ಈಶಾನ್ಯದಲ್ಲಿ ಭೂಕಂಪ: ಕನಿಷ್ಠ 8 ಸಾವು

ಇಂಫಾಲ್, ಜ. 4: ಸೋಮವಾರ ಮುಂಜಾನೆ ಈಶಾನ್ಯ ಭಾರತದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ ಹಾಗೂ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ತೀವ್ರ ವಿದ್ಯುತ್ ವೈಫಲ್ಯ ಹಾಗೂ ಟೆಲಿಫೋನ್ ಸಂಪರ್ಕ ಅಡಚಣೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ಹಿನ್ನಡೆಯಾಗಿದೆ.
ಬಾಂಗ್ಲಾದೇಶದಲ್ಲೂ ಭೂಕಂಪದ ಪರಿಣಾಮ ಕಾಣಿಸಿಕೊಂಡಿದ್ದು, ಮೂವರು ಮೃತಪಟ್ಟಿದ್ದಾರೆ ಹಾಗೂ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ರಿಕ್ಟರ್ ಮಾಪಕದಲ್ಲಿ 6.7ರ ತೀವ್ರತೆಯ ಭೂಕಂಪ ಮಣಿಪುರದ ರಾಜಧಾನಿ ಇಂಫಾಲದ ಪಶ್ಚಿಮದಿಂದ 29 ಕಿಲೋ ಮೀಟರ್ ಅಂತರದಲ್ಲಿ 57 ಕಿ.ಮೀ. ಆಳದಲ್ಲಿ ಸಂಭವಿಸಿತು ಎಂದು ಯುಎಸ್ ಜಿಯಾಲಜಿಕಲ್ ಸರ್ವೆ ಹೇಳಿದೆ.
ಭೂಕಂಪ ಸಂಭವಿಸುವಾಗ ಹೆಚ್ಚಿನವರು ಮುಂಜಾನೆಯ ಗಾಢ ನಿದ್ದೆಯಲ್ಲಿದ್ದರು. ಕೆಲವು ಕಟ್ಟಡಗಳ ಮೇಲ್ಛಾವಣಿಗಳು ಮತ್ತು ಮೆಟ್ಟಿಲುಗಳು ಕುಸಿದುಬಿದ್ದವು.
‘‘ಇದು ಇಂಫಾಲದಲ್ಲಿ ನಾವು ನೋಡಿದ ಅತಿ ಭೀಕರ ಭೂಕಂಪವಾಗಿದೆ’’ ಎಂದು ರಕ್ಷಣಾ ಕಾರ್ಯಕರ್ತ ಕನರ್ಜಿತ್ ಕಂಜುಗಮ್ ಹೇಳುತ್ತಾರೆ.
ನಿರ್ಮಾಣ ಹಂತದ ಕಟ್ಟಡದ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಭಾವಿಸಲಾದ ಕಟ್ಟಡ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಕರ್ತರು ತೀವ್ರ ಶೋಧ ನಡೆಸಿದರು.
ಜನರು ತಮ್ಮ ಮನೆಗಳನ್ನು ತೊರೆದು ಹೊರಬಂದಿದ್ದಾರೆ ಎಂದು ಸ್ಥಳೀಯರು ತಿಳಿಸಿದರು. ಭೂಕಂಪ ಪೀಡಿತ ಸ್ಥಳಗಳಲ್ಲಿ ವಿದ್ಯುತ್ ಮತ್ತು ಸಂಪರ್ಕ ವ್ಯವಸ್ಥೆ ಕೈಕೊಟ್ಟಿದೆ.
ರಕ್ಷಣಾ ಕಾರ್ಯಾಚರಣೆಯ ಗತಿ ನಿಧಾನವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸೇನೆ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆಯಾದರೂ ಅವಶೇಷಗಳನ್ನು ತೆರವುಗೊಳಿಸುವ ಬೃಹತ್ ಯಂತ್ರಗಳ ಕೊರತೆಯನ್ನು ಅದು ಎದುರಿಸುತ್ತಿದೆ.





