ಪಠಾಣ್‌ಕೋಟ್‌ನಲ್ಲಿ ಉಗ್ರರ ದಾಳಿ: ಅಮೆರಿಕ ಖಂಡನೆ
ವಾಷಿಂಗ್ಟನ್, ಜ.3: ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿರುವ ಭಾರತದ ಪ್ರಮುಖ ವಾಯುನೆಲೆಯೊಂದರ ಮೇಲೆ ಉಗ್ರರು ನಡೆಸಿರುವ ದಾಳಿಯನ್ನು ಅತ್ಯಂತ ಘೋರವೆಂದು ಬಣ್ಣಿಸಿರುವ ಅಮೆರಿಕ, ತಾನು ಅದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದೆ.
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಸರಕಾರದೊಂದಿಗೆ ಪ್ರಬಲ ಭಾಗಿದಾರಿಕೆಗೆ ತಾನು ಬದ್ಧ ಎಂಬುದಾಗಿ ಅಮೆರಿಕ ಇದೇ ವೇಳೆ ಹೇಳಿದೆ.
ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭಯೋತ್ಪಾದನೆಯ ಕಾರ್ಯಜಾಲವನ್ನು ಭೇದಿಸುವಲ್ಲಿ ಎಲ್ಲರೂ ಜಂಟಿಯಾಗಿ ಶ್ರಮಿಸುವಂತೆ ಎಲ್ಲ ಪ್ರಾದೇಶಿಕ ರಾಷ್ಟ್ರಗಳನ್ನು ಅಮೆರಿಕ ಒತ್ತಾಯಿಸಿದೆ.
‘‘ಪಂಜಾಬ್ ರಾಜ್ಯದ ಪಠಾಣ್‌ಕೋಟ್‌ನಲ್ಲಿರುವ ಭಾರತೀಯ ವಾಯುನೆಲೆಯ ಮೇಲೆ ನಡೆದಿರುವ ಉಗ್ರರ ದಾಳಿಯನ್ನು ಅಮೆರಿಕ ಬಲವಾಗಿ ಖಂಡಿಸುತ್ತದೆ. ಹುತಾತ್ಮರಾದವರ ಕುಟುಂಬಗಳಿಗೆ ನಮ್ಮ ಸಂತಾಪ ಸೂಚಿಸುತ್ತಿದ್ದೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.
‘‘ಈ ಹೀನ ಕೃತ್ಯದ ಸಂಚುಕೋರರನ್ನು ನ್ಯಾಯಾಂಗಕ್ಕೆ ಒಪ್ಪಿಸುವಲ್ಲಿ ಎಲ್ಲ ಪ್ರಾದೇಶಿಕ ರಾಷ್ಟ್ರಗಳು ಜೊತೆಗೂಡಿ ಶ್ರಮಿಸಬೇಕೆಂದು ನಾವು ಕೇಳಿಕೊಳ್ಳುತ್ತೇವೆ’’ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪಠಾಣ್‌ಕೋಟ್‌ನ ವಾಯುನೆಲೆಯ ಮೇಲೆ ದಾಳಿ ನಡೆಸಿರುವ ಉಗ್ರರು ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿ ಬಂದವರಾಗಿಬೇಕು ಹಾಗೂ ಕಂದಹಾರ್ ಅಪಹರಣ ಪ್ರಕರಣದ ರೂವಾರಿ ವೌಲಾನಾ ಮಸೂದ್ ಅಝರ್ ನೇತೃತ್ವದ ಜೈಶ್-ಇ-ಮುಹಮ್ಮದ್ ಸಂಘಟನೆಗೆ ಸೇರಿದವರಾಗಿರಬಹುದೆಂದು ಭಾವಿಸಲಾಗಿದೆ.