ಮಾಧ್ಯಮ ನಿಯಂತ್ರಿಸುವ ಜೇಟ್ಲಿ.. ಮೂರ್ಖನನ್ನಾಗಿ ಮಾಡಿದ ಮೋದಿ...
ವಿಶೇಷ ಸಂದರ್ಶನದಲ್ಲಿ ರಾಮ್ ಜೇಠ್ಮಲಾನಿ ಮನದಾಳದ ಮಾತು
* ದೇಶದ ಅತ್ಯಂತ ದುಬಾರಿ ವಕೀಲರು ನೀವು. ಕೇಜ್ರಿವಾಲ್ ವಿರುದ್ಧ ಜೇಟ್ಲಿ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯಲ್ಲಿ ಕೇಜ್ರಿ ಪರ ವಕಾಲತು ವಹಿಸಲು ಕೇವಲ ಒಂದು ರೂಪಾಯಿ ಶುಲ್ಕ ವಿಧಿಸಿದ್ದೀರಿ?
ಉ: ಅತಿಹೆಚ್ಚು ಸಂಭಾವನೆ ಪಡೆಯುವ ವಕೀಲ ಎನ್ನುವುದು ನನ್ನ ಗೌರವ. ಆದರೆ ನಾನು ಕೇವಲ ಶೇಕಡ 10ರಷ್ಟು ಕಕ್ಷಿದಾರರಿಂದ ಹಣ ಪಡೆಯುತ್ತೇನೆ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಉಳಿದ ನನ್ನ ಕೆಲಸ ಒಳಿತಿಗಾಗಿ ಮಾಡುವುದು. ನಾನು ಉಚಿತವಾಗಿ ಕೆಲಸ ಮಾಡುತ್ತೇನೆ. ಖಂಡಿತವಾಗಿಯೂ ನಾನು ಕೇಜ್ರಿವಾಲ್ ಅವರಿಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಏಕೆಂದರೆ ಅವರ ಸರಕಾರವೇ ತೀರಾ ಬಡ ಸರಕಾರ. (ಹೃದಯಪೂರ್ವಕ ನಗೆ)
* ಆಮ್ ಆದ್ಮಿ ಪಕ್ಷದವರು ನಿಮ್ಮ ಬಳಿಗೆ ಬಂದರೇ ಅಥವಾ ನೀವೇ ಅವರ ಬಳಿಗೆ ಹೋದದ್ದೇ?
ಉ: ನಾನಾಗಿಯೇ ಯಾರನ್ನೂ ಸಂಪರ್ಕಿಸುವುದಿಲ್ಲ. ಕೇಜ್ರಿವಾಲ್ ನನ್ನ ಸಂಪರ್ಕ ಸಾಧಿಸಿದರು. ಆಗ ನಾನು ಖಂಡಿತವಾಗಿಯೂ ನಿಮ್ಮ ಪರ ವಕಾಲತು ವಹಿಸುತ್ತೇನೆ ಎಂದು ಹೇಳಿದೆ.
* ಡಿಸಿಸಿಎ ಭ್ರಷ್ಟಾಚಾರ ಕುರಿತ ದಾಖಲೆಗಳನ್ನು ನೀವು ಪರಿಶೀಲಿಸಿದ್ದೀರಾ?
ಉ: ಹೌದು.
* ಜೇಟ್ಲಿಯವರ ಅಧಿಕಾರಾವಧಿಯಲ್ಲಿ ಡಿಡಿಸಿಎಯಲ್ಲಿ ಹಣ ದುರ್ಬಳಕೆಯಾಗಿರುವುದು ಕಾನೂನುಬದ್ಧವಾಗಿ ಸಮರ್ಥನೀಯವೇ?
