ಆಸ್ಟ್ರೇಲಿಯ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಮೂರನೆ ಟೆಸ್ಟ್‌ಗೆ ಮಳೆಯ ಕಾಟ

ವೆಸ್ಟ್‌ಇಂಡೀಸ್ 7ಕ್ಕೆ 248 ರನ್
ಸಿಡ್ನಿ, ಜ.4: ಆತಿಥೇಯ ಆಸ್ಟ್ರೇಲಿಯ ಹಾಗೂ ವೆಸ್ಟ್‌ಇಂಡೀಸ್ ನಡುವಿನ ಮೂರನೆ ಟೆಸ್ಟ್ ಪಂದ್ಯದ ಎರಡನೆ ದಿನವೂ ಮಳೆಯಕಾಟದಿಂದಾಗಿ ಕೇವಲ 11.2 ಓವರ್ ಆಡಲು ಸಾಧ್ಯವಾಗಿದ್ದು, ವೆಸ್ಟ್‌ಇಂಡೀಸ್ 7 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ.
6 ವಿಕೆಟ್‌ಗಳ ನಷ್ಟಕ್ಕೆ 207 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ವಿಂಡೀಸ್ 68 ಎಸೆತಗಳಲ್ಲಿ 48 ರನ್ ಗಳಿಸುವಷ್ಟರಲ್ಲಿ ಕಾರ್ಲೊಸ್ ಬ್ರಾತ್‌ವೇಟ್ ವಿಕೆಟನ್ನು ಕಳೆದುಕೊಂಡಿತು. ಆಲ್‌ರೌಂಡರ್ ಬ್ರಾತ್‌ವೇಟ್ ವೇಗದ ಬೌಲರ್ ಜೇಮ್ಸ್ ಪ್ಯಾಟಿನ್ಸನ್‌ಗೆ ವಿಕೆಟ್ ಒಪ್ಪಿಸುವ ಮೊದಲು 71 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ ಏಳು ಬೌಂಡರಿಗಳನ್ನು ಒಳಗೊಂಡ 69 ರನ್ ಗಳಿಸಿದ್ದಾರೆ.
ಮಳೆಯಿಂದಾಗಿ ಪಂದ್ಯ ಬೇಗನೆ ಕೊನೆಗೊಂಡಾಗ ದಿನೇಶ್ ರಾಮ್ದಿನ್(ಔಟಾಗದೆ 30) ಹಾಗೂ ಕೇಮರ್ ರೋಚ್(0) ಕ್ರೀಸ್ ಕಾಯ್ದುಕೊಂಡಿದ್ದರು.
ದಿನದ ಆರಂಭದಲ್ಲಿ ಸ್ಪಿನ್ ಬೌಲರ್ ನಥನ್ ಲಿಯೊನ್ ಮೂರು ಎಸೆತಗಳನ್ನು ಹಾಕುವಷ್ಟರಲ್ಲಿ ಮಳೆ ಆಗಮಿಸಿ 80 ನಿಮಿಷಗಳ ಕಾಲ ಪಂದ್ಯಕ್ಕೆ ಅಡ್ಡಿಯಾಯಿತು. ಪಂದ್ಯ ಮತ್ತೆ ಆರಂಭವಾಗಿ 8 ನಿಮಿಷಗಳಾದಾಗ ವಿಂಡೀಸ್ 21 ಎಸೆತಗಳನ್ನು ಎದುರಿಸಿ 9 ರನ್ ಗಳಿಸಿತು. ಆಗ ಮತ್ತೆ ಮಳೆ ಆಗಮಿಸಿದ್ದು ಭೋಜನ ವಿರಾಮ ತೆಗೆದುಕೊಳ್ಳಲಾಯಿತು.
ಭೋಜನ ವಿರಾಮದ ಬಳಿಕ ಬ್ರಾತ್‌ವೇಟ್, ವೇಗಿ ಪ್ಯಾಟಿನ್ಸನ್ ಎಸೆತದಲ್ಲಿ ಬೌಂಡರಿ ಬಾರಿಸಿ 50 ಎಸೆತಗಳಲ್ಲಿ ಅರ್ಧಶತಕವನ್ನು ಪೂರೈಸಿದರು. ಕಳೆದ ವಾರ ಮೆಲ್ಬೋರ್ನ್‌ನಲ್ಲಿ ಆಡಿದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 59 ರನ್ ಗಳಿಸಿದ್ದ ಬ್ರಾತ್‌ವೇಟ್ ಸತತ ಎರಡನೆ ಅರ್ಧಶತಕ ದಾಖಲಿಸಿದರು. 2010ರ ಬಳಿಕ ಎರಡು ಟೆಸ್ಟ್‌ನಲ್ಲಿ ಅರ್ಧಶತಕ ಸಿಡಿಸಿದ ವಿಂಡೀಸ್‌ನ ಮೊದಲ ದಾಂಡಿಗ ಎನಿಸಿಕೊಂಡರು. ಬ್ರಾವೊ 2010ರಲ್ಲಿ ಸತತ ಎರಡು ಅರ್ಧಶತಕ ಬಾರಿಸಿದ್ದರು.
ಪಂದ್ಯಕ್ಕೆ ಮಳೆ ನಿರಂತರವಾಗಿ ಅಡ್ಡಿಪಡಿಸಿದ ಕಾರಣ 12.5 ಓವರ್‌ಗಳನ್ನು ಮಾತ್ರ ಆಡಲು ಸಾಧ್ಯವಾಯಿತು. 25 ಓವರ್‌ಕ್ಕಿಂತಲೂ ಕಡಿಮೆ ಪಂದ್ಯ ಆಡಿದ ಕಾರಣ ಪಂದ್ಯ ವೀಕ್ಷಿಸಲು ಬಂದಿದ್ದ 14,266 ಪ್ರೇಕ್ಷಕರಿಗೆ ಟಿಕೆಟ್ ಹಣವನ್ನು ಹಿಂದಿರುಗಿಸಲಾಯಿತು.







