ನಿತೀಶ್ ಕುಮಾರ್‌ಗಿಂತ ಮಗನೇ ಹೆಚ್ಚು ಶ್ರೀಮಂತ

ಪಾಟ್ನಾ,ಜ.3: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಶ್ರೀಮಂತಿಕೆಯಲ್ಲಿ ಅಪ್ಪನನ್ನೇ ಮೀರಿಸಿದ್ದಾರೆ. ಕುಮಾರ್ ಒಟ್ಟು 60 ಲ.ರೂ.ವೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಹೊಂದಿದ್ದರೆ, ನಿಶಾಂತ್ ಬಳಿ ಅಪ್ಪನ ನಾಲ್ಕು ಪಟ್ಟು ಆಸ್ತಿಯಿದೆ.
ಕುಮಾರ್ ಮತ್ತು ಅವರ ಸಂಪುಟ ಸದಸ್ಯರು ಮೂರು ದಿನಗಳ ಹಿಂದೆ ಘೋಷಿಸಿರುವ ಆಸ್ತಿ ವಿವರಗಳಂತೆ ಮುಖ್ಯಮಂತ್ರಿಯವರು ಸುಮಾರು 19ಲ.ರೂ.ವೌಲ್ಯದ ಚರಾಸ್ತಿ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಫ್ಲಾಟ್ ರೂಪದಲ್ಲಿ 40ಲ.ರೂ.ವೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಅವರ ಬಳಿ ಎರಡು ಕಾರುಗಳಿದ್ದು, 2003ನೆ ಮಾಡೆಲ್‌ನ ಹುಂಡೈ ಸಾಂಟ್ರೋ ಕಾರು ತನಗೆ ಉಡುಗೊರೆಯಾಗಿ ಬಂದಿರುವುದು ಎಂದು ಘೋಷಿಸಿದ್ದಾರೆ.
ಫೋರ್ಡ್ ಇಕೋಸ್ಪೋರ್ಟ್ ಕಾರನ್ನು ಅವರು ಕಳೆದ ವರ್ಷ ಖರೀದಿಸಿದ್ದಾರೆ. ಇದರ ಜೊತೆಗೆ ಆರು ಆಕಳುಗಳು ಮತ್ತು ಎರಡು ಕರುಗಳು ಅವರ ಬಳಿಯಿವೆ.
ಇದಕ್ಕೆ ವ್ಯತಿರಿಕ್ತವಾಗಿ ಪುತ್ರ ನಿಶಾಂತ್ ಬಳಿ 94ಲ.ರೂ.ವೌಲ್ಯದ ಚರಾಸ್ತಿ ಮತ್ತು ಪಾಟ್ನಾ ಮತ್ತು ಸ್ವಗ್ರಾಮ ನಳಂದಾ ಜಿಲ್ಲೆಯ ಕಲ್ಯಾಣ ಬಿಘಾದಲ್ಲಿ ಮನೆಗಳು ಸೇರಿದಂತೆ 1.2ಕೋ.ರೂ.ವೌಲ್ಯದ ಸ್ಥಿರಾಸ್ತಿಗಳಿವೆ.
ಇನ್ನೊಂದೆಡೆ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ಅವರ ಇಬ್ಬರು ಸಚಿವ ಪುತ್ರರಾದ ತೇಜಸ್ವಿ ಪ್ರಸಾದ್ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರು ಸಾಕಷ್ಟು ದೊಡ್ಡ ಮೊತ್ತದ ಚರಾಸ್ತಿ ಮತ್ತು ಸ್ಥಿರಾಸ್ತಿಗಳನ್ನು ಘೋಷಿಸಿದ್ದಾರೆ.
ರಸ್ತೆ ಇಲಾಖೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಬಳಿ 22.55ಲ.ರೂ.ವೌಲ್ಯದ ಚರಾಸ್ತಿಗಳಿವೆ. 91.52ಲ.ರೂ.ಗಳ ಸ್ಥಿರಾಸ್ತಿಯ ಜೊತೆಗೆ ಶೇರು ಮಾರುಕಟ್ಟೆಲ್ಲಿ 5.38ಲ.ರೂ. ಹೂಡಿಕೆಯನ್ನು ಹೊಂದಿದ್ದಾರೆ. ನಿತೀಶ್ ಸರಕಾರದಲ್ಲಿ ಆರೋಗ್ಯ ಸಚಿವರಾಗಿರುವ ಅವರ ಹಿರಿಯ ಸೋದರ ತೇಜ್ ಪ್ರತಾಪ್ ತನ್ನ ಬ್ಯಾಂಕ್ ಖಾತೆಯಲ್ಲಿ 4.56ಲ.ರೂ, ಜೊತೆಗೆ 25.10ಲ.ರೂ ವೌಲ್ಯದ ಶೇರುಗಳು ಮತ್ತು 79.27ಲ.ರೂ.ವೌಲ್ಯದ ಸ್ಥಿರಾಸ್ತಿಯನ್ನು ಹೊಂದಿದ್ದಾರೆ.
ತೇಜಸ್ವಿ ಪ್ರಸಾದ್ ಯಾವುದೇ ವಾಹನ ಹೊಂದಿಲ್ಲ,ತೇಜ್ ಪ್ರತಾಪ್ ಬಳಿ 29.43ಲ.ರೂ.ವೌಲ್ಯದ ಬಿಎಂಡಬ್ಲೂ ಕಾರು ಮತ್ತು 15.46ಲ.ರೂ.ವೌಲ್ಯದ ಒಂದು ಬೈಕ್ ಇವೆ.