ಉ: ಒಬ್ಬ ವ್ಯಕ್ತಿ ನಿಜವಾಗಿಯೂ ಜಾಗರೂಕನಾಗಿದ್ದರೆ, ಆತ ಲೋಪವನ್ನು ಪತ್ತೆ ಮಾಡಿ, ಬಹಿರಂಗಪಡಿಸಬಲ್ಲ ಅಥವಾ ಅದರಿಂದ ಅಂತರ ಕಾಯ್ದುಕೊಳ್ಳಬಲ್ಲ. ಡಿಡಿಸಿಎ ಅವ್ಯವಹಾರಗಳಿಗೆ ಜೇಟ್ಲಿ ಪ್ರಜ್ಞಾಪೂರ್ವಕವಾಗಿ ಕಣ್ಣು ಮುಚ್ಚಿಕೊಂಡಿದ್ದಾರೆ ಎಂದು ನಂಬಲು ಪ್ರಬಲ ಕಾರಣಗಳಿವೆ. ಇದಕ್ಕಿಂತ ಹೆಚ್ಚೇನನ್ನೂ ಹೇಳಬಯಸುವುದಿಲ್ಲ. ಇತರ ಹಲವು ಮಂದಿ ನನಗಿಂತ ಪ್ರಬಲ ಸುಳಿವು ನೀಡಬಹುದು. ನಾನು ಈಗಲೂ ಅನುಮಾನದ ಪ್ರಯೋಜನವನ್ನು ಅವರಿಗೆ ನೀಡುವ ಸ್ಥಿತಿಯಲ್ಲಿದ್ದೇನೆ.
* ಒಬ್ಬ ವ್ಯಕ್ತಿ ಸಿವಿಲ್ ಹಾಗೂ ಕ್ರಿಮಿನಲ್ ಮಾನಹಾನಿ ಪ್ರಕರಣ ದಾಖಲಿಸುವುದು ಅಪರೂಪವಲ್ಲವೇ?
ಉ: ಹೌದು. ಮೊಟ್ಟಮೊದಲನೆಯದಾಗಿ, ಬಹುಶಃ ಅವರ ಯೋಚನೆ, ಅವರು ಆರೋಪ ಮಾಡಿರುವ ಹೇಳಿಕೆಯನ್ನು ಪುನರುಚ್ಚರಿಸದಂತೆ ಇಂಜಂಕ್ಷನ್ ಪಡೆಯುವುದಾಗಿದೆ. ಇದಕ್ಕಾಗಿ ಸಿವಿಲ್ ದಾವೆ ಹೂಡಿದ್ದಾರೆ. ಹೇಗಾದರೂ ಅವರು ಪ್ರಕರಣವನ್ನು ಮುಂದುವರಿಸುವ ಸಂಭವ ಇಲ್ಲ (ನಗೆ)
* ಯಾಕೆ ಹಾಗೆ ಹೇಳುತ್ತೀರಿ?
ಉ: ವಹಿವಾಟಿನ ತಂತ್ರಗಳು ನನಗೆ ತಿಳಿದಿವೆ. ಜೇಟ್ಲಿ ಕ್ರಿಮಿನಲ್ ದಾವೆಯ ಮೂಲಕ ವಿರೋಧಿಗಳಲ್ಲಿ ಭಯ ಹುಟ್ಟಿಸುವ ತಂತ್ರ ಅನುಸರಿಸುತ್ತಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಈಗಾಗಲೇ ಭ್ರಮೆ ಹೋಗಿದೆ. ಈಗ ಇರುವ ಸ್ಥಿತಿಯಲ್ಲಿ ಮಾನಹಾನಿ ಪ್ರಕರಣದ ದೂರುದಾರರೇ ಆರೋಪಿಯಾಗುವ ಸಾಧ್ಯತೆ ಇದೆ.
* ಈ ಮಾನಹಾನಿ ಪ್ರಕರಣ ಸ್ವೀಕಾರಾರ್ಹವಲ್ಲ ಎಂಬ ನಿರ್ಧಾರಕ್ಕೆ ನ್ಯಾಯಾಲಯ ಬಂದರೆ ಮುಂದಿನ ನಡೆ ಏನು? ಜೇಟ್ಲಿ ವಿರುದ್ಧದ ಭ್ರಷ್ಟಾಚಾರ ಹಗರಣ ಸಾಬೀತಾದಂತಾಗುತ್ತದೆಯೇ? ಅಥವಾ ಅವರ ವಿರುದ್ಧದ ಭ್ರಷ್ಟಾಚಾರ ಹಗರಣ ಮೇಲ್ನೋಟಕ್ಕೆ ಇದೆ ಎಂಬ ಅರ್ಥವೇ?
