ರಾಜಧಾನಿ ಎಕ್ಸ್‌ಪ್ರೆಸ್‌ಗಳಲ್ಲಿ ಶೀಘ್ರವೇ ಬಣ್ಣಬಣ್ಣದ ಬೆಡ್‌ರೋಲ್‌ಗಳು ಲಭ್ಯ
ಹೊಸದಿಲ್ಲಿ,ಜ.3: ಭಾರತೀಯ ರೈಲುಗಳಲ್ಲಿ ಈಗ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಬಿಳಿಯ ಬಣ್ಣದ ಬೆಡ್‌ಶೀಟ್‌ಗಳು ಮತ್ತು ತಲೆದಿಂಬು ಹೊದಿಕೆಗಳು ಶೀಘ್ರವೇ ಇತಿಹಾಸದ ಪುಟಗಳನ್ನು ಸೇರಲಿವೆ. ಎನ್‌ಐಎಫ್‌ಟಿ ವಿನ್ಯಾಸಗೊಳಿಸಿರುವ ಬಣ್ಣಬಣ್ಣದ ಬೆಡ್‌ರೋಲ್‌ಗಳನ್ನು ಬಳಕೆಗೆ ತರಲು ರೈಲ್ವೆಯು ಸಜ್ಜಾಗಿದೆ.
ಬಿಳಿಯ ಬಣ್ಣದ ಬದಲು ವರ್ಣಮಯ ಹಾಸಿಗೆ-ಹೊದಿಕೆಗಳು ಸೇರಿದಂತೆ ಬೋಗಿಗಳ ಒಳಾಂಗಣ ವಿನ್ಯಾಸಗಳನ್ನು ಬದಲಿಸಲು ನಿರ್ಧರಿಸಲಾಗಿದೆ. ನೂತನ ವಿನ್ಯಾಸದ ಬೆಡ್‌ರೋಲ್‌ಗಳನ್ನು ಶೀಘ್ರವೇ ರಾಜಧಾನಿ ರೈಲುಗಳಲ್ಲೊಂದರಲ್ಲಿ ಒದಗಿಸಲಾಗುವುದು ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಪ್ರತಿ ಬೆಡ್‌ರೋಲ್ ಎರಡು ಬೆಡ್‌ಶೀಟ್‌ಗಳು,ಒಂದು ತಲೆದಿಂಬು,ಒಂದು ಹೊದಿಕೆ ಮತ್ತು ಹ್ಯಾಂಡ್ ಟವೆಲ್‌ನ್ನು ಒಳಗೊಂಡಿರುತ್ತದೆ. ನೂತನ ಯೋಜನೆಯಂತೆ ಟವೆಲ್ ಹೊರತುಪಡಿಸಿ ಉಳಿದವೆಲ್ಲ ಬಣ್ಣದ್ದಾಗಿರುತ್ತವೆ.
ಬೆಡ್‌ರೋಲ್‌ಗಳಲ್ಲದೆ,ಕಿಟಕಿಯ ಪರದೆಗಳೂ ಬೆಡ್‌ಶೀಟ್‌ಗಳಿಗೆ ಹೊಂದಿಕೆಯಾಗುವ ಬಣ್ಣವನ್ನು ಹೊಂದಿರಲಿವೆ. ರೈಲ್ವೆ ಇಲಾಖೆಯು ಪ್ರತಿದಿನ ಎಸಿ ಬೋಗಿಗಳಲ್ಲಿನ ಸುಮಾರು ಮೂರು ಲಕ್ಷ ಪ್ರಯಾಣಿಕರಿಗೆ ಬೆಡ್‌ರೋಲ್‌ಗಳನ್ನು ಒದಗಿಸುತ್ತದೆ.





