ಸೌದಿ ವಿದೇಶಾಂಗ ಸಚಿವರ ಪಾಕ್ ಭೇಟಿ ಮುಂದೂಡಿಕೆ
ಇಸ್ಲಾಮಾಬಾದ್, ಜ.3: ಸೌದಿಯ ವಿದೇಶಾಂಗ ಸಚಿವ ಆದಿಲ್ ಬಿನ್ ಅಹ್ಮದ್ ಅಲ್ ಝುಬೈರ್ ತಮ್ಮ ನಿಯೋಜಿತ ಪಾಕಿಸ್ತಾನ ಭೇಟಿಯನ್ನು ಮುಂದೂಡಿರುವುದಾಗಿ ವರದಿಯಾಗಿದೆ.
ತಮ್ಮ ಭೇಟಿಯ ವೇಳೆ ಸೌದಿಯ ವಿದೇಶಾಂಗ ಸಚಿವರು ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿ ಸೌದಿ ನೇತೃತ್ವದಮೈತ್ರಿಪಡೆಗೆ ಪಾಕ್ ಸೇರ್ಪಡೆ ಕುರಿತು ಚರ್ಚಿಸಲಿರುವುದಾಗಿ ನಿರೀಕ್ಷಿಸಲಾಗಿತ್ತು.
ಸೌದಿ ಅರೇಬಿಯದ ಕೋರಿಕೆಯನ್ವಯ ರವಿವಾರಕ್ಕೆ ನಿಗದಿಗೊಂಡಿದ್ದ ಈ ಭೇಟಿಯನ್ನು ಮುಂದೂಡಲಾಗಿದೆ ಎಂದು ಯಾವುದೇ ನಿರ್ದಿಷ್ಟ ಕಾರಣ ಉಲ್ಲೇಖಿಸದೆ ಅಧಿಕೃತ ಮೂಲಗಳು ತಿಳಿಸಿವೆ.
ಶಿಯಾ ಧರ್ಮಗುರು ಹಾಗೂ ಇತರ 46 ಮಂದಿಯನ್ನು ಸೌದಿ ಅರೇಬಿಯವು ಮರಣದಂಡನೆಗೊಳಪಡಿಸಿದ ಬೆನ್ನಿಗೇ ಈ ಬೆಳವಣಿಗೆ ಉಂಟಾಗಿದೆ.
ಶಿಯಾ ಮುಖಂಡನ ಮರಣದಂಡನೆಗೆ ಪ್ರತಿಯಾಗಿ ಸೌದಿ ಅರೇಬಿಯ ತೀಕ್ಷ್ಣ ಪರಿಣಾಮ ಎದುರಿಸಲಿದೆ ಎಂದು ಇದೇ ವೇಳೆ ಇರಾನ್‌ನ ಸರ್ವೋಚ್ಚ ಮುಖಂಡ ಆಯತುಲ್ಲಾ ಅಲಿ ಖಾಮಿನೈ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಹಾಗೂ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಸೌದಿ ನೇತೃತ್ವದ 34 ರಾಷ್ಟ್ರಗಳ ಮೈತ್ರಿಪಡೆಗೆ ಸೇರುವ ಬಗ್ಗೆ ಪಾಕಿಸ್ತಾನವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಪಾಕ್ ನಾಯಕತ್ವದೊಂದಿಗೆ ಸಮಾಲೋಚನೆ ನಡೆಸಲು ಈ ಭೇಟಿಯನ್ನು ರೂಪಿಸಲಾಗಿತ್ತು ಎಂದು ‘ರೇಡಿಯೊ ಪಾಕಿಸ್ತಾನ್’ ವರದಿ ಮಾಡಿದೆ.
ಸೌದಿಯ ವಿದೇಶಾಂಗ ಸಚಿವರು ಪಾಕ್ ಪ್ರಧಾನಿ ನವಾಝ್ ಶರೀಫ್ ಹಾಗೂ ಅವರ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಝೀಝ್‌ರನ್ನು ಭೇಟಿಯಾಗಬೇಕಿತ್ತು.