ಉ: ಹೌದು. ಹಾಗಾದರೆ ಕನಿಷ್ಠ ಜೇಟ್ಲಿ ರಾಜೀನಾಮೆ ನೀಡಬೇಕಾಗುತ್ತದೆ. ಹೇಗಾದರೂ ಅವರು ಜೈಲುಪಾಲಾಗುವುದನ್ನು ನಾನು ಬಯಸುವುದಿಲ್ಲ. ಸಾರ್ವಜನಿಕ ಜೀವನ, ಸಂಪೂರ್ಣವಾಗಿ ಶುದ್ಧ ಚಾರಿತ್ರ್ಯದವರು ಎಂದು ಹೇಳಿಕೊಳ್ಳಲಾಗದವರಿಂದ ಪರಿಶುದ್ಧವಾಗಬೇಕು.
* ದಿಲ್ಲಿ ಸರಕಾರ ನೇಮಿಸಿದ ಸಮಿತಿ ವರದಿಯಲ್ಲಿ ಜೇಟ್ಲಿ ಅಥವಾ ಕೇಜ್ರಿವಾಲ್ ಹೇಳಿದ ಹೆಸರುಗಳು ಇಲ್ಲದಿರುವುದರಿಂದ ಆರೋಪಗಳಿಗೆ ಕೇಜ್ರಿವಾಲ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ?
ಉ: ಹೀಗೆ ನೇಮಕಗೊಂಡ ಸಮಿತಿಗಳು ಕೂಡಾ ರಾಜಕಾರಣದ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳಲು ಬಯಸುವುದಿಲ್ಲ. ಅದರಲ್ಲೂ ಮುಖ್ಯವಾಗಿ ಪ್ರಭಾವಿ ರಾಜಕಾರಣಿಗಳ ವಿಚಾರದಲ್ಲಿ. ಸಮಿತಿ ಹೆಸರಿಸಿಲ್ಲವೆಂಬ ಮಾತ್ರಕ್ಕೆ ಏನೂ ಆಗಿಲ್ಲವೆಂಬ ಅರ್ಥವಲ್ಲ. ಒಬ್ಬ ವ್ಯಕ್ತಿ ತಮ್ಮ ಸುತ್ತಲಿನ ತಪ್ಪುಗಳ ಬಗ್ಗೆ ಏನೂ ಮಾಡುತ್ತಿಲ್ಲವೆಂದರೆ, ಅವರ ಜೊತೆ ಒಳಸಂಚು ನಡೆಸಿದ್ದಾನೆ ಎಂಬ ಅರ್ಥ.
ಭಾರತದ ಜನತಾ ನ್ಯಾಯಾಲಯದಲ್ಲಿ, ತಾರ್ಕಿಕ ಸಂದೇಹದಿಂದಾಚೆಗೆ ತಪ್ಪುಮಾಡಿದ್ದಕ್ಕೆ ಪುರಾವೆಗಳು ಬೇಡ. ಅಂದರೆ ಒಬ್ಬ ಜನಸಾಮಾನ್ಯನಿಗೆ ಒಬ್ಬ ವಕೀಲನಿಗಿಂತ ಹೆಚ್ಚು ಕಾನೂನಿನ ಬಗ್ಗೆ ತಿಳುವಳಿಕೆ ಇರುತ್ತದೆ. ನನ್ನ ವೈಯಕ್ತಿಕ ನಂಬಿಕೆಯಂತೆ, ಜೇಟ್ಲಿ ಬೇರೆಯವರಿಂದ ತಪ್ಪು ಸಲಹೆ ಪಡೆದಿದ್ದಾರೆ.
* ಅಂದರೆ?
ಉ: ಅವರು ನ್ಯಾಯಾಲಯಕ್ಕೆ ಹೋಗಬಾರದಿತ್ತು. ಇವು ಜನತಾ ನ್ಯಾಯಾಲಯದಲ್ಲಿ ನೀವು ಹೋರಾಡಬೇಕಾದ ಪ್ರಕರಣಗಳು.
* ಆದ್ದರಿಂದ ಜೇಟ್ಲಿ ನಿಮ್ಮ ಸಲಹೆ ಕೇಳಿದ್ದರೆ?
