ವಿ.ವಿ. ಕೂಡಾ ಹಿಂದುತ್ವದ ಲ್ಯಾಬ್ ಆಗಿ ಪರಿವರ್ತನೆ ಆಗುತ್ತಿದೆಯೇ?
ಮಾನ್ಯರೆ,
ಮಂಗಳೂರಿನಲ್ಲಿಯ ಕಾವೂರಿನ ಬಿಜಿಎಸ್ ವಿದ್ಯಾ ಸಂಸ್ಥೆಯಲ್ಲಿ ಮೊನ್ನೆ ಬುಧವಾರ ಅಧ್ಯಾತ್ಮ ಮತ್ತು ವಿಜ್ಞಾನ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡುತ್ತಾ ಮಂಗಳೂರು ವಿ. ವಿ. ಕುಲಪತಿ ಪ್ರೊ.ಕೆ. ಭೈರಪ್ಪಮಾತನಾಡಿ ‘‘ಪ್ರಧಾನಿ ನರೇಂದ್ರ ಮೋದಿ ವೈದಿಕ ವಿಜ್ಞಾನಕ್ಕೆ ಒತ್ತು ನೀಡುತ್ತಿರುವುದು ಉತ್ತಮ ಬೆಳವಣಿಗೆ, ಭಾರತೀಯ ವಿಜ್ಞಾನವು ಆಧ್ಯಾತ್ಮಿಕ ತಳಹದಿ ಹೊಂದಿದ್ದು ಪುಷ್ಪಕ ವಿಮಾನ, ಕ್ಷಿಪಣಿ ನಿರ್ಮಾಣ, ಅಣು ವಿಜ್ಞಾನ ಪುರಾಣ ಕಾಲದಲ್ಲಿಯೇ ಇತ್ತು, ನ್ಯೂಟನ್ ಗುರುತ್ವಾಕರ್ಷಣಾ ತತ್ವ ಕಂಡು ಹಿಡಿಯುವ ಎರಡು ಸಾವಿರ ವರ್ಷ ಮೊದಲೇ ಭಾರತೀಯರು ಈ ನಿಯಮ ಸಾದರ ಪಡಿಸಿದ್ದರು’’ ಎಂದೆಲ್ಲ ವೈದಿಕ ವಿಜ್ಞಾನದ ಬಗ್ಗೆ ಹೆಮ್ಮೆ ವ್ಯಕ್ತ ಪಡಿಸಿದರು. ಕುಲಪತಿಗಳ ಈ ಅವೈಜ್ಞಾನಿಕ ಮನೋಭಾವ ಸಭಿಕರನ್ನು ದಂಗು ಬಡಿಸಿತು. ಒಂದು ವಿಶ್ವವಿದ್ಯಾನಿಲಯದ ಕುಲಪತಿ ಸ್ಥಾನದಲ್ಲಿರುವವರು ಹೀಗೆಲ್ಲಾ ವೈದಿಕ ಕುವಿಜ್ಞಾನವನ್ನು ಸಮರ್ಥಿಸುತ್ತಾ ಹೋದರೆ ಇಂಹ ವಿಶ್ವ ವಿದ್ಯಾನಿಲಯಗಳಲ್ಲಿ ಕಲಿಯುತ್ತಿರುವ ಮುಂದಿನ ಪೀಳಿಗೆಯಲ್ಲಿ ಎಂತಹ ಮನೋಭೂಮಿಕೆ ತಯಾರಾಗಬಹುದು ಯೋಚಿಸಿ. ಸರಕಾರದ ಜಾತ್ಯತೀತ ಶಿಕ್ಷಣ ನೀತಿಗನುಗುಣವಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಎಂದೂ ಧಾರ್ಮಿಕ ಸಮಾರಂಭ ನಡೆದೇ ಇರಲಿಲ್ಲ. ಆದರೆ ಈಗಿನ ಕುಲಪತಿಗಳು ಬಂದ ಮೇಲೆ ಮೊಟ್ಟ ಮೊದಲ ಬಾರಿಗೆ ಕಳೆದ ವರ್ಷ ಸೆಪ್ಟಂಬರಿನಲ್ಲಿ ವಿ.