ಅಫ್ಘಾನ್: ಭಾರತೀಯ ದೂತಾವಾಸದ ಬಳಿ ಗುಂಡಿನ ಕಾಳಗ

ಎಲ್ಲ ಭಾರತೀಯರು ಸುರಕ್ಷಿತ
ಕಾಬೂಲ್, ಜ.4: ಅಫ್ಘಾನಿಸ್ತಾನದಲ್ಲಿರುವ ಭಾರತೀಯ ದೂತಾವಾಸ ಕಚೇರಿಯ ಬಳಿ ಸೋಮವಾರವೂ ಉಗ್ರರ ದಾಳಿ ಮುಂದುವರಿದಿದ್ದು, ಭದ್ರತಾ ಪಡೆಗಳು ಅದರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಬಾಲ್ಖ್ ಪ್ರಾಂತದ ಮುಖ್ಯ ಪಟ್ಟಣ ಮಝರ್-ಇ-ಶರೀಫ್‌ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ಎದುರಿನಲ್ಲಿರುವ ಕಟ್ಟಡವೊಂದರಿಂದ ಉಗ್ರರು ಗುಂಡಿನ ದಾಳಿ ನಡೆಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಉಗ್ರರು ಹಾಗೂ ರಕ್ಷಣಾ ಪಡೆಗಳ ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 8ರಿಂದ 12 ಮಂದಿ ದಾಳಿಕಾರರು ಕಟ್ಟಡಗೊಳಗಿನಿಂದ ಗುಂಡು ಹಾರಿಸುತ್ತಿದ್ದು, ಇದುವರೆಗೆ ಓರ್ವ ಉಗ್ರನನ್ನು ಹತ್ಯೆಗೈಯಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
ಭಾರತೀಯ ದೂತಾವಾಸ ಕಚೇರಿಯ ಉಸ್ತುವಾರಿ ವಹಿಸಿರುವ ಇಂಡೋ-ಟಿಬೆಟನ್ ಬಾರ್ಡರ್ ಫೋರ್ಸಸ್‌ನ ಹಿರಿಯ ಅಧಿಕಾರಿಗಳ ಪ್ರಕಾರ, ಮಝರ್-ಇ-ಶರೀಫ್‌ನಲ್ಲಿ ಗುಂಡಿನ ಕಾಳಗ ಮುಂದುವರಿದಿದೆ.
ದೂತಾವಾಸ ಕಚೇರಿಯ ಎಲ್ಲ ಸಿಬ್ಬಂದಿ ಸುರಕ್ಷಿತವಾಗಿರುವುದಾಗಿ ಈ ನಡುವೆ ಹೇಳಿಕೆಯೊಂದನ್ನು ನೀಡಿರುವ ಅಫ್ಘಾನಿಸ್ತಾನಕ್ಕೆ ಭಾರತದ ರಾಯಭಾರಿಯಾಗಿರುವ ಅಮರ್ ಸಿನ್ಹಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.