ಉ: ಖಂಡಿತವಾಗಿಯೂ ನ್ಯಾಯಾಲಯಕ್ಕೆ ಹೋಗುವಂತೆ ನಾನು ಯಾರಿಗೂ ಸಲಹೆ ನೀಡುವುದಿಲ್ಲ. ಅದರಲ್ಲೂ ಮುಖ್ಯವಾಗಿ ಸಾರ್ವಜನಿಕ ಜೀವನದ ಪ್ರಶ್ನಾರ್ಹ ಅಂಶಗಳ ಬಗ್ಗೆ. ಬಹುಶಃ ಕೇಜ್ರಿವಾಲ್‌ಗೂ ಈ ಕಲ್ಪನೆ ಇರದು. ಬಹುಶಃ ಅವರ ವಕೀಲರು ಚೆನ್ನಾಗಿ ತಿಳಿದಿರಬೇಕು. ಹೀಗೆ ತಪ್ಪಾಗಿ ಸಲಹೆ ಮಾಡಿದ್ದರಿಂದಲೇ ಜೇಟ್ಲಿ ನ್ಯಾಯಾಲಯಕ್ಕೆ ಹೋಗುವ ನಿರ್ಧಾರ ಕೈಗೊಂಡರು. ಅದನ್ನು ಅವರು ನಯವಾಗಿ ನಿರ್ವಹಿಸಬೇಕಿತ್ತು. ಅಂತಿಮವಾಗಿ ದೇಶದ ಜನತೆಯ ತೀರ್ಮಾನ ಮುಖ್ಯ.
* ಈ ವಿಷಯದಲ್ಲಿ ನೀವು ಕೇಜ್ರಿವಾಲ್ ಅವರನ್ನು ಭೇಟಿ ಮಾಡಿದ್ದೀರಾ?
ಉ: ಅವರ ಸ್ನೇಹಿತರು ಬಂದಿದ್ದರು. ಅವರು ಕೂಡಾ ಒಂದು ಬಾರಿ ಮನೆಗೆ ಬಂದಿದ್ದರು. ಆರೋಪದ ಪ್ರತಿ ಇನ್ನೂ ನನ್ನ ಕೈಸೇರುವ ಮೊದಲೇ ನಾನು ಅವರಿಗೆ, ಹೆದರಬೇಡಿ. ನಿಮ್ಮ ಪರವಾಗಿ ನಾನು ಖಂಡಿತಾ ಹಾಜರಾಗುತ್ತೇನೆ ಎಂದಿದ್ದೆ.
* ಜೇಟ್ಲಿ ಮಾನಹಾನಿ ಪ್ರಕರಣ ದಾಖಲಿಸಿದಾಗ, ಬಿಜೆಪಿ ತಳಹಂತದ ಕಾರ್ಯಕರ್ತರಿಂದ ನಾಯಕರವರೆಗೆ ಎಲ್ಲರೂ ಇದ್ದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಹಾಗೂ ರಾಹುಲ್ ನ್ಯಾಯಾಲಯಕ್ಕೆ ಹಾಜರಾದಾಗ ಇದ್ದ ವಾತಾವರಣವೇ ಇತ್ತು. ಈ ಎರಡು ದೃಶ್ಯಗಳ ಸಾಮ್ಯತೆ ಏನು?
ಉ: ಇದು ಜನರ ಎದುರು ಮಾಡುವ ಪ್ರದರ್ಶನ. ಇದು ಪ್ರಾಮಾಣಿಕ ನ್ಯಾಯಾಧೀಶರಿಗೆ ಯಾವ ಪ್ರಭಾವವನ್ನೂ ಬೀರುವುದಿಲ್ಲ. ಉತ್ತಮ ನ್ಯಾಯಾಧೀಶ, ತನ್ನ ಮೇಲೆ ಪ್ರಭಾವ ಬೀರಲು ಹೀಗೆ ಮಾಡಿರಬಹುದೇ ಎಂಬ ಸಂಶಯ ತಾಳಬಹುದು.
* ನೀವು ಜೇಟ್ಲಿಯವರನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದೀರಿ. ನಿಮ್ಮಿಬ್ಬರ ಮಧ್ಯೆ ವೈಮನಸ್ಯಕ್ಕೆ ಕಾರಣ?
ಉ: ಜೇಟ್ಲಿ ಬಗ್ಗೆ ನನ್ನಲ್ಲಿ ಕೆಲ ಪ್ರಬಲ ಅಭಿಪ್ರಾಯಗಳಿವೆ. ಆದರೆ ಅವರ ಬಗ್ಗೆ ಯಾವುದೇ ಒಳ್ಳೆಯ ಅಭಿಪ್ರಾಯಗಳಿಲ್ಲ.
