ಪಠಾಣ್‌ಕೋಟ್ ಸೇನಾ ಕಾರ್ಯಾಚರಣೆ: ಐವರು ಉಗ್ರರ ಹತ್ಯೆ

ಖಚಿತ ಪಡಿಸಿದ ಎನ್‌ಎಸ್‌ಜಿ
♦ ಪಠಾಣ್‌ಕೋಟ್ ವಾಯುನೆಲೆಯಲ್ಲಿ ಇನ್ನಷ್ಟು ಉಗ್ರರ ಉಪಸ್ಥಿತಿ ‘‘ತಳ್ಳಿಹಾಕುವಂತಿಲ್ಲ’’
ಪಠಾಣ್‌ಕೋಟ್, ಜ.4: ಪಂಜಾಬ್‌ನ ಪಠಾಣ್‌ಕೋಟ್ ವಾಯು ನೆಲೆಗೆ ಭಯೋತ್ಪಾದಕರು ದಾಳಿ ನಡೆಸಿದ 60 ಗಂಟೆಗಳಿಗೂ ಹೆಚ್ಚಿನ ಅವಧಿಯಲ್ಲಿ, ಭದ್ರತಾ ಪಡೆಗಳು ನಡೆಸಿದ ಪ್ರತಿ ದಾಳಿಯಲ್ಲಿ ಐವರು ದಾಳಿಕೋರರು ಹತರಾಗಿದ್ದಾರೆ ಎಂದು ನ್ಯಾಶನಲ್ ಸೆಕ್ಯುರಿಟಿ ಗಾರ್ಡ್ (ಎನ್‌ಎಸ್‌ಜಿ) ಖಚಿತ ಪಡಿಸಿದೆ.
ಆದಾಗ್ಯೂ, ವಾಯು ನೆಲೆಯಲ್ಲಿ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ಈಗಲೂ ಮುಂದುವರಿಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹಾಗೂ ವಾಯು ನೆಲೆಯ ಆವರಣದಲ್ಲಿ ಇನ್ನಷ್ಟು ಭಯೋತ್ಪಾದಕರು ಇರುವ ಸಾಧ್ಯತೆಯನ್ನು ಅವು ನಿರಾಕರಿಸಿಲ್ಲ.
ಭಯೋತ್ಪಾದಕರು ಆತ್ಮಹತ್ಯಾ ತಂಡದ ಸದಸ್ಯರು ಎಂಬುದಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
‘‘ವಾಯು ಪಡೆ ನೆಲೆಯಲ್ಲಿರುವ ನಮ್ಮ ಸೊತ್ತುಗಳನ್ನು ನಾಶಪಡಿಸಲು ಭಯೋತ್ಪಾದಕರು ಬಯಸಿದ್ದಾರೆ. ಅವರು ಆತ್ಮಹತ್ಯಾ ತಂಡದ ಸದಸ್ಯರಾಗಿದ್ದಾರೆ’’ ಎಂದು ಹೇಳಿದರು.
‘‘ಭಯೋತ್ಪಾದಕರನ್ನು ಜೀವಂತವಾಗಿ ಹಿಡಿಯುವುದು ಅಥವಾ ಕೊಲ್ಲುವುದು ನಮ್ಮ ಕಾರ್ಯಾಚರಣೆಯ ಉದ್ದೇಶ. ಬೃಹತ್ ವಾಯು ನೆಲೆ ಅಗಿರುವುದರಿಂದ ಉಗ್ರ ನಿಗ್ರಹ ಕಾರ್ಯಾಚರಣೆಗೆ ಹೆಚ್ಚು ಸಮಯ ತಗಲಿದೆ’’ ಎಂದರು.
ಕಾರ್ಯಾಚರಣೆಯ ದಾಳಿ ಭಾಗ ಮುಕ್ತಾಯವಾಗಿದೆ. ನಾವು ಐದನೆ ಭಯೋತ್ಪಾದಕನನ್ನು ಮುಗಿಸಿದ್ದೇವೆ ಹಾಗೂ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಎನ್‌ಎಸ್‌ಜಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಈ ಹಿಂದೆ, ನಾಲ್ವರು ಭಯೋತ್ಪಾದಕರು ಹತರಾಗಿರುವುದನ್ನು ಎನ್‌ಎಸ್‌ಜಿ ಖಚಿತಪಡಿಸಿತ್ತು.
ಎಲ್ಲ ಕುಟುಂಬಗಳು ಸುರಕ್ಷಿತವಾಗಿವೆ ಹಾಗೂ ವಾಯು ನೆಲೆಯ ಎಲ್ಲ ಸೊತ್ತುಗಳು ಭದ್ರವಾಗಿವೆ ಎಂದು ಎನ್‌ಎಸ್‌ಜಿ ಹೇಳಿದೆ. ವಾಯು ನೆಲೆಯ ಶೋಧ ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಹಾಗೂ ಸುರಕ್ಷಿತವಾಗಿ ಮತ್ತೆ ಸೇನೆಯ ನಿಯಂತ್ರಣಕ್ಕೆ ಬರುವವರೆಗೆ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಇನ್ನೂ ಇಬ್ಬರು ಉಗ್ರರು?
