ಈಶಾನ್ಯ ಭಾರತದಲ್ಲಿ ಭೂಕಂಪ 11 ಸಾವು, 100ಕ್ಕೂ ಅಧಿಕ ಮಂದಿಗೆ ಗಾಯ

ಇಂಪಾಲ್, ಜ.4: ಈಶಾನ್ಯ ಭಾರತದಲ್ಲಿ ಇಂದು ನಸುಕಿನ ವೇಳೆ ಸಂಭವಿಸಿರುವ 6.7 ಅಂಕಗಳ ತೀವ್ರತೆಯ ಭೂಕಂಪಕ್ಕೆ ಕನಿಷ್ಠ 11 ಮಂದಿ ಬಲಿಯಾಗಿದ್ದು 100ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.
ಸೋಮವಾರ ಮುಂಜಾನೆ 4.35ರ ಸುಮಾರಿಗೆ ಭೂಕಂಪನದ ಅನುಭವವಾಗಿದೆ. ಇಪಾಲದಿಂದ 33 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ.
ಅಸ್ಸಾಂ, ಬಿಹಾರ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ನಾಗಾಲ್ಯಾಂಡ್, ಮಣಿಪುರದಲ್ಲಿ ಭೂಮಿ ಕಂಪಿಸಿದೆ. ಭೂಕಂಪದಿಂದಾಗಿ ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಇಂಪಾಲದಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 55ಕ್ಕೂ ಅಧಿಕ ಜನರು ಭೂ ಕಂಪದಿಂದಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮೋದಿ ಟ್ವಿಟ್ : ಅಸ್ಸಾಂ ಮುಖ್ಯಮಂತ್ರಿ ತುರಣ್ ಗೋಗಾಯ್ ಅವರಿಗೆ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಭೂಕಂಪದ ಕುರಿತಾಗಿ ಚರ್ಚೆ ನಡೆಸಿದ್ದಾರೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಸ್ಸಾಂನಲ್ಲಿದ್ದು, ಭೂಕಂಪದ ಪರಿಹಾರ ಕಾರ್ಯಗಳ ಉಸ್ತುವಾರಿಯನ್ನು ನೋಡಿಕೊಳ್ಳುವಂತೆ ಮೋದಿ ಸೂಚನೆ ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿಯೂ ಭೂಮಿ ಕಂಪಿಸಿದ್ದು ಹಲವಾರು ಜನರು ಗಾಯಗೊಂಡಿದ್ದಾರೆ. ಸಿಲಿಗುರಿಯಲ್ಲಿ ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.