* ಅಂದರೆ ಎಂಥದ್ದು?
ಉ: ಪಾಟಿ ಸವಾಲಿನವರೆಗೆ ಕಾಯಿರಿ. ಅದನ್ನು ನಾನು ಹೇಳಬಯಸುವುದಿಲ್ಲ. ಏಕೆಂದರೆ ಅವರು ನ್ಯಾಯಾಲಯಕ್ಕೆ ಪೂರ್ಣ ತಯಾರಿಯೊಂದಿಗೆ ಬರುವುದು ನನಗೆ ಬೇಕಿಲ್ಲ. ಅವರ ಬಗ್ಗೆ ಹಲವು ಅಂಶಗಳು ನನಗೆ ತಿಳಿದಿವೆ ಎಂಬ ಅರಿವು ಅವರಿಗಿದೆ.
* ಮತ್ತೆ, ಹೇಗಿರುವಂಥದ್ದು?
ಉ: ನಿಮಗೆ ಒಂದು ನಿದರ್ಶನ ಹೇಳುತ್ತೇನೆ. 2014ರ ಚುನಾವಣೆ ಪ್ರಚಾರದುದ್ದಕ್ಕೂ, ಪ್ರಧಾನಿ ನರೇಂದ್ರ ಮೋದಿಯವರು ಕಪ್ಪುಹಣದ ವಿರುದ್ಧ ಪ್ರಭಾವಿ ವಾದ ಮಂಡಿಸಿದರು. ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಹಣವೇ ಸುಮಾರು 1,500 ಶತಕೋಟಿ ಡಾಲರ್ ಅಥವಾ 90 ಲಕ್ಷ ಕೋಟಿ ರೂಪಾಯಿ ಹಣವನ್ನು ದೇಶದಿಂದ ಹೊರಗಿದೆ ಎನ್ನುವ ವರದಿಯನ್ನು ಕಾರ್ಯಪಡೆ ನೀಡಿದೆ. ಜರ್ಮನ್ನರು ಭಾರತೀಯರಿಗಿಂತ ಹೆಚ್ಚು ಭ್ರಷ್ಟರು ಎಂದು ನನಗೆ ಅನಿಸುವುದಿಲ್ಲ. ಅಷ್ಟಾಗಿಯೂ ಅವರು ಲಿಚ್‌ಟೈನ್‌ಸ್ಟೀನ್ ಬ್ಯಾಂಕಿಗೆ 1,400 ಹೆಸರುಗಳ ಪಟ್ಟಿ ಪಡೆಯಲು 475 ದಶಲಕ್ಷ ಡಾಲರ್ ನೀಡಿದರು. ಬಹುತೇಕ ಹೆಸರುಗಳು ಭಾರತೀಯರದ್ದು ಎನ್ನುವುದನ್ನು ಸ್ವಿಸ್ ಬ್ಯಾಂಕರ್ಸ್ ಅಸೋಸಿಯೇಶನ್ ಕೂಡಾ ಘೋಷಿಸಿದೆ. ಯಾವುದೇ ಸ್ನೇಹಿ ಸರಕಾರಗಳ ಜತೆ ಈ ಹೆಸರುಗಳನ್ನು ಉಚಿತವಾಗಿ ಮತ್ತು ಷರತ್ತು ರಹಿತವಾಗಿ ಹಂಚಿಕೊಳ್ಳಲು ಸಿದ್ಧ ಎಂದು ಜರ್ಮನಿ ಸರಕಾರ ಅಧಿಕೃತವಾಗಿ ಘೋಷಿಸಿದೆ. ಸರಕಾರಕ್ಕೆ ಭ್ರಷ್ಟಾಚಾರ ಅಂತ್ಯಗೊಳಿಸುವ ಇಚ್ಛೆ ಇದೆಯೇ ಎಂದು ನಾನು ಕೇಳಬಯಸುತ್ತೇನೆ.
* ಅದು ಯುಪಿಎ ಸರಕಾರದ ಅಧಿಕಾರಾವಧಿಯಲ್ಲಿ ಅಲ್ಲವೇ?