ವಿ. ಕ್ಯಾಂಪಸ್‌ನಲ್ಲಿ ಗಣೇಶೋತ್ಸವ ನಡೆಸಲಾಯಿತು. ಕರಾವಳಿಯೆಲ್ಲ ಹಿಂದುತ್ವದ ಲ್ಯಾಬ್ ಆಗಿರುವುದು ನಿಜ, ಕರಾವಳಿಯ ಪೊಲೀಸ್ ಇಲಾಖೆಯಲ್ಲಿಯೂ ಸಂಘ ಪರಿವಾರದವರು ತುಂಬಿರುವುದು ನಿಜ. ಆದರೆ ವೈಜ್ಞಾನಿಕ ಮನೋಭಾವದ ಭಾವೀ ಪ್ರಜೆಗಳನ್ನು ನಿರ್ಮಿಸುವ ಘನ ಹೊಣೆ ಹೊತ್ತಿರುವ ಕರಾವಳಿಯ ಶಿಕ್ಷಣ ಕ್ಷೇತ್ರ ಮತ್ತು ವಿಶ್ವವಿದ್ಯಾನಿಲಯ ಸಹ ಈಗ ಹಿಂದುತ್ವದ ಲ್ಯಾಬ್ ಆಗಿ ಪರಿವರ್ತನೆ ಆಗುತ್ತಿರುವುದು ಭವಿಷ್ಯದ ದೃಷ್ಟಿಯಿಂದ ತುಂಬಾ ಅಪಾಯಕಾರಿಯಾಗಿ ಕಾಣುತ್ತಿದೆ. ನಮ್ಮ ರಾಜ್ಯದ ಶಿಕ್ಷಣ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಇದನ್ನು ಗಮನಿಸಿರುವರೇ?
- ರಾಮಕೃಷ್ಣ ಏ. ಕಿಲ್ಲೆ,
ಫಳ್ನೀರ್ ರೋಡ್, ಮಂಗಳೂರು
ಅನುದಾನ ರಹಿತ ಶಾಲಾ ಶಿಕ್ಷಕರ
ಶೋಷಣೆಗೆ ಕೊನೆ ಎಂದು?
ಮಾನ್ಯರೆ,
ಕರ್ನಾಟಕ ಸರಕಾರದ ಆದೇಶ ಸಂಖ್ಯೆ ಇಡಿ:104. ಎಸ್.ಇ.ಪಿ. ದಿನಾಂಕ: 12.01.2006 ಹಾಗೂ ಇಡಿ:208 ಎಸ್.ಇ.ಪಿ. ದಿನಾಂಕ 12.10.2007ರ ಪ್ರಕಾರ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿಪಡಿಸಿದ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆಯನ್ನು ಕಡ್ಡಾಯವಾಗಿ ನೀಡಲು ಸೂಚಿಸಿದೆ. ವೇತನವನ್ನು ಅಕೌಂಟ್‌ಪೇಯಿ ಚೆಕ್ ಮೂಲಕ ಪಾವತಿ ಮಾಡಬೇಕಾಗಿದೆ. ಆದರೆ ಹೆಚ್ಚಿನ ಶಾಲಾ ಆಡಳಿತ ಮಂಡಳಿಯವರು ತಿಂಗಳ ವೇತನ ನೀಡುವ ಸಂದರ್ಭದಲ್ಲಿ ಸದ್ರಿ ಶಿಕ್ಷಕರಿಂದ ಒತ್ತಾಯ ಪೂರ್ವಕವಾಗಿ ಖಾಲಿ ಚೆಕ್‌ನ್ನು ಪಡೆಯಲಾಗುತ್ತಿದೆ. ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಆದ ತಕ್ಷಣ ಶಿಕ್ಷಕರಿಂದ ಪಡೆದ ಖಾಲಿ ಚೆಕ್‌ನ್ನು ಭರ್ತಿ ಮಾಡಿಕೊಂಡು ಶಾಲೆಯ ವತಿಯಿಂದ ಕಲೆಕ್ಷನ್‌ಗೆ ಹಾಕಿ ಶಿಕ್ಷಕರಿಗೆ ನೀಡಿದ ವೇತನದಲ್ಲಿ ನಿರ್ದಿಷ್ಟ ಮೊತ್ತವನ್ನು ಶಾಲಾ ಆಡಳಿತ ಮಂಡಳಿಯವರು ಪ್ರತಿ ತಿಂಗಳು ಹಿಂಪಡೆಯುತ್ತಿದ್ದಾರೆ. ಸರಕಾರದ ಕಣ್ಣಿಗೆ ಮಣ್ಣೆರಚಲು ಚೆಕ್ ಮುಖಾಂತರ ವೇತನ ನೀಡಿ ನಿರ್ದಿಷ್ಟ ಮೊತ್ತವನ್ನು ಹಿಂಪಡೆಯುವುದು ಶಿಕ್ಷಕರಿಗೆ ಮಾಡುವ ದೊಡ್ಡ ಅನ್ಯಾಯವಾಗಿದೆ. ಶಿಕ್ಷಕರು ಈ ಕುರಿತು ಧ್ವನಿ ಎತ್ತಿದಲ್ಲಿ ತಮ್ಮ ಉದ್ಯೋಗವನ್ನು ಕಳಕೊಳ್ಳಬೇಕಾಗುತ್ತದೆ.
ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಮೇಲ್ಕಾಣಿಸಿದ ಅವ್ಯವಹಾರಗಳನ್ನು ಪತ್ತೆ ಹಚ್ಚುವರೇ ಶಿಕ್ಷಕರ ನೇಮಕಾತಿ ಆದೇಶ ಪತ್ರ, ಸೇವಾ ಪುಸ್ತಕ, ಶಿಕ್ಷಕರ ಬ್ಯಾಂಕ್ ಪಾಸ್‌ಪುಸ್ತಕ ಇತ್ಯಾದಿಗಳನ್ನು ಪರಿಶೀಲಿಸಿ ಅನುದಾನರಹಿತ ಶಾಲಾ ಶಿಕ್ಷಕರಿಗೆ ನ್ಯಾಯ ಒದಗಿಸಬೇಕಾಗಿ ವಿನಂತಿ.
-ಹರಿಪ್ರಸಾದ್,
ಕಡಬ- ಪುತ್ತೂರು,ದ.ಕ ಗೊಂದಲ ಪರಿಹರಿಸಿ
ಮಾನ್ಯರೆ,
ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಸೆಟ್‌ಅಪ್ ಬಾಕ್ಸ್ ಅಳವಡಿಕೆ ವಿಚಾರವು ಜನಸಾಮಾನ್ಯರಿಗೆ ಗೊಂದಲಕಾರಿಯಾಗಿದೆ. ಸುಮಾರು ಎರಡು ಸಾವಿರ ರೂ. ಬೆಲೆಬಾಳುವ ಈ ವಸ್ತು ಅಳವಡಿಕೆ ಒಂದೊಮ್ಮೆ ಕಡ್ಡಾಯವಾದರೆ ಜನಸಾಮಾನ್ಯರಿಗೆ ಬಹಳಷ್ಟು ಹೊರೆಯಾಗಬಹುದು. ಹಿಂದೆಯೂ ಈ ಬಗ್ಗೆ ಅತಿಪ್ರಚಾರವಾಗಿತ್ತು. ಆದರೆ ಮತ್ತೆ ಎಂದಿನಂತೆ ಮುಂದುವರಿದಿತ್ತು. ಹಾಗಾಗಿ ಈ ಬಾರಿ ಸೆಟ್‌ಅಪ್ ಬಾಕ್ಸ್ ಅಳವಡಿಕೆ ಕಡ್ಡಾಯವೇ ಅಥವಾ ಅಲ್ಲವೇ ಎಂಬುದನ್ನು ಸಂಬಂಧಪಟ್ಟವರು ಜನತೆಗೆ ಸ್ಪಷ್ಟವಾಗಿ ತಿಳಿಸಿದರೆ ಜನತೆಯಲ್ಲಿರುವ ಗೊಂದಲ ನಿವಾರಣೆಯಾಗಬಹುದು.







