ಇರಾನ್ ಜೊತೆಗಿನ ಸಂಬಂಧ ಕಡಿದುಕೊಂಡ ಸೌದಿ ಅರೇಬಿಯ
ಇರಾನ್ ರಾಯಭಾರಿಗಳಿಗೆ 48 ತಾಸುಗಳ ಗಡುವು
ರಿಯಾದ್, ಜ.4: ಇರಾನ್ ಜೊತೆಗಿನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳಲು ನಿರ್ಧರಿಸಿರುವ ಸೌದಿ ಅರೇಬಿಯ, ಮುಂದಿನ 48 ತಾಸುಗಳ ಅವಧಿಯಲ್ಲಿ ಇರಾನ್‌ನ ಎಲ್ಲ ರಾಜತಾಂತ್ರಿಕ ಪ್ರತಿನಿಧಿಗಳು ರಾಷ್ಟ್ರ ತೊರೆಯುವಂತೆ ಆದೇಶಿಸಿದೆ.
ಶಿಯಾ ಧರ್ಮಗುರು ಶೇಖ್ ನಿಮ್ರ್ ಅಲ್ ನಿಮ್ರ್ ಹಾಗೂ ಇತರ 46 ಮಂದಿಯನ್ನು ಸೌದಿ ಅರೇಬಿಯ ಮರಣದಂಡನೆಗೆ ಗುರಿಪಡಿಸಿರುವುದನ್ನು ಖಂಡಿಸಿ ರವಿವಾರ ಇರಾನ್‌ನಲ್ಲಿರುವ ಸೌದಿ ದೂತಾವಾಸ ಕಚೇರಿಯ ಮೇಲೆ ಪ್ರತಿಭಟನಕಾರರು ಮುತ್ತಿಗೆ ಹಾಕಿ ಬೆಂಕಿ ಹಚ್ಚಲು ಯತ್ನಿಸಿದ್ದರು.
ಅಲ್ ಖಾಯಿದಾ ಸಂಘಟನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಇರಾನ್ ಬೆಂಬಲ ನೀಡುತ್ತಿದೆ ಎಂಬುದಾಗಿಯೂ ಸೌದಿ ಅರೇಬಿಯ ದೂರಿದೆ.
ಇರಾನ್‌ನಲ್ಲಿರುವ ಸೌದಿ ದೂತಾವಾಸದ ಮೇಲೆ ಇರಾನ್‌ನ ಪ್ರತಿಭಟನಕಾರರು ದಾಳಿ ನಡೆಸಿರುವುದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮಾಹಿತಿಯಿಂದ ತಿಳಿದು ಬಂತು ಎಂದಿರುವ ಸೌದಿಯ ವಿದೇಶಾಂಗ ಸಚಿವ ಆದಿಲ್ ಅಲ್ ಝುಬೈರ್, ಎಲ್ಲ ಸೌದಿ ರಾಯಭಾರಿಗಳು ಸುರಕ್ಷಿತವಾಗಿ ದುಬೈ ತಲುಪಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು ಇರಾನ್‌ನ ಪ್ರತಿಭಟನಕಾರರು ಅಮೆರಿಕ ಹಾಗೂ ಬ್ರಿಟನ್ ರಾಯಭಾರ ಕಚೇರಿಗಳ ಮೇಲೂ ದಾಳಿ ನಡೆಸಿರುವುದನ್ನು ಉದಾಹರಿಸಿರುವ ಸೌದಿಯ ವಿದೇಶಾಂಗ ಸಚಿವರು, ಇರಾನ್‌ನ ಈ ಕ್ರಮವು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ.
ಈ ನಡುವೆ ಶಿಯಾ ಧರ್ಮಗುರುವನ್ನು ಮರಣದಂಡನೆಗೆ ಒಳಪಡಿಸಿರುವ ಸೌದಿಯ ಕ್ರಮವು ಅಮಾನವೀಯ ಎಂದು ಇರಾನ್‌ನ ಅಧ್ಯಕ್ಷ ಹಸನ್ ರೂಹಾನಿ ವಿಶ್ಲೇಷಿಸಿದ್ದಾರೆ.