ಉ: ಹೌದು. ಯುಪಿಎ ಸರಕಾರ ಏನೂ ಮಾಡಲಿಲ್ಲ. ಆ ಕಾರಣದಿಂದ ಜನ ಅದನ್ನು ಕಿತ್ತೆಸೆದರು. ಆದರೆ ವಿರೋಧ ಪಕ್ಷದ ಮುಖಂಡರು ಏನು ಮಾಡುತ್ತಿದ್ದರು? ಅವರಿಗೆ ಆಸಕ್ತಿ ಇರಲಿಲ್ಲವೇ? ಅಧಿಕಾರಕ್ಕೆ ಬಂದ ಬಳಿಕವೂ, ಜರ್ಮನಿಗೆ ಮೋದಿ ಭೇಟಿ ನೀಡಿದರು; ಜರ್ಮನಿಯ ಚಾನ್ಸ್‌ಲರ್ ಇಲ್ಲಿಗೆ ಬಂದರು. ಆದರೂ ಹೆಸರುಗಳ ಪಟ್ಟಿಗಾಗಿ ಅವರು ಜರ್ಮನಿಗೆ ಮನವಿ ಮಾಡಲಿಲ್ಲ. ಅವರು ಹೆಸರು ಕೇಳದಿರಲು ವಾಸ್ತವ ಕಾರಣವೆಂದರೆ, ಅವರಿಗೆ ಬಹುತೇಕ ಹೆಸರುಗಳು ತಿಳಿದಿವೆ. ಅದನ್ನು ಬಹಿರಂಗಪಡಿಸಲು ಇಷ್ಟವಿಲ್ಲ. ಅಂದರೆ ಎರಡೂ ಕಡೆಯವರು ಪಟ್ಟಿಯಲ್ಲಿದ್ದಾರೆ ಎಂಬ ಅರ್ಥ.
* ಇಬ್ಬರೂ ಎಂದರೆ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು?
ಉ: ಯುಪಿಎ ಭ್ರಷ್ಟಾಚಾರದ ಕಾರಣದಿಂದ ಎನ್‌ಡಿಎ ಚುನಾವಣೆಯಲ್ಲಿ ಬಹುಮತ ಗಳಿಸಿದ ಬಳಿಕ, ಮೋದಿ ಅವರೇ ನೇಮಕ ಮಾಡಿದ ಬಿಜೆಪಿ ಅಧ್ಯಕ್ಷ (ಅಮಿತ್ ಷಾ) ಭ್ರಷ್ಟಾಚಾರ, ವಿದೇಶದಿಂದ ಕಪ್ಪುಹಣ ವಾಪಸು ತರುವುದು ಮುಂತಾದ ವಿಷಯಗಳ ಬಗೆಗಿನ ಮಾತುಗಳೆಲ್ಲ ಚುನಾವಣಾ ಪ್ರಹಸನದ ಅಂಗ ಎಂದು ಬಹಿರಂಗ ಹೇಳಿಕೆ ನೀಡಿದರು. ಅಂದರೆ ಅವರು ಜನರನ್ನು ಮೋಸ ಮಾಡಿದ್ದಾಗಿ ಅವರೇ ಒಪ್ಪಿಕೊಂಡಂತಾಯಿತು. ಇದು ದೇಶದ ಜನರಿಗೆ ತಪ್ಪೊಪ್ಪಿಗೆ. ಅಂದರೆ ಬಿಜೆಪಿ ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರ ಮತ ಕಸಿದಿದೆ.
ಮೋದಿ ಏನೂ ಹೇಳಿಲ್ಲ. ಹಣಕಾಸು ಸಚಿವರೂ ಏನೂ ಹೇಳಿಲ್ಲ. ಇದು ಏನನ್ನು ಪ್ರದರ್ಶಿಸುತ್ತದೆ? ಅಂದರೆ ಮೋದಿ, ಜೇಟ್ಲಿ ಹಾಗೂ ಷಾ ಮೂವರೂ ಈ ಪಿತೂರಿಯಲ್ಲಿದ್ದಾರೆ ಎನ್ನುವುದನ್ನು ತೋರಿಸುತ್ತದೆ. ಈ ಕಾರಣದಿಂದ ಮೋದಿಯವರ ಕಟ್ಟಾ ಬೆಂಬಲಿಗನಾಗಿದ್ದ ನಾನು ಈಗ ಮೋದಿಯವರ ಟೀಕಾಕಾರನಾಗಿದ್ದೇನೆ.