆಯನ್ನು ಕುರಿತು ಸೌದಿ ಮುಖಂಡರನ್ನು ಹಲವು ಸಂದರ್ಭಗಳಲ್ಲಿ ಪ್ರಸ್ತಾಪಿಸಲಾಗಿತ್ತು ಮತ್ತು ಶಿಕ್ಷೆಯನ್ನು ಬದಲಿಸುವಂತೆಯೂ ಕೇಳಿಕೊಳ್ಳಲಾಗಿತ್ತು ಎಂದು ವಕ್ತಾರ ತಿಳಿಸಿದ್ದಾರೆ.