ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಆಸ್ತಿ ಮುಟ್ಟುಗೋಲು
ತೀರ್ಪು ಕಾಯ್ದಿರಿಸಿದ ಹೈಕೋರ್ಟ್ ಬೆಂಗಳೂರು, ಜ.4: ಕೆಐಎಡಿಬಿ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಕುಟುಂಬ ಸದಸ್ಯರ ಆಸ್ತಿ ಮುಟ್ಟುಗೋಲಿಗೆ ಜಾರಿ ನಿರ್ದೇಶಾನಾಲಯ(ಇಡಿ) ಹೊರಡಿಸಿದ್ದ ಆದೇಶ ರದ್ದುಗೊಳಿಸುವಂತೆ ಕೋರಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅವರ ಕುಟುಂಬ ಸದಸ್ಯರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವಾದ-ಪ್ರತಿವಾದ ಆಲಿಸಿದ ನ್ಯಾ.ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ತೀರ್ಪು ಕಾಯ್ದಿರಿಸಿತು.
ಕೆಐಎಡಿಬಿ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿ ಆಧರಿಸಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಪತ್ನಿ ಸೌಭಾಗ್ಯ ನಾಯ್ಡು, ಪುತ್ರಿ ಜಲಜಾ, ಅಳಿಯ ಜಗದೀಶ್‌ಚಂದ್ರಪ್ರಕಾಶ್ ಹಾಗೂ ಅವರ ಮಾಲಕತ್ವದ ಇಟಾಸ್ಕ ಕಂಪೆನಿ ಎಂಡಿ ಶ್ರೀನಿವಾಸ್‌ಗೆ ಸೇರಿದ ಕೋಟ್ಯಂತರ ರೂ.ವೌಲ್ಯದ ಆಸ್ತಿ ಮುಟ್ಟುಗೋಲು ಮಾಡಿಕೊಳ್ಳಲು ಜಾರಿ ನಿರ್ದೇಶನಾಲಯ 2013ರ ಫೆ.23ರಂದು 87ಪುಟಗಳ ಆದೇಶ ಹೊರಡಿಸಿತ್ತು. ಈ ಆದೇಶ ರದ್ದು ಕೋರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತವರ ಕುಟುಂಬ ಸದಸ್ಯರು 2013ರ ಮಾ.30ರಂದು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಎ.4ರಂದು ಜಾರಿ ನಿರ್ದೇಶಾನಾಲಯದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಸೋಮವಾರ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದೆ.





