23 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ

ಬೆಂಗಳೂರು, ಜ.4: ರಾಜ್ಯದಲ್ಲಿ 23,382.20ಕೋಟಿ ರೂ.ಬಂಡವಾಳ ಹೂಡಿಕೆಯೊಂದಿಗೆ 10,407 ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ತಲಾ ಮೂರು ಹೊಸ ಹಾಗೂ ವಿಸ್ತರಣಾ ಯೋಜನೆಗಳಿಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ.
ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ 42ನೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆಯಲ್ಲಿ ಈ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
18,042.20 ಕೋಟಿ ರೂ.ಬಂಡವಾಳ ಹೂಡಿಕೆಯೊಂದಿಗೆ ಸುಮಾರು 8,757 ಮಂದಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂರು ಹೊಸ ಯೋಜನೆಗಳು ಹಾಗೂ 5,340 ಕೋಟಿ ರೂ.ಬಂಡವಾಳ ಹೂಡಿಕೆಯೊಂದಿಗೆ ಸುಮಾರು 1650 ಮಂದಿಗೆ ಉದ್ಯೋಗಾ ವಕಾಶವನ್ನು ಕಲ್ಪಿಸುವ ಮೂರು ವಿಸ್ತರಣಾ ಯೋಜನೆಗಳಿಗೂ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಹೊಸ ಹಾಗೂ ವಿಸ್ತರಣಾ ಯೋಜನೆಗಳಿಂದಾಗಿ ಒಟ್ಟು 23, 382.20 ಕೋಟಿ ರೂ.ಬಂಡವಾಳ ಹೂಡಿಕೆಯಾಗಲಿದ್ದು, ಒಟ್ಟು 10407 ಮಂದಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ.
ಹೊಸ ಯೋಜನೆಗಳು: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯರಬನಹಳ್ಳಿ ಮಿನೆರಾ ಸ್ಟೀಲ್ ಸಂಸ್ಥೆಯೂ 1889.30 ಕೋಟಿ ರೂ.ಬಂಡವಾಳ ಹೂಡಿ 525 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆಗೆ ಅನುಮೋದನೆ ನೀಡಲಾಯಿತು. ಅದಲ್ಲದೆ, ಗುಲ್ಬರ್ಗ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕೋನ್‌ಚೂರಿನಲ್ಲಿ ವಾಡಿ ಸಿಮೆಂಟ್ ಕಾರ್ಖಾನೆ 1352.90 ಕೋಟಿ ರೂ.ಬಂಡವಾಳ ಹೂಡಿಕೆ ಮಾಡಿ 232 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆಗೆ ಅನುಮೋದನೆ ನೀಡಲಾಗಿದೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಬಾಳಸಮುದ್ರ, ತಿರುಮಣಿ, ಕ್ಯಾತಗಾನಚಾರ್ಲು, ವಲ್ಲೂರು ಹಾಗೂ ರಾಯಚಾರ್ಲು ಗ್ರಾಮಗಳಲ್ಲಿ ಕರ್ನಾಟಕ ಸೋಲಾರ್ ಪವರ್ ಡೆವಲಪ್‌ಮೆಂಟ್ ನಿಗಮವು 14,800 ಕೋಟಿ ರೂ.ಬಂಡವಾಳ ಹೂಡಿಕೆ ಮಾಡಿ 8 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಗೆ ಇಂದಿನ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಉನ್ನತಮಟ್ಟದ ಸಭೆಯಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳು, ಮುಖ್ಯಕಾರ್ಯದರ್ಶಿ, ಸರಕಾರದ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.
ಮೂರು ಹೊಸ ಯೋಜನೆಗಳಿಗೆ ಸರಕಾರದ ಅನುಮೋದನೆ
ಉಡುಪಿ ಜಿಲ್ಲೆಯ ಯಲ್ಲೂರು ಗ್ರಾಮದಲ್ಲಿ ಉಡುಪಿ ಪವರ್ ಕಾರ್ಪೊರೇಷನ್‌ನವರು ಹೆಚ್ಚುವರಿಯಾಗಿ 4570 ಕೋಟಿ ರೂ.ಬಂಡವಾಳ ಹೂಡಿ ಒಂದು ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಗ್ರಾಮದಲ್ಲಿ ಕಿರ್ಲೋಸ್ಕರ್ ಟೊಯೋಟಾ ಜವಳಿ ಹಾಗೂ ಯಂತ್ರೋಪಕರಣ ಸಂಸ್ಥೆಯು 150 ಕೋಟಿ ರೂ.ಹೆಚ್ಚುವರಿ ಬಂಡವಾಳ ಹೂಡಿ 150 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ.
ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಟಾಟಾ ಪವರ್ ಕಾರ್ಪೋರೇಷನ್ ಸಂಸ್ಥೆಯವರು 620 ಕೋಟಿ ರೂ.ಹೆಚ್ಚುವರಿ ಬಂಡವಾಳ ಹೂಡಿ 500 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.







