ಕೀರ್ತಿ ಆಝಾದ್, ಇತರರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು
ಹೊಸದಿಲ್ಲಿ, ಜ. 4: ಬಿಜೆಪಿಯಿಂದ ಅಮಾನತುಗೊಂಡಿರುವ ಸಂಸದ ಕೀರ್ತಿ ಆಝಾದ್ ಮತ್ತು ಇತರ ಮೂವರು ಮಾಜಿ ಕ್ರಿಕೆಟಿಗರ ವಿರುದ್ಧ ಸಲ್ಲಿಸಲಾಗಿರುವ ಕ್ರಿಮಿನಲ್ ಮಾನನಷ್ಟ ದೂರನ್ನು ವಿಚಾರಣಾ ನ್ಯಾಯಾಲಯವೊಂದು ಸೋಮವಾರ ವಿಚಾರಣೆಗೆ ಅಂಗೀಕರಿಸಿದೆ.
ದಿಲ್ಲಿಯ ಕ್ರಿಕೆಟಿಗ ಹಿಮ್ಮತ್ ಸಿಂಗ್‌ರ ತಂದೆ ತೇಜ್‌ಬೀರ್ ಸಿಂಗ್ ಹೂಡಿದ ಪ್ರಕರಣದಲ್ಲಿ ಸಮನ್ಸ್ ಪೂರ್ವ ಪುರಾವೆ ದಾಖಲಾತಿಯನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆಕಾಶ್ ಜೈನ್ ಫೆಬ್ರವರಿ 22ಕ್ಕೆ ನಿಗದಿಪಡಿಸಿದರು. ದೂರುದಾರ ತೇಜ್‌ಬೀರ್ ಮಗ ಹಿಮ್ಮತ್ ರಾಜ್ಯ ಮಟ್ಟದ ಕ್ರಿಕೆಟಿಗನಾಗಿದ್ದಾರೆ. ಅವರು ಕೀರ್ತಿ ಆಝಾದ್, ಬಿಶನ್ ಸಿಂಗ್ ಬೇಡಿ, ಸುರಿಂದರ್ ಖನ್ನಾ ಮತ್ತು ಸಮೀರ್ ಬಹಾದುರ್ ಮುಂತಾದ ಮಾಜಿ ಕ್ರಿಕೆಟಿಗರ ವಿರುದ್ಧ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಡಿಡಿಸಿಎ ವಿವಾದಕ್ಕೆ ತನ್ನನ್ನು ಮತ್ತು ಮಗನನ್ನು ಅನಾವಶ್ಯಕವಾಗಿ ಎಳೆದು ತರಲಾಗಿದೆ ಹಾಗೂ ಈ ನಾಲ್ವರು ತಮ್ಮ ಪ್ರತಿಷ್ಠೆಗೆ ದಕ್ಕೆಯುಂಟು ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
25 ಲಕ್ಷ ರೂ. ಲಂಚ ನೀಡಿ ಹಿಮ್ಮತ್, ವಿಜಯ್ ಹಝಾರೆ ಟ್ರೋಫಿಯಲ್ಲಿ ಆಡುವ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ ಎಂಬ ಆಧಾರರಹಿತ ಆರೋಪಗಳನ್ನು ಈ ನಾಲ್ವರು ಮಾಡಿದ್ದಾರೆ ಎಂದು ತೇಜ್‌ಬೀರ್ ದೂರಿದ್ದಾರೆ.