ಶಿಯಾ ಧರ್ಮಗುರುವನ್ನು ಮರಣದಂಡನೆಗೊಳಪಡಿಸಿರುವ ಸೌದಿಯ ಮಹಾ ಪ್ರಮಾದವನ್ನು ಕಡೆಗಣಿಸಲಾಗದು ಎಂದು ಅವರನ್ನು ಉಲ್ಲೇಖಿಸಿ ‘ಇರ್ನಾ’ ವರದಿ ಮಾಡಿದೆ.
ಸಂಬಂಧ ಕಡಿತ: ಬಹರೈನ್
ಮನಾಮ, ಜ.4: ಶಿಯಾ ಮುಖಂಡನನ್ನು ಮರಣದಂಡನೆಗೆ ಒಳಪಡಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ಉಂಟಾಗಿರುವ ರಾಜಕೀಯ ಬೆಳವಣಿಗೆಯಲ್ಲಿ ಇರಾನ್‌ನೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದು ಕೊಂಡಿರುವ ಸೌದಿ ಅರೇಬಿ ಯದ ಕ್ರಮವನ್ನು ತಾನು ಕೂಡಾ ಅನುಸರಿಸಲಿರುವುದಾಗಿ ಬಹರೈನ್ ಸೋಮವಾರ ತಿಳಿಸಿದೆ.
ಸೌದಿ ಅರೇಬಿಯವು ತನ್ನ ಮಿತ್ರರಾಷ್ಟ್ರವಾಗಿರುವ ಹಿನ್ನೆಲೆಯಲ್ಲಿ ಅದು ಇರಾನ್ ಕುರಿತು ತಳೆದಿರುವ ನಿರ್ಧಾರವನ್ನು ತಾನು ಅನುಸರಿಸುತ್ತಿರುವುದಾಗಿ ಬಹರೈನ್ ತಿಳಿಸಿದೆ. ಮುಂದಿನ 48 ಗಂಟೆಗಳ ಅವಧಿಯಲ್ಲಿ ರಾಷ್ಟ್ರವನ್ನು ತೊರೆಯುವಂತೆ ಇರಾನ್‌ನ ರಾಜತಾಂತ್ರಿಕರಿಗೆ ಮನಾಮ ಆದೇಶಿಸಿದೆ.
ಇರಾನ್‌ನಲ್ಲಿರುವ ಸೌದಿ ಅರೇಬಿಯದ ದೂತಾವಾಸ ಕಚೇರಿಯ ಮೇಲೆ ನಡೆದಿರುವ ದಾಳಿ ಮತ್ತು ಗಲ್ಫ್ ಹಾಗೂ ಅರಬ್ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಇರಾನ್ ಅನಗತ್ಯ ಮಧ್ಯಪ್ರವೇಶಕ್ಕೆ ತೀಕ್ಷ್ಣ ಪ್ರತಿಕ್ರಿಯೆಯಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಬಿಎನ್‌ಎ ವರದಿ ಮಾಡಿದೆ.
ಯಮನ್: ಸೌದಿ ಬೆಂಬಲಿಗರಿಂದ ಶೆಲ್ ದಾಳಿ
ರಿಯಾದ್, ಜ.4: ನೈಋತ್ಯ ಯಮನ್‌ನ ತಯೀಝ್ ಪ್ರಾಂತದಲ್ಲಿ ಮಾನವೀಯ ನೆರವು ತಂಡಗಳನ್ನು ಗುರಿಯಾಗಿಸಿ ಸೋಮವಾರ ಸೌದಿ ಬೆಂಬಲಿಗರು ಶೆಲ್ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ತಯೀಝ್‌ನ ದಹಿ ಜಿಲ್ಲೆಯಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಓರ್ವ ನಾಗರಿಕ ಗಾಯಗೊಂಡಿರುವುದಾಗಿ ಸ್ಥಳೀಯ ಮಾಧ್ಯಮ ವರದಿಯೊಂದು ತಿಳಿಸಿದೆ.