ವಾಯು ಪಡೆ ಸಿಬ್ಬಂದಿ ತಮ್ಮ ಕುಟುಂಬಗಳ ಜೊತೆ ವಾಸಿಸುತ್ತಿರುವ ಕಟ್ಟಡದಲ್ಲಿ ಇಬ್ಬರು ಭಯೋತ್ಪಾದಕರು ಈಗಲೂ ಅವಿತುಕೊಂಡಿದ್ದಾರೆ ಎಂಬುದಾಗಿ ಸೋಮವಾರದ ಆರಂಭಿಕ ವರದಿಗಳು ತಿಳಿಸಿದ್ದವು. ಅವಿತುಕೊಂಡಿರುವ ಉಗ್ರರನ್ನು ಹೊರದಬ್ಬುವ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸುತ್ತಿದ್ದಂತೆಯೇ ಮುಂಜಾನೆಯಿಂದ ಬೃಹತ್ ಗುಂಡಿನ ದಾಳಿಯ ಸದ್ದುಗಳು ಕೇಳಿವೆ.
ಸುಟ್ಟು ಕರಕಲಾದ ದೇಹವೊಂದು ಪತ್ತೆಯಾಗಿದೆ ಹಾಗೂ ಅದನ್ನು ಗುರುತಿಸಲು ವಿಧಿವಿಜ್ಞಾನ ಪರೀಕ್ಷೆಯ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.
ಭಯೋತ್ಪಾದಕರು ಡಿಸೆಂಬರ್ 30ರ ರಾತ್ರಿ ಪಾಕಿಸ್ತಾನದ ಕಡೆಯಿಂದ ಭಾರತದ ಕಡೆಗೆ ನುಸುಳಿ ಬಂದಿರಬೇಕು ಎಂದು ಶಂಕಿಸಲಾಗಿದೆ. ಭಯೋತ್ಪಾದಕರು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರನ್ನು ಅಪಹರಿಸಿ ಅವರ ಕಾರನ್ನು ತೆಗೆದುಕೊಂಡು ಹೋದ ಬಳಿಕ ಕಟ್ಟೆಚ್ಚರ ಘೋಷಿಸಲಾಗಿತ್ತು.
ಶುಕ್ರವಾರ ಮತ್ತು ಶನಿವಾರದ ನಡುವಿನ ಅವಧಿಯಲ್ಲಿ ಅವರು ವಾಯುನೆಲೆಯನ್ನು ಪ್ರವೇಶಿಸಿರಬೇಕು ಎಂದು ಭಾವಿಸಲಾಗಿದೆ. ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಏಳು ಭದ್ರತಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ
ಪಠಾಣ್‌ಕೋಟ್ ವಾಯುಪಡೆಯ ನೆಲೆಯಲ್ಲಿ ಅಡಗಿಕೊಂಡಿರುವ ಭಯೋತ್ಪಾದಕರನ್ನು ಹೊರದಬ್ಬಲು ನಡೆಯುತ್ತಿರುವ ಕಾರ್ಯಾಚರಣೆ ಮತ್ತು ಅಫ್ಘಾನಿಸ್ತಾನದಲ್ಲಿ ಭಾರತೀಯ ಕಾನ್ಸುಲೇಟ್ ಕಚೇರಿ ಮೇಲೆ ನಡೆದ ದಾಳಿಗಳ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆಯಿತು.
ಪಠಾಣ್‌ಕೋಟ್‌ನಲ್ಲಿ ಪ್ರಗತಿಯಲ್ಲಿರುವ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ ಮತ್ತು ಅಫ್ಘಾನಿಸ್ತಾನದ ಮಝಾರೆ ಶರೀಫ್‌ನಲ್ಲಿ ನಿನ್ನೆ ಭಾರತೀಯ ಕಾನ್ಸುಲೇಟ್ ಕಚೇರಿ ಮೇಲೆ ನಡೆದ ದಾಳಿಗಳ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಸೇರಿದಂತೆ ಉನ್ನತ ಭದ್ರತಾ ಅಧಿಕಾರಿಗಳು ಪ್ರಧಾನಿಗೆ ವಿವರಣೆ ನೀಡಿದರು ಎನ್ನಲಾಗಿದೆ.
ಭದ್ರತೆ ಕುರಿತ ಸಂಪುಟ ಸಮಿತಿಯ ಸದಸ್ಯರಾಗಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಸಭೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕದ ಎರಡು ದಿನಗಳ ಭೇಟಿಯ ಬಳಿಕ ದಿಲ್ಲಿಗೆ ಹಿಂದಿರುಗಿದ ಮೋದಿ ನಿನ್ನೆ ರಾತ್ರಿಯೂ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಧೋವಲ್ ಮತ್ತು ವಿದೇಶ ಕಾರ್ಯದರ್ಶಿ ಎಸ್. ಜೈಶಂಕರ್ ಪ್ರಧಾನಿಗೆ ಭದ್ರತಾ ಪರಿಸ್ಥಿತಿ ಕುರಿತು ವಿವರಣೆ ನೀಡಿದ್ದರು.







