ದಂತ ಭಾಗ್ಯ ಯೋಜನೆ: ಜ.8ರಂದು ಉಚಿತ ದಂತ ತಪಾಸಣಾ ಶಿಬಿರ
60 ವರ್ಷ ಮೇಲ್ಪಟ್ಟವರಿಗೆ ಉಚಿತ ದಂತ ಪಂಕ್ತಿ
ಮಂಗಳೂರು, ಜ.4: ರಾಜ್ಯ ಸರಕಾರವು ಜಾರಿಗೆ ತಂದಿರುವ ದಂತ ಭಾಗ್ಯ ಯೋಜನೆಯಡಿ ಜ.8ರಂದು ವೆನ್ಲಾಕ್ ಜಿಲ್ಲಾಸ್ಪತ್ರೆ ಯಲ್ಲಿ ಉಚಿತ ದಂತ ತಪಾಸಣಾ ಶಿಬಿರವನ್ನು ಆಯೋಜಿಸಿ ರುವುದಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ರಾಜೇಶ್ವರಿ ದೇವಿ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 60 ವರ್ಷ ಮೇಲ್ಪಟ್ಟ ಬಿಪಿಎಲ್ ವರ್ಗಕ್ಕೆ ಸೇರಿದ ಹಿರಿಯ ನಾಗರಿಕರಿಗೆ ಉಚಿತ ದಂತ ಪಂಕ್ತಿ ಗಳನ್ನು ನೀಡಲಾಗುವುದು. ಶಿಬಿರದಲ್ಲಿ ಹಾಜರಾಗಿ, ತಪಾಸಣೆಗೊಳಪಟ್ಟು ದಂತ ಪಂಕ್ತಿ ಪಡೆಯಲು ಅರ್ಹರಾಗಿದ್ದಲ್ಲಿ ಹೆಸರು ನೋಂದಾ ಯಿಸಿ ವೈದ್ಯರ ಸಲಹೆಯಂತೆ ಅವರು ನಿಗದಿಪಡಿಸಿದ ದಿನ ಗಳಂದು ಸಂಬಂಧಿತ ದಂತ ವೈದ್ಯ ಕಾಲೇಜಿಗೆ ಹಾಜರಾಗಿ ದಂತ ಪಂಕ್ತಿ ಪಡೆಯಬಹುದು ಎಂದು ಅವರು ಹೇಳಿದರು. ದಂತ ಭಾಗ್ಯ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 46 ಖಾಸಗಿ ಕಾಲೇಜುಗಳು ಈ ಸಂಬಂಧ ಸರಕಾರದ ಜತೆ ಒಡಂಬಡಿಕೆ ಮಾಡಿಕೊಂಡಿವೆ. ದ.ಕ. ಜಿಲ್ಲೆಯ ಶ್ರೀನಿವಾಸ್ ಡೆಂಟಲ್ ಕಾಲೇಜು, ಎಜೆ ಶೆಟ್ಟಿ ಡೆಂಟಲ್ ಕಾಲೇಜು, ಎ.ಬಿ. ಶೆಟ್ಟಿ, ದಂತ ಕಾಲೇಜು, ಕೆಎಂಸಿ ಅತ್ತಾವರ ಹಾಗೂ ಯೆನೆಪೊಯ ದಂತ ಕಾಲೇಜುಗಳಲ್ಲಿ ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ದ.ಕ. ಜಿಲ್ಲೆಯಲ್ಲಿ ಯೆನೆಪೊಯ ದಂತ ಕಾಲೇಜಿನ ಸಹಭಾ ಗಿತ್ವದಲ್ಲಿ ವೆನ್ಲಾಕ್‌ನಲ್ಲಿ ಈ ಶಿಬಿರ ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದೆ. ಶಿಬಿರದಲ್ಲಿ ಅರ್ಹ ಫಲಾನು ಭವಿಗಳನ್ನು ತಪಾಸಣೆಗೊಳಪಡಿಸಿ 15 ದಿನಗಳೊಳಗೆ ಐದು ಪ್ರಕ್ರಿಯೆಗಳ ಮೂಲಕ ದಂತ ಪಂಕ್ತಿ ವಿತರಿಸಲಾಗುವುದು ಎಂದು ಯೋಜನೆಯ ಅಧ್ಯಕ್ಷ ಹಾಗೂ ಯೆನೆಪೊಯ ದಂತ ಕಾಲೇಜಿನ ಪ್ರೊ.ಡಾ.ಗಣೇಶ್ ಶೆಣೈ ಪಂಚಮಹಲ್ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ದಂತ ಭಾಗ್ಯ ಯೋಜನೆಯ ನೋಡಲ್ ಅಧಿಕಾರಿ ಡಾ. ಲವೀನಾ ಜೆ.ನರೊನ್ಹಾರನ್ನು (9242838922) ಸಂಪರ್ಕಿಬಹುದು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್, ಡಾ. ಸಿಕಂದರ್ ಪಾಶಾ ಮೊದಲಾದವರು ಉಪಸ್ಥಿತರಿದ್ದರು.