ತಯೀಝ್ ಪ್ರಾಂತದ ಹಬಿಲ್ ಸಲ್ಮಾನ್ ಜಿಲ್ಲೆಯತ್ತ ಸಾಗುತ್ತಿದ್ದ ಮಾನವೀಯ ನೆರವು ತಂಡವನ್ನು ಸೌದಿ ಬೆಂಬಲಿಗರು ತಡೆದಿರುವುದಾಗಿ ವರದಿ ವಿವರಿಸಿದೆ.
ಯಮನ್‌ನಲ್ಲಿ ಹೌದಿ ಬಂಡು ಕೋರರನ್ನು ಗುರಿಯಾಗಿಸಿ ಈಗಾಗಲೇ ಸೌದಿ ನೇತೃತ್ವದ ಪಡೆಗಳು ವೈಮಾನಿಕ ದಾಳಿ ನಡೆಸುತ್ತಿವೆ.
ಸೌದಿಯಿಂದ ವ್ಯೆಹಾತ್ಮಕ ಪ್ರಮಾದ: ಇರಾನ್
ಟೆಹರಾನ್, ಜ.4: ಪ್ರಮುಖ ಶಿಯಾ ವಿದ್ವಾಂಸರೊಬ್ಬರನ್ನು ಮರಣದಂಡನೆಗೊಳಪಡಿಸಿರುವುದು ಸೌದಿ ಅರೇಬಿಯ ಮಾಡಿರುವ ಒಂದು ‘ವ್ಯೆಹಾತ್ಮಕ ಪ್ರಮಾದ’ವಾಗಿದ್ದು, ದ್ವಿಪಕ್ಷೀಯ ಸಂಬಂಧಗಳನ್ನು ಕಡಿದುಕೊಳ್ಳುವುದರಿಂದ ಇದನ್ನು ಸರಿಪಡಿಸಲಾಗದು ಎಂದು ಇರಾನ್‌ನ ಉಪ ವಿದೇಶಾಂಗ ಸಚಿವ ಹುಸೈನ್ ಆಮಿರ್ ಅಬ್ದುಲ್ಲಾ ಅಭಿಪ್ರಾಯಿಸಿದ್ದಾರೆ.
ಸೌದಿ ಅರೇಬಿಯವು ಮಧ್ಯಪ್ರಾಚ್ಯದಲ್ಲಿ ಭಯೋತ್ಪಾದನೆ ಹಾಗೂ ತೀವ್ರಗಾಮಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿದೆ ಎಂದವರು ಆರೋಪಿಸಿದ್ದಾರೆ.
ಇರಾನ್‌ನ ಸುದ್ದಿವಾಹಿನಿಯೊಂದರಲ್ಲಿ ಬಿತ್ತರಗೊಂಡ ಹೇಳಿಕೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿಯಾ ವಿದ್ವಾಂಸರೊಬ್ಬರನ್ನು ಮರಣದಂಡನೆ ಗೊಳಪಡಿಸಿರುವುದು ಮಧ್ಯಪ್ರಾಚ್ಯದಲ್ಲಿ ಪ್ರಸಕ್ತ ಸುನ್ನಿ-ಶಿಯಾ ಶಕ್ತಿಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಇನ್ನಷ್ಟು ತೀವ್ರಗೊಳಿಸಲು ಕಾರಣವಾಗಿದೆ ಎಂದವರು ಅಭಿಪ್ರಾಯಿಸಿದ್ದಾರೆ.
ಅಮೆರಿಕ ಮನವಿ
ಉಭಯ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ರಾಜತಾಂತ್ರಿಕ ಮಾತುಕತೆಗಳು ಅತ್ಯಗತ್ಯ ಎಂದಿರುವ ಅಮೆರಿಕ, ಶಾಂತಿಯನ್ನು ಕಾಯ್ದುಕೊಳ್ಳುವಂತೆ ಮನವಿ ಮಾಡಿದೆ.